ಅಡಕೆ ಬೆಳೆಗಾರರ ಸಹಾಯಧನಕ್ಕೆ ಕೇಂದ್ರ ಒಪ್ಪಿಗೆ: ಸಂಸದ ಬಿ. ವೈ. ರಾಘವೇಂದ್ರ

KannadaprabhaNewsNetwork |  
Published : Aug 07, 2025, 12:45 AM IST
ಶಿವಮೊಗ್ಗ , ಉಡುಪಿ ಜಿಲ್ಲೆಗಳ ಅಭಿವೃದ್ಧಿ ಸಂಬಂಧ ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ ಅವರು ಕೇಂದ್ರ ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಅಭಿವೃದ್ದಿ, ಅಡಕೆ ಬೆಳೆಗಾರರ ಸಹಾಯಧನ ಬಿಡುಗಡೆ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಕ್ಕೆ ತಕ್ಷಣವೇ ಅನುದಾನ ಬಿಡುಗಡೆಗೆ ಸಂಸದ ಬಿ.ವೈ.ರಾಘವೇಂದ್ರ ಸಲ್ಲಿಸಿದ ಮನವಿಗೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಂದಿಸಿದ್ದು ಅನುದಾನ ನೀಡುವ ಭರವಸೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಅಭಿವೃದ್ದಿ, ಅಡಕೆ ಬೆಳೆಗಾರರ ಸಹಾಯಧನ ಬಿಡುಗಡೆ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಕ್ಕೆ ತಕ್ಷಣವೇ ಅನುದಾನ ಬಿಡುಗಡೆಗೆ ಸಂಸದ ಬಿ.ವೈ.ರಾಘವೇಂದ್ರ ಸಲ್ಲಿಸಿದ ಮನವಿಗೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಂದಿಸಿದ್ದು ಅನುದಾನ ನೀಡುವ ಭರವಸೆ ನೀಡಿದ್ದಾರೆ.

ನವದೆಹಲಿಯಲ್ಲಿ ಸಚಿವರನ್ನು ಭೇಟಿ ಮಾಡಿದ ರಾಘವೇಂದ್ರ ಅವರು ರಾಜ್ಯದ ಅಡಕೆ ಬೆಳೆಗಾರರು ಪ್ರಾಯೋಜಿತ ಯೋಜನೆಯಡಿ ಕೃಷಿ ಸಂಸ್ಕರಣಾ ಘಟಕವನ್ನು ನಿರ್ಮಿಸಿಕೊಂಡು ಇದಕ್ಕೆ ಪೂರಕವಾಗಿ ಶೇ.50ರಷ್ಟು ಸಬ್ಸಿಡಿ ಹಣವನ್ನು ಕೂಡ ಪಡೆದುಕೊಂಡಿದ್ದಾರೆ. ಬಾಕಿ ಇರುವ ನಬಾರ್ಡ್ ಸಬ್ಸಿಡಿ ಹಣವನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಕೋರಿಕೆ ಸಲ್ಲಿಸಿದರು.

ಶ್ರೀ ಆದಿ ಶಂಕರಾಚಾರ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯದ ಅಭಿವೃದ್ಧಿಗೆ ಅನುದಾನ ನೀಡುವಂತೆ ಹಂಸದ ರಾಘವೇಂದ್ರ ಮನವಿ ಮಾಡಿದರಲ್ಲದೆ, ಈ ಸಂಬಂಧ ವಿವರವಾದ ಮಾಹಿತಿಯನ್ನು ಒದಗಿಸಿದರು.

ಈ ಕ್ಷೇತ್ರವು ದಕ್ಷಿಣ ಭಾರತದ ಆಧ್ಯಾತ್ಮಿಕ ಕ್ಷೇತ್ರದ ಮೂಲಾಧಾರವಾಗಿದೆ. ಧಾರ್ಮಿಕ ಮಹತ್ವದ ಜತೆಗೆ, ಸುತ್ತಮುತ್ತಲಿನ ಪ್ರದೇಶದಲ್ಲಿ ನೈಸರ್ಗಿಕ ಆಸ್ತಿಗಳಾದ ನದಿಗಳು, ಕಡಲ ತೀರಗಳು, ಗಿರಿಧಾಮಗಳು, ಹಿನ್ನೀರು ಮತ್ತು ಭವಿಷ್ಯದ ವಾಯುನೆಲೆಗಳಿದ್ದು, ಈ ಎಲ್ಲವೂ ಒಟ್ಟಾರೆ 50 ಕಿ.ಮೀ. ವ್ಯಾಪ್ತಿಯಲ್ಲಿದೆ. ಭೌಗೋಳಿಕ ಮತ್ತು ಆಧ್ಯಾತ್ಮಿಕ ಸಮಗ್ರ ದೃಷ್ಟಿಯಿಂದ ಪ್ರವಾಸೋದ್ಯಮದ ಅಭಿವೃದ್ಧಿಗೆ ಉತ್ತಮ ಅವಕಾಶವಿದೆ. ಇದಕ್ಕೆ ಪೂರಕವಾದ ಸೌಲಭ್ಯವನ್ನು ಒದಗಿಸುವುದರಿಂದ ಈ ಕ್ಷೇತ್ರವನ್ನು ದೊಡ್ಡ ಪ್ರಮಾಣದಲ್ಲಿ ಅಭಿವೃದ್ದಿಪಡಿಸಬಹುದಾಗಿದೆ. ಇದಕ್ಕೆ ಪ್ರವಾಸೋದ್ಯಮ ಸಚಿವಾಲಯದ ತೀರ್ಥಯಾತ್ರೆಯ ಮೂಲಸೌಕರ್ಯ ಅಭಿವೃದ್ಧಿಯ ಪ್ರಸಾದ್ ಯೋಜನೆಯಡಿ ಅಗತ್ಯ ಅನುದಾನವನ್ನು ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸಿದರು.

ಸಿಜಿಎಚ್‌ಎಸ್‌ ಕ್ಷೇಮ ಕೇಂದ್ರ ತೆರೆಯಲು ಒಪ್ಪಿಗೆ:

ಇದರ ಜತೆಗೆ ಕೇಂದ್ರ ಸರ್ಕಾರದ ನೌಕರರು, ನಿವೃತ್ತ ನೌಕರರು, ಮತ್ತು ಅವರ ಕುಟುಂಬ ವರ್ಗದವರಿಗೆ ಅನಾರೋಗ್ಯ ಸಂಬಂಧ ಚಿಕಿತ್ಸೆಯನ್ನು ಪಡೆಯಲು ಸಿಜಿಎಚ್‌ಎಸ್‌ ಕ್ಷೇಮ ಕೇಂದ್ರ ತೆರೆಯುವ ಸಂಬಂಧ ಅಗತ್ಯ ತಜ್ಞರ ಹುದ್ದೆಗಳ ಮಂಜೂರಾತಿಯನ್ನು ನೀಡಿ, ಸೂಕ್ತ ಅನುದಾನವನ್ನು ಬಿಡುಗಡೆ ಮಾಡುವಂತೆ ಮನವಿ ಮಾಡಿದರು.

ಈ ಕೇಂದ್ರವನ್ನು ತೆರೆಯುವಂತೆ ಈ ಹಿಂದೆ ಸಂಸದ ರಾಘವೇಂದ್ರ ಅವರು ಕೇಂದ್ರ ಸರ್ಕಾರದ ಮೇಲೆ ನಿರಂತರವಾಗಿ ಒತ್ತಡವನ್ನು ಹೇರಿದ್ದರು. ಇದರ ಪರಿಣಾಮವಾಗಿ ಈ ಹಿಂದೆಯೇ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದಿಂದ ಕೇಂದ್ರ ಸ್ಥಾಪನೆಗೆ ಮಂಜೂರಾತಿ ದೊರೆತಿತ್ತು. ಆದರೆ ಸೂಕ್ತ ಅನುದಾನ ಮತ್ತು ಸಿಬ್ಬಂದಿಗಳ ನೇಮಕ ಆಗಿರದೆ ಇದ್ದುದರಿಂದ ಈ ಕೇಂದ್ರ ಸ್ಥಾಪನೆ ಸಾಧ್ಯವಾಗಿರಲಿಲ್ಲ. ಈಗ ಶಿವಮೊಗ್ಗ, ಮಂಗಳೂರು ಮತ್ತು ಉಡುಪಿ ಜಿಲ್ಲೆಯಲ್ಲಿ ಸಿಜಿಎಚ್‌ಎಸ್‌ ಕ್ಷೇಮ ಕೇಂದ್ರಗಳ ಸ್ಥಾಪನೆಗೆ ಪುನಃ ಅನುಮೋದನೆ ನೀಡಲಾಗಿದ್ದು, ಈ ಕೇಂದ್ರಗಳನ್ನು ತೆರೆಯಲು ಅಗತ್ಯ ತಜ್ಞರ ಹುದ್ದೆಗಳ ಮಂಜೂರಾತಿಯನ್ನು ನೀಡಿ, ಸೂಕ್ತ ಅನುದಾನವನ್ನು ಬಿಡುಗಡೆ ಮಾಡುವಂತೆ ಮನವಿ ಮಾಡಿದರು.

ಸಂಸದರ ಈ ಮನವಿಯನ್ನು ಪರಿಶೀಲಿಸಿದ ಕೇಂದ್ರ ಸಚಿವರು ಪ್ರತಿ ವಿಷಯಗಳ ಕುರಿತು ವಿವರಣೆ ಪಡೆದು ಅನುದಾನ ಬಿಡುಗಡೆಯ ಭರವಸೆ ನೀಡಿದರು.

ಕೃಷಿ, ಆರೋಗ್ಯ ಮತ್ತು ಪ್ರವಾಸೋದ್ಯಮ ಕ್ಷೇತ್ರಕ್ಕೆ ಸೌಲಭ್ಯಗಳನ್ನು ನೀಡಲು ಒಪ್ಪಿದ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಆರೋಗ್ಯ ಸಚಿವ ಜೆ.ಪಿ.ನಡ್ಡಾ, ಕೃಷಿ ಸಚಿವ ಶಿವರಾಜ್ ಸಿಂಗ್ ಮತ್ತು ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರಿಗೆ ಸಂಸದ ಬಿ.ವೈ ರಾಘವೇಂದ್ರವರು ಕೃತಜ್ಞತೆಗಳನ್ನು ಸಲ್ಲಿಸುವುದಾಗಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗಾಳಿಪಟ ದಾರ ಕುತ್ತಿಗೆ ಸೀಳಿ ಮಗಳನ್ನು ಹಾಸ್ಟೆಲ್‌ನಿಂದ ಕರೆತರಲು ಹೊರಟಿದ್ದ ಅಪ್ಪ ದಾರುಣ ಸಾವು
ಪೌರಾಯುಕ್ತೆಗೆ ಬೆಂಕಿ: ಕಾಂಗ್ರೆಸ್ಸಿಗನಿಂದ ಧಮ್ಕಿ