ಕನ್ನಡಪ್ರಭ ವಾರ್ತೆ ರಿಪ್ಪನ್‍ಪೇಟೆ
ರಿಪ್ಪನ್‍ಪೇಟೆ ಸಮೀಪದ ಹರತಾಳು ಗ್ರಾಮದಲ್ಲಿ ನೂತನ ಗ್ರಾಮ ಪಂಚಾಯಿತಿ ಕಟ್ಟಡದ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಕೇಂದ್ರ ಸರ್ಕಾರ ಕಳೆದ ಎರಡುವರೆ ವರ್ಷದಿಂದ ಉದ್ಯೋಗಖಾತ್ರಿ ಯೋಜನೆಯ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡಿಲ್ಲ. ನಿರುದ್ಯೋಗಿಗಳಿಗೆ, ಬಡ ಕೂಲಿಕಾರ್ಮಿರಿಗೆ ವರದಾನವಾಗಿದ್ದ ಉದ್ಯೋಗ ಖಾತ್ರಿ ಯೋಜನೆಗೆ ಕೇಂದ್ರ ಸರ್ಕಾರ ಕಳೆದ ಎರಡುವರೆ ವರ್ಷದಿಂದ ಹಣ ಬಿಡುಗಡೆ ಮಾಡದೇ ಇರುವುದರಿಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಖಾತ್ರಿ ಕಾಮಗಾರಿ ಪೂರ್ಣವಾಗದೆ ಅಭಿವೃದ್ಧಿ ಕುಂಠಿತಗೊಳ್ಳುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಬಹುವರ್ಷದ ಬೇಡಿಕೆಯಾದ ಹರತಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಂಜುವಳ್ಳಿ ಮುಖ್ಯರಸ್ತೆಯಿಂದ ಲಿಂಗನಕೊಪ್ಪ ಸಂಪರ್ಕ ರಿಪ್ಪನ್‍ಪೇಟೆಯಿಂದ ಏರಿಸೀಮೆ ಮುಖ್ಯಸಂಪರ್ಕ ರಸ್ತೆಗೆ ಸರ್ಕಾರದಿಂದ ಆನುದಾನ ಬಿಡುಗಡೆಮಾಡಿಸುವ ಮೂಲಕ ಕಾಮಗಾರಿಗೆ ಇಂದು ಗುದ್ದಲಿ ಪೂಜೆಯೊಂದಿಗೆ ಚಾಲನೆ ನೀಡಲಾಗಿದ್ದು, ಇನ್ನೂ ಹೆಚ್ಚುವರಿ ರಸ್ತೆ ಆಭಿವೃದ್ಧಿಗೆ ಅನುದಾನವನ್ನು ಮಾರ್ಚ್ ಅಂತ್ಯದೊಳಗೆ ಬಿಡುಗಡೆಗೊಳಿಸಿ ರಸ್ತೆ ಆಭಿವೃದ್ಧಿ ಪಡಿಸುವುದಾಗಿ ಭರವಸೆ ನೀಡಿದರು.ನಾನು ಈ ಹಿಂದೆ ಕ್ಷೇತ್ರದ ಶಾಸಕನಾಗಿದ್ದ ಆವಧಿಯಲ್ಲಿ ಹರತಾಳು ಗ್ರಾಮ ಪಂಚಾಯಿತಿ ಕಟ್ಟಡ ಮಾಡಿ ಉದ್ಘಾಟಿಸಲಾಗಿತ್ತು. ಆ ಕಟ್ಟಡ ಚಿಕ್ಕದಾಗಿದ್ದು, ಈಗ ಸುವ್ಯವಸ್ಥಿತ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಲಾಗಿ ಅದಷ್ಟು ಬೇಗ ಪೂರ್ಣಗೊಳಿಸುವಂತೆ ಗುತ್ತಿಗೆದಾರನಿಗೆ ಸೂಚಿಸಿದರು.
ಹರತಾಳು ಗ್ರಾಪಂ ಅಧ್ಯಕ್ಷೆ ನಾಗರತ್ನ ವಾಸುದೇವ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಬಗರ್‌ಹುಕುಂ ಸಮಿತಿ ಸದಸ್ಯೆ ಸಾಕಮ್ಮ ಮನೋಹರ ಪ್ರಾಸ್ತಾವಿಕವಾಗಿ ಮಾತನಾಡಿ, ಕ್ಷೇತ್ರದ ಶಾಸಕ ಬೇಳೂರು ಬಡವರ ಆಶಾಕಿರಣ, ದೀನದಲಿತರ ನಾಯಕ ಬಂಗಾರಪ್ಪಾಜಿಯವರಂತೆ ಸದಾ ಬಡವರ ಶ್ರಯೋಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿದ್ದಾರೆ. ಸರ್ಕಾರದ ಗ್ಯಾರಂಟಿ ಯೋಜನೆಯಾದ ಶಕ್ತಿ ಯೋಜನೆಯಡಿ ನಮ್ಮೂರಿನ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಸರ್ಕಾರಿ ಬಸ್ ಸೌಲಭ್ಯ ಕಲ್ಪಿಸಿದ್ದಾರೆ ಎಂದರು.ಹೊಸನಗರ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಮೌಳಿಗೌಡರು, ಹರತಾಳು ಗ್ರಾಮದ ಹಿರಿಯ ಮುಖಂಡ ಜಯಶೀಲಗೌಡರು, ಹೊಸನಗರ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಚಿದಂಬರ್, ಉಪಾಧ್ಯಕ್ಷ ಕಣಕಿ ನಾರಾಯಣಪ್ಪ, ಗ್ರಾಮ ಪಂಚಾಯಿತಿ ಸದಸ್ಯ ಶಿವಕುಮಾರ್, ನಾ.ರಿ.ರವಿ, ಸತ್ಯವತಿ, ಹರಿದ್ರಾವತಿ ಗ್ರಾಪಂ ಸದಸ್ಯ ಮಳವಳ್ಳಿ ಸಂತೋಷ್, ತಹಸೀಲ್ದಾರ್ ಭರತರಾಜ ಕೆ.ಎನ್, ಸ್ವಸಹಾಯ ಸಂಘಗಳ ಮಹಿಳಾ ಒಕ್ಕೂಟದ ಅಧ್ಯಕ್ಷೆ ಮಂಜುಳ ಹಾಜರಿದ್ದರು.