‘ಸುಧೀಂದ್ರ ತೀರ್ಥ ಶತನಮನ- ಶತಸ್ಮರಣ’ ಲಂಡನ್ ಬುಕ್ ಆಫ್ ವರ್ಲ್ಡ್‌ ರೆಕಾರ್ಡ್‌ಗೆ

KannadaprabhaNewsNetwork |  
Published : Feb 12, 2025, 12:35 AM IST
ವಿಶ್ವ ದಾಖಲೆ ನಿರ್ಮಿಸಿದ ಭಜನಾ ಕಾರ್ಯಕ್ರಮ | Kannada Prabha

ಸಾರಾಂಶ

ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯದ, ಕಾಶೀಮಠ ಗುರು ಪರಂಪರೆಯ 20ನೇ ಯತಿ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿ ಅವರ ಜನ್ಮಶತಮಾನೋತ್ಸವ ಅಂಗವಾಗಿ ಮಂಗಳೂರು ರಥಬೀದಿಯಲ್ಲಿ ನಡೆದ ವಿಶಿಷ್ಟ ಕಾರ್ಯಕ್ರಮವು ಲಂಡನ್ ಬುಕ್ ಆಫ್ ವರ್ಲ್ಡ್‌ ರೆಕಾರ್ಡ್‌ನಲ್ಲಿ ಸ್ಥಾನ ಪಡೆದುಕೊಂಡಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯದ, ಕಾಶೀಮಠ ಗುರು ಪರಂಪರೆಯ 20ನೇ ಯತಿ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿ ಅವರ ಜನ್ಮಶತಮಾನೋತ್ಸವ ಅಂಗವಾಗಿ ಮಂಗಳೂರು ರಥಬೀದಿಯಲ್ಲಿ ನಡೆದ ವಿಶಿಷ್ಟ ಕಾರ್ಯಕ್ರಮವು ಲಂಡನ್ ಬುಕ್ ಆಫ್ ವರ್ಲ್ಡ್‌ ರೆಕಾರ್ಡ್‌ನಲ್ಲಿ ಸ್ಥಾನ ಪಡೆದುಕೊಂಡಿದೆ.

ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿ ಉಪಸ್ಥಿತಿಯಲ್ಲಿ ಜಿಎಸ್‌ಬಿ ಸಮಾಜದ ನೂರು ಮಂದಿ ಗಾಯಕ, ಗಾಯಕಿಯರು ಹಾಗೂ 25ರಷ್ಟು ಹಿನ್ನೆಲೆ ವಾದ್ಯಗೋಷ್ಠಿ ಕಲಾವಿದರು ಏಕ ಬೃಹತ್ ವೇದಿಕೆಯಲ್ಲಿ ಭಜನಾ ಕಾರ್ಯಕ್ರಮ ನೀಡುವ ಮೂಲಕ ಈ ದಾಖಲೆ ನಿರ್ಮಾಣ ಮಾಡಿದರು.

ಜ.26ರಂದು ಸಂಜೆ 6 ಗಂಟೆಗೆ ಆರಂಭವಾದ ಶತನಮನ- ಶತಸ್ಮರಣ ಕಾರ್ಯಕ್ರಮದಲ್ಲಿ ಮಂಗಳೂರು ರಥಬೀದಿಯಲ್ಲಿ ನಿರ್ಮಿಸಲಾಗಿದ್ದ ಭವ್ಯ ವೇದಿಕೆಯಲ್ಲಿ ಹೆಸರಾಂತ ಗಾಯಕರಾದ ಪುತ್ತೂರು ನರಸಿಂಹ ನಾಯಕ್, ಶಂಕರ್ ಶ್ಯಾನುಭೋಗ್, ಪುತ್ತೂರು ಪಾಂಡುರಂಗ ನಾಯಕ್, ಬಾಲಚಂದ್ರ ಪ್ರಭು, ರಘುನಂದನ್ ಭಟ್, ಪ್ರಿಯಾ ಪೈ, ಮಹಾಲಕ್ಷ್ಮಿ ಶೆಣೈ ಸಹಿತ ದೇಶದ ವಿವಿಧ ರಾಜ್ಯಗಳಿಂದ ಆಗಮಿಸಿದ ನೂರು ಮಂದಿ ಗಾಯಕ, ಗಾಯಕಿಯರು ಏಕಕಂಠದಲ್ಲಿ ಹತ್ತು ಭಜನಾ ಹಾಡುಗಳನ್ನು ಹಾಡಿದರು.

ಮಂಗಳೂರು ರಥಬೀದಿ ಶ್ರೀ ವೆಂಕಟರಮಣ ದೇವಸ್ಥಾನದಿಂದ ಆಯೋಜಿಸಲ್ಪಟ್ಟ ಈ ಕಾರ್ಯಕ್ರಮದ ಒಟ್ಟು ಕಲ್ಪನೆ ಮತ್ತು ರೂಪುರೇಷೆಯ ಜವಾಬ್ದಾರಿಯನ್ನು ಯೂತ್ ಆಫ್ ಜಿಎಸ್‌ಬಿ ವಾಹಿನಿ ವಹಿಸಿತ್ತು. ಪ್ರತಿ ಹಾಡಿನ ಮೊದಲು ಅದರ ಸಾಹಿತ್ಯ, ಸಂಗೀತ, ಹಿನ್ನೆಲೆ, ಮಹತ್ವ ಮತ್ತು ಸೂಕ್ಷ್ಮಾರ್ಥವನ್ನು ಗಾಯಕ ಪುತ್ತೂರು ನರಸಿಂಹ ನಾಯಕ್ ವಿವರಿಸುವ ಮೂಲಕ ಜನರಿಗೆ ಹಾಡಿನ ವಿಶೇಷಗಳನ್ನು ಪರಿಚಯಿಸಿದರು. ಸುಮಾರು 8 ಸಾವಿರದಷ್ಟು ಜನರು ಪ್ರತ್ಯಕ್ಷವಾಗಿ ಕಾರ್ಯಕ್ರಮಕ್ಕೆ ಸಾಕ್ಷಿಯಾದರೆ, ದೇಶ ವಿದೇಶಗಳ ಲಕ್ಷಾಂತರ ಜನ ನೇರಪ್ರಸಾರದಲ್ಲಿ ಕಾರ್ಯಕ್ರಮ ವೀಕ್ಷಿಸಿದರು.

ಮೂರು ತಿಂಗಳ ತಯಾರಿ:

ಈ ಕಾರ್ಯಕ್ರಮಕ್ಕೆ ಮೂರು ತಿಂಗಳುಗಳಿಂದ ತಯಾರಿ ನಡೆಸಲಾಗಿತ್ತು. ಆನ್ ಲೈನ್ ಮೂಲಕ ಗಾಯಕ, ಗಾಯಕಿಯರು, ವಾದ್ಯ ಕಲಾವಿದರು ಹೆಸರು ನೋಂದಾಯಿಸಿದ್ದರು. ಅವರಿಗೆ ಏಳು ಹಾಡುಗಳನ್ನು ಮೊದಲೇ ಕಳುಹಿಸಿಕೊಡಲಾಗಿತ್ತು. ಉಳಿದ ಮೂರು ಹಾಡುಗಳನ್ನು ಕಾರ್ಯಕ್ರಮದ ಮುಂಚಿತವಾಗಿ ತಿಳಿಸಲಾಗಿತ್ತು. ಎಲ್ಲ ಕಲಾವಿದರಿಗೆ ಸಮವಸ್ತ್ರವನ್ನು ಒದಗಿಸಲಾಗಿತ್ತು. ಹಿಂದಿನ ದಿನ ಮಂಗಳೂರಿನ ರಮಣ್ ಪೈ ಸಭಾಂಗಣದಲ್ಲಿ ಪೂರ್ವಾಭ್ಯಾಸ ನಡೆಸಲಾಗಿತ್ತು.

ಕಾರ್ಯಕ್ರಮದ ಯಶಸ್ಸಿಗೆ ಸಹಕಾರ ನೀಡಿದ ಸೆಂಚೂರಿ ಬಿಲ್ಡರ್ಸ್ ಮುಖ್ಯಸ್ಥರಾದ ಡಾ. ದಯಾನಂದ ಪೈ, ಸತೀಶ್ ಪೈ, ಹ್ಯಾಂಗ್ಯೋ ಐಸ್ ಕ್ರೀಂ ಮಾಲೀಕ ಪ್ರದೀಪ್ ಜಿ. ಪೈ, ಸಂವಿಟಿ ಕ್ಯಾಪಿಟಲ್‌ನ ಅತುಲ್ ಕುಡ್ವ, ಜಯಲಕ್ಷ್ಮಿ ಸಿಲ್ಕ್ಸ್ ಉಡುಪಿ ಹಾಗೂ ಮಂಗಳೂರು, ಗಣೇಶ್ ಬೀಡಿ ಪ್ರೈವೇಟ್ ಲಿಮಿಟೆಡ್‌ನ ಪ್ರಮುಖರು ವಿಶೇಷ ಆಹ್ವಾನಿತರಾಗಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾಯಕತ್ವ ಗೊಂದಲ ಮಧ್ಯೆ 13 ಕೈ ಶಾಸಕರು ವಿದೇಶಕ್ಕೆ :
ವಿದ್ಯಾರ್ಥಿಗಳ ಗೋಳು, ಕೇಳೋರು ಯಾರು?