ಮಲೆನಾಡ ದಸರಾ ಉತ್ಸವಕ್ಕೆ ವಿದ್ಯುಕ್ತ ಚಾಲನೆ

KannadaprabhaNewsNetwork |  
Published : Oct 04, 2024, 01:02 AM IST
ಪೊಟೋ: 3ಎಸ್‌ಎಂಜಿಕೆಪಿ07ಶಿವಮೊಗ್ಗ ನಗರದ ಕೋಟೆ ಶ್ರೀ ಚಂಡಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿರುವ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಲಾಯಿತು. | Kannada Prabha

ಸಾರಾಂಶ

ಅ.12ರವರೆಗೆ ನಡೆಯುವ ವೈಭವಯುತ ದಸರಾಕ್ಕೆ ನಗರದ ಕೋಟೆ ಶ್ರೀ ಚಂಡಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿರುವ ಉತ್ಸವಮೂರ್ತಿಗೆ ಪೂಜೆ ಸಲ್ಲಿಸುವ ಮೂಲಕ ವಿದ್ಯುಕ್ತ ಚಾಲನೆ ನೀಡಲಾಯಿತು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ರಾಜ್ಯದಲ್ಲಿ ಮೈಸೂರು ಹೊರತುಪಡಿಸಿದರೆ ಅದ್ದೂರಿ ದಸರಾ ಆಚರಣೆಗೆ ಹೆಸರಾಗಿರುವ ಶಿವಮೊಗ್ಗದಲ್ಲಿ ನಾಡಹಬ್ಬ ದಸರಾಗೆ ಚಲನಚಿತ್ರ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ಗುರುವಾರ ಚಾಲನೆ ನೀಡಿದರು.

ಶಿವಮೊಗ್ಗ ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಅ.12ರವರೆಗೆ ನಡೆಯುವ ವೈಭವಯುತ ದಸರಾವನ್ನು ನಗರದ ಕೋಟೆ ಶ್ರೀ ಚಂಡಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿರುವ ಉತ್ಸವಮೂರ್ತಿಗೆ ಪೂಜೆ ಸಲ್ಲಿಸುವ ಮೂಲಕ ವಿದ್ಯುಕ್ತ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಚಲನಚಿತ್ರ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ, ನಮ್ಮಲ್ಲಿಯೂ ಸಹ ರಾಮನಿದ್ದಾನೆ. ರಾವಣನಿದ್ದಾನೆ. ಅದರಲ್ಲಿ ರಾಮನ ಸದ್ಗುಣಗಳನ್ನು ಅರಿತುಕೊಂಡು, ರಾವಣನ ದುರ್ಗುಣವನ್ನು ಬಿಟ್ಟುಕೊಡುವುದೇ ನಿಜವಾದ ಹಬ್ಬದ ಆಚರಣೆಗಳು. ಅದೇ ರೀತಿಯಲ್ಲಿ ದುರ್ಗೆ ರಾಕ್ಷಸರನ್ನು ಸಂಹರಿಸಿದಳು. ದುರ್ಗೆಯ ಶಕ್ತಿಯನ್ನು ನಾವುಗಳು ಅಳವಡಿಸಕೊಂಡು. ರಾಕ್ಷಸರ ರೂಪದ ನಮ್ಮಲ್ಲಿನ ಅವಗುಣಗಳನ್ನು ಸಂಹಾರ ಮಾಡಬೇಕೆಂದು ಮಾರ್ಮಿಕವಾಗಿ ಹೇಳಿದರು.

ಶಕ್ತಿಯ ದೇವತೆಗಳ ಉತ್ಸವವಾದ ಈ ದಸರಾ ಹಬ್ಬ ನಾಡಿನ ಅತ್ಯಂತ ವೈಶಿಷ್ಟ್ಯಪೂರ್ಣ ಹಬ್ಬವಾಗಿದೆ. ಈ ಹಬ್ಬ ಸಮಸ್ತ ಕನ್ನಡ ನಾಡಿನ ಜನತೆಗೆ ಸುಖ-ಶಾಂತಿ ನೆಮ್ಮದಿಯನ್ನು ನೀಡಲಿ ಎಂದು ಹಾರೈಸಿದರು.

ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್ ಬಾನು ಮಾತನಾಡಿ, ದೇವರ ಮೇಲೆ ಯಾರಿಗೆ ನಂಬಿಕೆ ಇರುವುದಿಲ್ಲವೋ ಅವರು, ಜೀವನದಲ್ಲಿ ನೆಮ್ಮದಿಯನ್ನು ಹೊಂದಲು ಸಾಧ್ಯವಿಲ್ಲ. ದೇವರು, ಧರ್ಮ ಇವುಗಳ ಮೇಲೆ ನಂಬಿಕೆ ಇದ್ದಾಗ ಮಾತ್ರ ಶಾಂತಿಯುತ ಜೀವನ ಹೊಂದಲು ಸಾಧ್ಯ ಎಂದು ಹೇಳಿದರು.

ಶಾಸಕ ಎಸ್,ಎನ್.ಚನ್ನಬಸಪ್ಪ ಮಾತನಾಡಿ, ಈ ಬಾರಿ ದಸರಾದಲ್ಲಿ 68ಕ್ಕೂ ಅಧಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ, ಹೊಸದಾಗಿ ಪೌರ ಕಾರ್ಮಿಕರ ಗಮಕ ಹಾಗೂ ಪತ್ರಿಕಾ ದಸರಾವನ್ನು ನಡೆಸಲಾಗುತ್ತಿದೆ ಎಂದು ಹೇಳಿದರು.

ಕೊನೆಯ ದಿನ ನಡೆಯುವ ಉತ್ಸವದಲ್ಲಿ ನಗರದ 250ಕ್ಕೂ ದೇವಾನುದೇವತೆಗಳು ಪಾಲ್ಗೊಳ್ಳಲಿವೆ. ಉತ್ಸವದಲ್ಲಿ ಮೂರು ಆನೆಗಳು ಪಾಲ್ಗೊಳ್ಳಲಿವೆ. ನಮ್ಮ ಪರಂಪರೆಯನ್ನು ಉಳಿಸುವ ನಿಟ್ಟಿನಲ್ಲಿ ಯಾವ ಸರ್ಕಾರವೂ ಕೂಡ ಹಿಂದೆ ಬಿದ್ದಿಲ್ಲ ಎಂದು ಹೇಳಿದರು.

ಸೂಡಾ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಪಾಲಿಕೆ ಆಯುಕ್ತೆ ಕವಿತಾ ಯೋಗಪ್ಪನವರ್, ತಹಶೀಲ್ದಾರ್ ಗಿರೀಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.ರಾವಣ ಅಹಂಕಾರ ತ್ಯಜಿಸಿ: ದೇಸಾಯಿ

ನಮ್ಮ ಸಂಸ್ಕೃತಿ ಹಬ್ಬ ಉತ್ಸವಗಳಿಂದ ತುಂಬಿದೆ ಎಂದು ಚಲನಚಿತ್ರ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ಅಭಿಪ್ರಾಯಪಟ್ಟರು. ಪ್ರತಿ ಮಾಸದಲ್ಲಿಯೂ ಕೂಡ ಒಂದಲ್ಲ ಒಂದು ಹಬ್ಬ ಉತ್ಸವಗಳು ಆಚರಣೆಯಲ್ಲಿವೆ. ಇವೆಲ್ಲವುಗಳಿಗೂ ಒಂದೊಂದು ಹಿನ್ನೆಲೆ ಇದೆ. ಆಂತರಿಕವಾಗಿ ಅಂದರೆ ಪಂಚೇಂದ್ರಿಯಗಳ ಮೂಲಕ ಅನುಭವಿಸುವ ಮತ್ತು ಬಾಹ್ಯವಾಗಿ ಅನುಭವಿಸುವ ಉತ್ಸವಗಳು ರೂಢಿಯಲ್ಲಿವೆ ಎಂದ ಅವರು, ರಾವಣ ಅತ್ಯಂತ ಮೇಧಾವಿ ಎಲ್ಲಾ ವೇದಗಳನ್ನು ಅರಿತವನು. ಅಲ್ಲದೇ ಶಿವಭಕ್ತ ಆದರೆ ಈತನಲ್ಲಿ ಅಹಂಕಾರವೆಂಬ ದುರ್ಗುಣವಿತ್ತು. ಅದರ ಪರಿಣಾಮ ತನ್ನ ಬದುಕನ್ನೇ ಹಾಳು ಮಾಡಿಕೊಂಡ, ಮುಂದೆ ರಾಮನ ಮುಖಾಂತರ ಹತನಾದ ಎಂದು ಹಬ್ಬದ ಆಚರಣೆಯ ಹಿನ್ನೆಲೆಯನ್ನು ಹೇಳಿದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ