ಬೀಳಗಿ ಸಿಡಿಪಿಒ ಮೇಲೆ ಶಿಸ್ತು ಕ್ರಮಕ್ಕೆ ಸಿಇಒ ಕುರೇರ ಸೂಚನೆ

KannadaprabhaNewsNetwork | Published : Jul 2, 2025 12:23 AM
(ಫೋಟೋ 1ಬಿಕೆಟಿ9, ಲ್ಲೆಯ ಅಂಗನವಾಡಿ ಮೇಲ್ವಿಚಾರಕರ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ) | Kannada Prabha

ಅಂಗನವಾಡಿ ಸ್ವಂತ ಕಟ್ಟಡಕ್ಕೆ ಸಂಬಂಧಿಸಿದಂತೆ ಗುರುತಿಸಲಾಗುತ್ತಿರುವ ನಿವೇಶನದ ಮಾಹಿತಿಯನ್ನು ಜಿಲ್ಲಾ ಕಚೇರಿಗೆ ಕಳುಹಿಸದೇ ತಮ್ಮ ಹಂತದಲ್ಲಿ ಇಟ್ಟುಕೊಂಡು ಕರ್ತವ್ಯದಲ್ಲಿ ಲೋಪ ಎಸಗಿದ ಬೀಳಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಮೇಲೆ ಶಿಸ್ತು ಕ್ರಮಕೈಗೊಳ್ಳುವಂತೆ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಅಂಗನವಾಡಿ ಸ್ವಂತ ಕಟ್ಟಡಕ್ಕೆ ಸಂಬಂಧಿಸಿದಂತೆ ಗುರುತಿಸಲಾಗುತ್ತಿರುವ ನಿವೇಶನದ ಮಾಹಿತಿಯನ್ನು ಜಿಲ್ಲಾ ಕಚೇರಿಗೆ ಕಳುಹಿಸದೇ ತಮ್ಮ ಹಂತದಲ್ಲಿ ಇಟ್ಟುಕೊಂಡು ಕರ್ತವ್ಯದಲ್ಲಿ ಲೋಪ ಎಸಗಿದ ಬೀಳಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಮೇಲೆ ಶಿಸ್ತು ಕ್ರಮಕೈಗೊಳ್ಳುವಂತೆ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಪಂ ಸಭಾಭವನದಲ್ಲಿ ಜಿಲ್ಲೆಯ ಅಂಗನವಾಡಿ ಮೇಲ್ವಿಚಾರಕರ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಂಗನವಾಡಿಗೆ ಸ್ವಂತ ನಿವೇಶನ ಗುರುತಿಸಿ ಖರೀದಿಸುವ ಸಲುವಾಗಿ ಬೀಳಗಿ ಪುರಸಭೆಯಿಂದ ಪಡೆಯಲಾದ ನಿವೇಶನದ ಅಂದಾಜು ವೆಚ್ಚದ ಮಾಹಿತಿಯನ್ನು ಜಿಲ್ಲಾ ಕಚೇರಿಗೆ ಕಳುಹಿಸದೇ ವಿಳಂಬ ಧೋರಣೆ ಅನುಸರಿಸುವುದಲ್ಲದೇ ಹಾರಿಕೆ ಉತ್ತರ ನೀಡುತ್ತಿದ್ದರು. ಕರ್ತವ್ಯದಲ್ಲಿ ಬೇಜವಾಬ್ದಾರಿ ತೋರಿದ ಹಿನ್ನೆಲೆಯಲ್ಲಿ ಶಿಸ್ತುಕ್ರಮ ಕೈಗೊಳ್ಳಲು ಸೂಚನೆ ನೀಡಿದರು.

ಒಂದು ವರ್ಷದಿಂದ ಸ್ವಂತ ಕಟ್ಟಡ ಇಲ್ಲದ ಅಂಗನವಾಡಿ ಕೇಂದ್ರಗಳ ಪಟ್ಟಿ ಮಾಡಿ ನಿವೇಶನ ಗುರುತಿಸಲು ಸೂಚನೆ ನೀಡಲಾಗಿತ್ತು. ಆದರೆ ಇನ್ನೂ ಕೆಲವು ಮೇಲ್ವಿಚಾರಕರು ನಿವೇಶನ ಗುರುತಿಸುವ ಕಾರ್ಯದಲ್ಲಿ ಬೇಜವಾಬ್ದಾರಿ ತೋರುತ್ತಿದ್ದು, ಆಯಾ ತಾಲೂಕು ಮೇಲ್ವಿಚಾರಕರು ತಮ್ಮ ವ್ಯಾಪ್ತಿಯಲ್ಲಿ ಬರುವ ಅಂಗನವಾಡಿ ಕೇಂದ್ರಗಳು ಸ್ವಂತ ಕಟ್ಟಡ, ಬಾಡಿಗೆ ಕಟ್ಟಡ ಎಷ್ಟು ಇವೆ. ಸ್ವಂತ ಕಟ್ಟಡಕ್ಕೆ ಗುರುತಿಸಿದ ನಿವೇಶನ ಎಷ್ಟು, ನಿವೇಶನ ಗುರುತಿಸಿರುವ ಬಗ್ಗೆ ದೃಢೀಕರಣ ಸಹಿತ ಮಾಹಿತಿ ನೀಡುವಂತೆ ಒಂದು ತಿಂಗಳ ಗಡುವು ನೀಡಿದರು.

ಆಸಕ್ತಿಯಿಂದ ಕೆಲಸ ಮಾಡಿದರೆ ಎಲ್ಲವೂ ಸಾಧ್ಯವಾಗುತ್ತದೆ. ನಿವೇಶನ ಹುಡುಕಿ ಮಾಹಿತಿ ಪಡೆದ ಶಿಶು ಅಭವೃದ್ಧಿ ಯೋಜನಾಧಿಕಾರಿಗಳು ಖರೀದಿ ಕುರಿತು ಮೇಲಧಿಕಾರಿಗಳೊಂದಿಗೆ ಚರ್ಚೆ ಮಾಡಬೇಕು. ನಿಮ್ಮ ಜವಾಬ್ದಾರಿ ಹೆಚ್ಚಿಗೆ ಇದೆ. ತುಂಬಾ ಮುತುವರ್ಜಿ ವಹಿಸಿ ಕೆಲಸ ಮಾಡಲು ತಿಳಿಸಿದ ಸಿಇಒ ಅವರು ಆಯಾ ತಾಲೂಕಿನಲ್ಲಿರುವ ನಿವೇಶನ ರಹಿತಿ ನಗರ ಹಾಗೂ ಗ್ರಾಮೀಣ ವ್ಯಾಪ್ತಿಯಲ್ಲಿ ಬರುವ ಅಂಗನವಾಡಿ ಕೇಂದ್ರಗಳ ಮಾಹಿತಿ ಪಡೆದುಕೊಂಡರು.

ಅಂಗನವಾಡಿ ಕೇಂದ್ರಗಳಲ್ಲಿ ಪ್ರತಿತಿಂಗಳ ಹಾಜರಾತಿ ಸರಿಯಾಗಿ ಹಾಕುತ್ತಿಲ್ಲ. ಅಂದಾಜು ಲೆಕ್ಕದ ಮೇಲೆ ಹಾಜರಾತಿ ಇದ್ದು, ವಾಸ್ತವವಾಗಿ ನೋಡಿದಾಗ ಬಹಳಷ್ಟು ಕಡಿಮೆ ಇದೆ. ಅಲ್ಲದೆ, ಪೋಷನ್ ಟ್ರ್ಯಾಕ್‌ನಲ್ಲಿ ಸಹ ವ್ಯತ್ಯಾಸ ಕಂಡುಬರುತ್ತಿದೆ. ಈ ರೀತಿಯ ವ್ಯತ್ಯಾಸ ಆಗಬಾರದು. ಮುಂದಿನ ಮಾಹೆಯಲ್ಲಿ ವ್ಯತ್ಯಾಸ ಕಂಡುಬಂದಲ್ಲಿ ಅನಿರೀಕ್ಷಿತವಾಗಿ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಮಕ್ಕಳ ಹಾಜರಾತಿ ಪರಿಶೀಲಿಸಲಾಗುವುದೆಂದು ಎಚ್ಚರಿಕೆ ನೀಡಿದರು.

ಸರ್ಕಾರ ಅಪೌಷ್ಟಿಕ ಮಕ್ಕಳಿಗೆ ಪೌಷ್ಟಿಕಾಂಶವುಳ್ಳ ಆಹಾರ ನೀಡುತ್ತಿದೆ. ಆದರೂ ಸಹ ಅಪೌಷ್ಟಿಕ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿಲ್ಲ. ಅಂತಹ ಮಕ್ಕಳ ಬಗ್ಗೆ ಆಯಾ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಗಮನ ಹರಿಸಬೇಕು. ಕಾಲಕಾಲಕ್ಕೆ ಮಕ್ಕಳ ತೂಕ, ಎತ್ತರ ಪರೀಕ್ಷೆ ಮಾಡಬೇಕು. ಕಡಿಮೆ ಪ್ರಗತಿ ಸಾಧಿಸಿದ ಮೇಲ್ವಿಚಾರಕರ ಮೇಲೆ ನೋಟಿಸ್ ಜಾರಿ ಮಾಡಲು ತಿಳಿಸಿದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಕೇವಲ ಅಂಗನವಾಡಿಗಳಿಗೆ ಭೇಟಿ ನೀಡಿದರೆ ಸಾಲದು. ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿರುವ ಮೂಲ ಸೌಲಭ್ಯ, ಹಾಜರಾತಿ ಪರಿಶೀಲಿಸಿ ಮುಂದಿನ ಭೇಟಿ ಸಮಯದಲ್ಲಿ ಸುಧಾರಣೆ ಆಗಿರುವ ಬಗ್ಗೆ ಗಮನ ಹರಿಸುವ ಕಾರ್ಯವಾಗಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕ ಕೆ.ಪ್ರಭಾಕರ ಸೇರಿದಂತೆ ಆಯಾ ತಾಲೂಕಿನ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು ಹಾಗೂ ಅಂಗನವಾಡಿ ಕೇಂದ್ರಗಳ ಮೇಲ್ವಿಚಾರಕರು ಉಪಸ್ಥಿತರಿದ್ದರು.