ಇಲ್ಲಿನ ಶಕ್ತಿದೇವತೆ ಎಂದೇ ಖ್ಯಾತಿ ಪಡೆದಿರುವ ಐತಿಹಾಸಿಕ ಮಹತ್ವವುಳ್ಳ ಗ್ರಾಮದೇವತೆ ಭೂಮ್ತಾಯಿ (ಶ್ರೀ ಶಾಂತಾದುರ್ಗಾ) ದೇವರ ಬಂಡಿಹಬ್ಬ ಉತ್ಸವಕ್ಕೆ ಅಕ್ಷಯ ತೃತೀಯ ದಿನವಾದ ಸೋಮವಾರ ಸಂಜೆ ವಿಧ್ಯುಕ್ತ ಚಾಲನೆ ದೊರೆಯಿತು.
ಅಕ್ಷಯ ತೃತೀಯ ಶುಭದಿನದಿಂದ ಚಾಲನೆ ಪಡೆದುಕೊಂಡ ಭೂಯ್ತಾಯಿಯ ಮಹೋತ್ಸವ
ಕನ್ನಡಪ್ರಭ ವಾರ್ತೆ ಅಂಕೋಲಾಇಲ್ಲಿನ ಶಕ್ತಿದೇವತೆ ಎಂದೇ ಖ್ಯಾತಿ ಪಡೆದಿರುವ ಐತಿಹಾಸಿಕ ಮಹತ್ವವುಳ್ಳ ಗ್ರಾಮದೇವತೆ ಭೂಮ್ತಾಯಿ (ಶ್ರೀ ಶಾಂತಾದುರ್ಗಾ) ದೇವರ ಬಂಡಿಹಬ್ಬ ಉತ್ಸವಕ್ಕೆ ಅಕ್ಷಯ ತೃತೀಯ ದಿನವಾದ ಸೋಮವಾರ ಸಂಜೆ ವಿಧ್ಯುಕ್ತ ಚಾಲನೆ ದೊರೆಯಿತು.ತಾಲೂಕಿನ ಜನಪದ ಆಚರಣೆಯಾದ, ಅತ್ಯಂತ ವಿಶೇಷ ಉತ್ಸವಗಳಲ್ಲಿ ಒಂದಾದ ಶ್ರೀ ಶಾಂತಾದುರ್ಗಾ ದೇವರ ಬಂಡಿಹಬ್ಬ ಉತ್ಸವವು ಎ.20 ರಿಂದ ಮೇ 1 ರವರೆಗೆ ಸಂಭ್ರಮದಿಂದ ನಡೆಯಲಿದೆ.ಬಂಡಿಹಬ್ಬದ ಕಳಸವು ಸಮೀಪದ ಕುಂಬಾರಕೇರಿ ಕಳಸ ದೇವಸ್ಥಾನದಿಂದ ಅಲಂಕಾರ ಭೂಷಿತವಾದ ಕಳಸವು ಛತ್ರ ಚಾಮರದ ಸೊಬಗು, ಸಾಂಪ್ರದಾಯಿಕ ವಾದ್ಯದೊಂದಿಗೆ ಹೊತ್ತುಕೊಂಡು ನಗರದಲ್ಲಿ ಸಂಚರಿಸಿ ಶಾಂತಾದುರ್ಗಾ (ಭೂಮ್ತಾಯಿ) ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಯಿತು.ದೇವಿಯ ಕಳಸ ಸ್ವಾಗತಿಸಲು ನಗರದ ತುಂಬೆಲ್ಲ ತಳಿರು ತೋರಣಗಳಿಂದ ಸಿಂಗರಿಸಿ ರಂಗೋಲಿ ಹಾಕಿದ್ದರು. ಶ್ರೀ ದೇವರ ಕಳಸವನ್ನು ಉದಯ ಗಣಪತಿ ಗುನಗಾ ಹೊತ್ತು ಸಾಗಿದರು. ಅರ್ಚಕ ಗಣಪತಿ ಭಟ್ ಪೂಜಾ ಕೈಕಂರ್ಯ ನಡೆಸಿಕೊಟ್ಟರು. ನಗರದ ಕಾಳಮ್ಮ ದೇವಸ್ಥಾನದ ಎದುರು ಏ. 27ರಂದು (ಶ್ರೀ ದೇವರ ಅಣ್ಣನಾದ ಶ್ರೀ ಬೊಮ್ಮಯ್ಯ ದೇವರನ್ನು ಕರೆಯುವ ಧಾರ್ಮಿಕ ಪದ್ಧತಿ) ಕಿರು ಬಂಡಿಹಬ್ಬ ನಡೆಯಲಿದ್ದು, 28ರ ರಾತ್ರಿ ಮಾಸ್ತಿ ಅಗ್ನಿ ಪ್ರವೇಶ, ಏ. 30ರಂದು ದೊಡ್ಡ ಬಂಡಿಹಬ್ಬ ಹಾಗೂ ಮೇ 1ರಂದು ಸಂಕಲ್ಪಿತ ಹರಕೆ ಸಮರ್ಪಣೆ ಕಾರ್ಯಕ್ರಮ ನಡೆಯಲಿದೆ ಎಂದು ಕಳಸ ದೇವಸ್ಥಾನದ ಬಿಡಗುನಗರಾದ ವಾಸುದೇವ ನೀಲಪ್ಪ ಗುನಗಾ ತಿಳಿಸಿದ್ದಾರೆ. ಈ ಸಂದರ್ಭ ಶ್ರೀ ಶಾಂತಾದುರ್ಗಾ ದೇವಸ್ಥಾನದ ಆಡಳಿತ ಮಂಡಳಿಯ ಟ್ರಸ್ಟಿಗಳು ದೇವಸ್ಥಾನದ ಹಕ್ಕುದಾರರು, ಕಟಗಿದಾರರು ಹಾಜರಿದ್ದು ಉತ್ಸವದ ಮೆರಗನ್ನು ಹೆಚ್ಚಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.