ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಮೂಲಕ ಪ್ರತಿಯೊಂದು ಗ್ರಾಪಂ ವ್ಯಾಪ್ತಿಯಲ್ಲಿ ಒಂದೊಂದು ಶಾಲೆಯನ್ನು ಸಮಗ್ರವಾಗಿ ಅಭಿವೃದ್ಧಿಗೆ ಈ ಬಾರಿಯ ಕ್ರಿಯಾ ಯೋಜನೆಯಲ್ಲಿ ಕಾಮಗಾರಿಯನ್ನು ಸೇರಿಸಿ.
ಕನ್ನಡಪ್ರಭ ವಾರ್ತೆ ಮಳವಳ್ಳಿ
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಮೂಲಕ ಪ್ರತಿಯೊಂದು ಗ್ರಾಪಂ ವ್ಯಾಪ್ತಿಯಲ್ಲಿ ಒಂದೊಂದು ಶಾಲೆಯನ್ನು ಸಮಗ್ರವಾಗಿ ಅಭಿವೃದ್ಧಿಗೆ ಈ ಬಾರಿಯ ಕ್ರಿಯಾ ಯೋಜನೆಯಲ್ಲಿ ಕಾಮಗಾರಿಯನ್ನು ಸೇರಿಸುವಂತೆ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯ್ತಿ ಸಿಇಒ ಕೆ.ಆರ್.ನಂದಿನಿ ಸೂಚಿಸಿದರು.
ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಪಿಡಿಒಗಳೊಂದಿಗೆ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿಯೊಂದು ಶಾಲೆಯನ್ನು ವಿಭಿನ್ನವಾಗಿ ಮತ್ತು ಆಕರ್ಷಕವಾಗಿ ಅನುಷ್ಠಾನ ಮಾಡಿ ಅಭಿವೃದ್ಧಿ ಸಾಧಿಸಲು ಕ್ರಮ ವಹಿಸುವಂತೆ ಸೂಚಿಸಿದರು.
ಗ್ರಾಮಾಭಿವೃದ್ಧಿಗೆ ಹೆಚ್ಚು ಪ್ರಾಮುಖ್ಯತೆ, ಸರ್ಕಾರದ ಎಲ್ಲಾ ಯೋಜನೆಯ ಹಣ ದುರುಪಯೋಗವಾಗದಂತೆ ಕ್ರಮ ವಹಿಸಬೇಕು, ಸಾರ್ವಜನಿಕರಿಗೆ ಲಭ್ಯವಾಗುವಂತೆ ಕೆಲಸ ಮಾಡಬೇಕು. ಕೆಲಸದಲ್ಲಿ ಪಾರದರ್ಶಕತೆ ಕಾಪಾಡುವಂತೆ ಪಿಡಿಒಗಳಿಗೆ ಸೂಚಿಸಿದರು.
ಅನುಷ್ಠಾನ ಇಲಾಖೆಗಳು ನಿಗದಿತ ಅವಧಿಯೊಳಗೆ ಯೋಜನೆಗಳು ಸಾರ್ವಜನಿಕರಿಗೆ ತಲುಪುವಂತೆ ಕಾರ್ಯಕ್ರಮ ಅನುಷ್ಠಾನ ಮಾಡಬೇಕು ಎಂದರು.
ಇದೇ ವೇಳೆ ಸಿಇಒ ನಂದಿನಿ.ಕೆ.ಆರ್ ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ ಪಟ್ಟಣದ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಂಗನವಾಡಿ ಕೇಂದ್ರದಲ್ಲಿನ ಮಕ್ಕಳೊಂದಿಗೆ ತುಸು ಕಾಲ ಸಮಯ ಕಳೆದರು.
ಕೇಂದ್ರದಲ್ಲಿ ಅಳವಡಿಸಿರುವ ವಿವಿಧ ಚಾರ್ಟ್ ಗಳನ್ನು ಮಕ್ಕಳಿಗೆ ತೋರಿಸಿ ಹೆಸರು ಹೇಳಲು ಸೂಚಿಸಿದಾಗ ಮಕ್ಕಳು ಅವುಗಳ ಹೆಸರು ಹೇಳಿದರು. ಅಂಗನವಾಡಿ ಕೇಂದ್ರದಲ್ಲಿ ರಾಷ್ಟ್ರೀಯ ಪೋಷಣ್ ಅಭಿಯಾನ ಯೋಜನೆ ಪೋಷಣ್ ಟ್ರಾಕರ್ ದಾಖಲಾತಿ ಹಾಗೂ ತೂಕ, ಎತ್ತರ ಪರಿಶೀಲನೆ ಹಾಗೂ ಮಾತೃಪೂರ್ಣ ಯೋಜನೆಯಡಿ ಗರ್ಭಿಣಿ ಮತ್ತು ಬಾಣಂತಿಯರಿಗೆ ನೀಡುವ ಉಪಾಹಾರ ಮತ್ತು ಕೋಳಿ ಮೊಟ್ಟೆಗಳನ್ನು ನೀಡಿರುವ ಬಗ್ಗೆ ದಾಖಲೆ ಪರಿಶೀಲನೆ ಮಾಡಿದರು.
ಈ ವೇಳೆ ತಾಪಂ ಇಒ ಎಚ್.ಜಿ.ಶ್ರೀನಿವಾಸ್, ತಾಲೂಕು ಯೋಜನಾಧಿಕಾರಿಗಳಾದ ದೀಪು, ಸಹಾಯಕ ನಿರ್ದೇಶಕರಾದ ಪಾರ್ಥಸಾರಥಿ, ಗ್ರಾಮ ಉಪ ಸಹಾಯಕ ನಿರ್ದೇಶಕರಾದ ಲಿಂಗರಾಜು, ಎಲ್ಲಾ ಅನುಷ್ಠಾನ ಇಲಾಖೆ ಅಧಿಕಾರಿಗಳು, ಎಲ್ಲಾ ಪಿಡಿಒಗಳು ಹಾಗೂ ತಾಪಂ ಸಿಬ್ಬಂದಿ ಹಾಜರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.