ಲಿಂಗರಾಜು ಕೋರಾಕನ್ನಡಪ್ರಭ ವಾರ್ತೆ ಬೆಂಗಳೂರು
ಕೇಂದ್ರದ ಈ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪೋಷಕರ ವಲಯದಲ್ಲಿ 1ನೇ ತರಗತಿ ಪ್ರವೇಶಾತಿಗೆ ಸಂಬಂಧಿಸಿದ ವಯೋಮಿತಿ ಸಂಬಂಧ ಮತ್ತೆ ಗೊಂದಲ ಸೃಷ್ಟಿಸಿದೆ. ಕೇಂದ್ರದಿಂದ ಪತ್ರ ಬಂದು 10 ದಿನ ಕಳೆದರೂ ರಾಜ್ಯ ಶಿಕ್ಷಣ ಇಲಾಖೆಯು ಈ ಬಗ್ಗೆ ಪೋಷಕರಿಗೆ ಯಾವುದೇ ಸ್ಪಷ್ಟನೆ ನೀಡದಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ಷೇಪ, ಅಸಮಾಧಾನ ವ್ಯಕ್ತವಾಗಿದೆ.
ಕೇಂದ್ರ ಸರ್ಕಾರ ಕೆಲ ದಿನಗಳ ಹಿಂದೆ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಶಿಕ್ಷಣ ಇಲಾಖೆಗಳಿಗೆ ಪತ್ರ ಕಳುಹಿಸಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ (ಎನ್‌ಇಪಿ) ಜೊತೆ ವಯಸ್ಸನ್ನು ಹೊಂದಿಸಲು 1ನೇ ತರಗತಿಗೆ ಪ್ರವೇಶ ಪಡೆಯುವ ಮಕ್ಕಳ ವಯಸ್ಸು ಆರು ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟಿರಬೇಕು ಎಂಬ ನಿಯಮವನ್ನು ಮುಂಬರುವ ಶೈಕ್ಷಣಿಕ ಸಾಲಿನಿಂದಲೇ ಜಾರಿಗೊಳಿಸುವಂತೆ ಸೂಚಿಸಿದೆ. ಕೇಂದ್ರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವಾಲಯದ ಜಂಟಿ ಕಾರ್ಯದರ್ಶಿ (ಎಸ್‌ಎಸ್.ಐ ಮತ್ತು ಎಇ) ಅರ್ಚನಾ ಶರ್ಮಾ ಅವಸ್ಥಿ ಅವರು ಇದೇ ಫೆ.15ರಂದು ಬರೆದಿರುವ ಪತ್ರ ಕರ್ನಾಟಕ ಸರ್ಕಾರಕ್ಕೆ ಬಂದಿದೆ.ರಾಜ್ಯದಲ್ಲಿ ಎಲ್‌ಕೆಜಿಗೂ ವಯೋಮಿತಿ:
ಅಲ್ಲದೆ, ಎಲ್‌ಕೆಜಿ-ಯುಕೆಜಿಗೆ ಮಕ್ಕಳನ್ನು ದಾಖಲಿಸುವಾಗ ಅವರು 1ನೇ ತರಗತಿಗೆ ಬರುವಾಗ 6 ವರ್ಷ ಪೂರ್ಣಗೊಂಡಿರುವಂತೆ ನೋಡಿಕೊಳ್ಳಲು ಸಮಗ್ರ ಶಿಕ್ಷಣ ಕರ್ನಾಟಕದ ರಾಜ್ಯ ಯೋಜನಾ ನಿರ್ದೇಶಕರು ಕಳೆದ ವರ್ಷದ ಏಪ್ರಿಲ್ 27ರಂದು 2023-24ನೇ ಸಾಲಿನಿಂದ ಎಲ್‌ಕೆಜಿ ತರಗತಿಯ ದಾಖಲಾತಿಗೆ ಆಯಾ ಶೈಕ್ಷಣಿಕ ಸಾಲಿನ ಜೂನ್ 1ನೇ ತಾರೀಖಿಗೆ ಮಗುವಿನ ವಯಸ್ಸು 4 ವರ್ಷ ಪೂರ್ಣಗೊಂಡಿರಬೇಕೆಂದು ಜ್ಞಾಪನ ಪತ್ರ ಹೊರಡಿಸಿದ್ದಾರೆ. ಇನ್ನು ಈ ನಿರ್ದೇಶನವನ್ನು ಪ್ರಶ್ನಿಸಿ ಕೆಲವರು ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರಾದರೂ ಅದನ್ನು ನ್ಯಾಯಾಲಯ ತಿರಸ್ಕರಿಸಿತ್ತು.