ಆಯುರ್ವೇದ ಉಳಿಸಿ, ಬೆಳೆಸಲು ಕೇಂದ್ರ ಸರ್ಕಾರ ಬದ್ಧ: ಸಚಿವ ಪ್ರಹ್ಲಾದ ಜೋಶಿ

KannadaprabhaNewsNetwork | Published : Sep 30, 2024 1:20 AM

ಸಾರಾಂಶ

2014ರಲ್ಲಿ ಆಯುರ್ವೇದಕ್ಕೆ ಅಷ್ಟು ಮಹತ್ವ ಇರಲಿಲ್ಲ. ಆಯುರ್ವೇದ ಔಷಧ ಕೇವಲ ₹24,000 ಕೋಟಿ ವಹಿವಾಟು ಆಗುತ್ತಿತ್ತು. ಇದೀಗ ₹1.40 ಲಕ್ಷ ಕೋಟಿಗೆ ತಲುಪಿದೆ. ಬಜೆಟ್‌ನಲ್ಲಿ ₹500 ಕೋಟಿ ಬದಲು ₹3000 ಕೋಟಿ ನೀಡಲಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಹುಬ್ಬಳ್ಳಿ: ಪ್ರಾಚೀನ ಸಂಸ್ಕೃತಿ ಮತ್ತು ಔಷಧ ಪದ್ಧತಿಯಾಗಿರುವ ಆಯುರ್ವೇದವನ್ನು ಕೇಂದ್ರ ಸರ್ಕಾರ ಪ್ರೋತ್ಸಾಹಿಸಿದ ಹಿನ್ನೆಲೆಯಲ್ಲಿ ಇಂದು ಭಾರತದ ಆಯುರ್ವೇದ ಜಗತ್ತಿನಾದ್ಯಂತ ಪ್ರಾಮುಖ್ಯತೆ ಪಡೆದಿದೆ. ಇದರ ಉಳಿವಿಗೆ ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಇಲ್ಲಿನ ಬಿವಿಬಿ ಕಾಲೇಜಿನ ಕೆಎಲ್‌ಇ ಟೆಕ್‌ ಆಡಿಟೋರಿಯಂನಲ್ಲಿ ಆಯುರ್ವೇದ ಸೇವಾ ಸಮಿತಿಯ ಆಯುರ್ವೇದ ಮಹಾವಿದ್ಯಾಲಯ ಹಾಗೂ ಆಸ್ಪತ್ರೆ ವತಿಯಿಂದ ಭಾನುವಾರ ಆಯೋಜಿಸಿದ್ದ ಸೆಟೆಲೈಟ್ ನ್ಯಾಷನಲ್ ಸೆಮಿನಾರ್ ಉದ್ಘಾಟಿಸಿ ಮಾತನಾಡಿದರು.₹1.40 ಲಕ್ಷ ಕೋಟಿ ವಹಿವಾಟು:

ಕೇಂದ್ರ ಆಯುಷ್ ಸಚಿವಾಲಯ ಆಯುರ್ವೇದದ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಜಾಗೃತಿ ಮೂಡಿಸುತ್ತಿದೆ. 2014ರಲ್ಲಿ ಆಯುರ್ವೇದಕ್ಕೆ ಅಷ್ಟು ಮಹತ್ವ ಇರಲಿಲ್ಲ. ಆಯುರ್ವೇದ ಔಷಧ ಕೇವಲ ₹24,000 ಕೋಟಿ ವಹಿವಾಟು ಆಗುತ್ತಿತ್ತು. ಇದೀಗ ₹1.40 ಲಕ್ಷ ಕೋಟಿಗೆ ತಲುಪಿದೆ. ಬಜೆಟ್‌ನಲ್ಲಿ ₹500 ಕೋಟಿ ಬದಲು ₹3000 ಕೋಟಿ ನೀಡಲಾಗಿದೆ ಎಂದರು.

ಕೇಂದ್ರ ಆಯುಷ್ ಸಚಿವಾಲಯದ ಆಶ್ರಯದಲ್ಲಿ ಮುಂಬರುವ ಡಿಸೆಂಬರ್ 12ರಿಂದ 15ರ ವರೆಗೆ ಉತ್ತರಾಖಂಡದ ಡೆಹರಾಡೂನ್‌ನಲ್ಲಿ 10ನೇ ವಿಶ್ವ ಆಯುರ್ವೇದ ಕಾಂಗ್ರೆಸ್ ಆ್ಯಂಡ್ ಹೆಲ್ತ್ ಎಕ್ಸ್‌ಪೋ ಆಯೋಜಿಸಲಾಗುತ್ತಿದೆ. ಇದರಲ್ಲಿ 50 ರಾಷ್ಟ್ರಗಳು, 5000 ಆಯುರ್ವೇದ ತಜ್ಞರು ಭಾಗವಹಿಸಲಿದ್ದಾರೆ. ಇದರ ಭಾಗವಾಗಿ ದೇಶದೆಲ್ಲೆಡೆ 20 ಸೆಟೆಲೈಟ್ ಸೆಮಿನಾರ್ ನಡೆಸಲಾಗುತ್ತಿದ್ದು, ಇಂದಿನ ಕಾರ್ಯಕ್ರಮವೂ ಇದರ ಭಾಗವಾಗಿದೆ ಎಂದರು.

ಡಾ. ಮಾಧವ ದಿಗ್ಗಾವಿ, ಡಾ. ಎಸ್.ವಿ. ಹಿರೇಮಠ, ಡಾ. ದತ್ತಾ ನಾಡಗಿರ, ಡಾ. ಎಲ್.ಎನ್. ಶೆಣೈ, ಡಾ. ಸೌರಭ ಎಸ್.ಕೆ, ಡಾ. ಪ್ರಮೋದ ಕಟ್ಟಿ ಅವರು ವಿವಿಧ ವಿಷಯಗಳ ಕುರಿತು ಉಪನ್ಯಾಸ ನೀಡಿದರು. ಡಾ. ಸೂರಜ್ ಕಂಬಾರ ಅವರು ಆಯುರ್ವೇದ ಕುರಿತು ಉಪನ್ಯಾಸ ನೀಡಿದರು.

ಈ ಸಂದರ್ಭದಲ್ಲಿ ಹುಬ್ಬಳ್ಳಿ ಆಯುರ್ವೇದ ಸೇವಾ ಸಮಿತಿ ಅಧ್ಯಕ್ಷ ಗೋವಿಂದ ಜೋಶಿ, ಕಾರ್ಯದರ್ಶಿ ಸಂಜೀವ ಜೋಶಿ, ಆಯುರ್ವೇದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎ.ಎಸ್. ಪ್ರಶಾಂತ, ಪ್ರಮುಖರಾದ ಡಾ. ಜೆ.ಆರ್. ಜೋಶಿ, ಡಾ. ಪ್ರಮೋದ ಕಟ್ಟಿ, ಡಾ. ಮಹೇಶ ಸಾಲಿಮಠ, ಡಾ. ಎಸ್.ಎ. ಪಾಟೀಲ, ಡಾ. ಮಂಜುನಾಥ ನಾಯ್ಕ ಇತರರು ಉಪಸ್ಥಿತರಿದ್ದರು.

Share this article