ಸಿರಿಧಾನ್ಯಗಳು ನಮ್ಮ ಆರೋಗ್ಯ ಕಾಪಾಡುವ ಸರಿಯಾದ ಧಾನ್ಯಗಳು: ಡಾ. ಖಾದರ್ ವಲಿ

KannadaprabhaNewsNetwork | Updated : Jan 10 2024, 02:42 PM IST

ಸಾರಾಂಶ

ಸಿರಿಧಾನ್ಯಗಳು ನಮ್ಮ ಆರೋಗ್ಯವನ್ನು ಅತ್ಯಂತ ಅಚ್ಚುಕಟ್ಟಾಗಿ ಕಾಪಾಡುವ ಸರಿಧಾನ್ಯಗಳು, ಅವುಗಳ ಬಳಕೆಯಿಂದ ಪ್ರತಿಯೊಬ್ಬರೂ ಉತ್ತಮ ಆರೋಗ್ಯವನ್ನು ಪಡೆಯಬಹುದು ಮತ್ತು ರೋಗ ಮುಕ್ತ ನೆಮ್ಮದಿಯ ಜೀವನ ನಡೆಸಬಹುದು ಎಂದು ಪದ್ಮಶ್ರೀ ಪುರಸ್ಕೃತ ಆಹಾರ ತಜ್ಞ ಡಾ. ಖಾದರ್ ವಲಿ ಹೇಳಿದರು.

ಗದಗ: ಸಿರಿಧಾನ್ಯಗಳು ನಮ್ಮ ಆರೋಗ್ಯವನ್ನು ಅತ್ಯಂತ ಅಚ್ಚುಕಟ್ಟಾಗಿ ಕಾಪಾಡುವ ಸರಿಧಾನ್ಯಗಳು, ಅವುಗಳ ಬಳಕೆಯಿಂದ ಪ್ರತಿಯೊಬ್ಬರೂ ಉತ್ತಮ ಆರೋಗ್ಯವನ್ನು ಪಡೆಯಬಹುದು ಮತ್ತು ರೋಗ ಮುಕ್ತ ನೆಮ್ಮದಿಯ ಜೀವನ ನಡೆಸಬಹುದು ಎಂದು ಪದ್ಮಶ್ರೀ ಪುರಸ್ಕೃತ ಆಹಾರ ತಜ್ಞ ಡಾ. ಖಾದರ್ ವಲಿ ಹೇಳಿದರು.

ಅವರು ಸೋಮವಾರ ಗದಗ ತಾಲೂಕಿನ ಬಿಂಕದಕಟ್ಟಿ ಗ್ರಾಮದಲ್ಲಿರುವ ರಾಮಕರುಣಾನಂದ ಮಠದ ಆವರಣದಲ್ಲಿ ಕೃಷಿ ಇಲಾಖೆಯ ಸಹಯೋಗದಲ್ಲಿ ನಡೆದ ಸಿರಿಧಾನ್ಯ ಮಾತು ಕಾರ್ಯಕ್ರಮದಲ್ಲಿ ಮಾತನಾಡಿದರು. ಇವತ್ತಿನ ಜನರ ಜೀವನ ಶೈಲಿಯು ಬಹಳಷ್ಟು ಅಪಾಯಕಾರಿ ಮಟ್ಟದಲ್ಲಿ ಬದಲಾಗಿದೆ.

ಇಂದಿನ ಆಹಾರ ಪದ್ಧತಿಯೇ ರೋಗಗಳನ್ನು ಹೆಚ್ಚಿಸುವಂತಾ ಸ್ಥಿತಿಯಲ್ಲಿದೆ. ಹಿಂದಿನ ಕಾಲದಲ್ಲಿ ನಮ್ಮ ಆರೋಗ್ಯ ಅಡುಗೆ ಮನೆಯಲ್ಲಿತ್ತು. ಇಂದು ನಾವು ಆರೋಗ್ಯವನ್ನು ಆಸ್ಪತ್ರೆಗಳಲ್ಲಿ ಹುಡುಕುತ್ತಾ ಇದ್ದೇವೆ. ಮುಂದಿನ ದಿನಗಳಲ್ಲಿ ಹೀಗೆ ನಡೆದರೆ ಆರೋಗ್ಯವಂತ ಸಮಾಜವನ್ನು ಕಾಣುವುದು ತೀರಾ ಕಷ್ಟವಾಗಲಿದೆ ಎಂದರು.

ಅದಕ್ಕಾಗಿ ಪ್ರತಿಯೊಬ್ಬರೂ ಸಿರಿಧಾನ್ಯಗಳನ್ನು ಆಹಾರ ಪದ್ಧತಿಯಾಗಿ ಅಳವಡಿಸಿಕೊಳ್ಳುವ ಮೂಲಕ ನಾವು ಆರೋಗ್ಯವಂತರಾಗಬೇಕು ಹಾಗೂ ಆರೋಗ್ಯಯುತ ಸಮಾಜ ನಿರ್ಮಿಸಲು ಸಹಕರಿಸಬೇಕು. ನಮ್ಮ ಹಿರಿಯರು ಆರೋಗ್ಯವಂತರಾಗಿ ಇರುವುದಕ್ಕೆ ಕಾರಣ ಸಿರಿಧಾನ್ಯ ಬಳಕೆ ಎನ್ನುವುದನ್ನು ಪ್ರತಿಯೊಬ್ಬರು ಅರಿತುಕೊಳ್ಳಬೇಕು.

ಗದಗ ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕ ಮಲ್ಲಯ್ಯ ಕೊರವನವರ ಪ್ರಾಸ್ತಾವಿಕವಾಗಿ ಮಾತನಾಡಿ, ಡಾ. ಖಾದರ್ ವಲಿ ಅವರು ಸಿರಿಧಾನ್ಯ ಬಳಕೆಯ ಮೂಲಕ ಉತ್ತಮ ಆರೋಗ್ಯಕರ ಸಮಾಜ ಕಟ್ಟುವ ಗುರಿ ಇಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ. 

ಪ್ರತಿಯೊಬ್ಬರೂ ಸಿರಿಧಾನ್ಯ ಮಹತ್ವದ ಕುರಿತು ದೇಶದಾದ್ಯಂತ ಜಾಗೃತಿ ಮೂಡಿಸಿದ್ದಾರೆ. ಗದಗ ಜಿಲ್ಲೆಯ ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಅವರ ಜ್ಞಾನ ಹಳ್ಳಿ ಹಳ್ಳಿಯ ರೈತರನ್ನು ತಲುಪಿದಾಗ ಬದಲಾವಣೆ ಸಾಧ್ಯವಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಸಿರಿಧಾನ್ಯ ಮೇಳದಲ್ಲಿ ಸಿರಿಧಾನ್ಯ ಪಾಕ ಸ್ಪರ್ಧೆಯಲ್ಲಿ ಭಾಗವಹಿಸಿ ರಾಜ್ಯಕ್ಕೆ ದ್ವೀತಿಯ ಸ್ಥಾನ ಪಡೆದಿರುವ ಬಿಂಕದಕಟ್ಟಿ ಗ್ರಾಮದ ಅಕ್ಷತಾ ಮೂಲಿಮನಿ ಅವರನ್ನು ಸನ್ಮಾನಿಸಲಾಯಿತು. 

ಬಿಂಕದಕಟ್ಟಿ ಗ್ರಾ ಪಂ ಅಧ್ಯಕ್ಷ ಪಿ.ಪಿ. ನದಾಫ್ ಹಾಗೂ ಸದಸ್ಯರು ಹಾಗೂ ರವೀಂದ್ರ ಮೂಲಿಮನಿ, ಸರೋಜಮ್ಮ ಅಗಸನಕೊಪ್ಪ ಹಾಜರಿದ್ದರು. ರಾಜರಾಜೇಶ್ವರಿ ಚಿನಿವಾಲರ ಸ್ವಾಗತಿಸಿದರು. ಬಸವರಾಜೇಶ್ವರಿ ಸಜ್ಜನರ ನಿರೂಪಿಸಿ ವಂದಿಸಿದರು. ಗ್ರಾಮದ ರೈತರು, ಮಹಿಳೆಯರು ಕೃಷಿ ಇಲಾಖೆಯ ಸಿಬ್ಬಂದಿ ಹಾಜರಿದ್ದರು.

Share this article