ಸರ್ಕಾರಿ ಆಸ್ಪತ್ರೆಯಲ್ಲೇ ಗರ್ಭಕಂಠ ಕ್ಯಾನ್ಸರ್‌ ಲಸಿಕೆ!

KannadaprabhaNewsNetwork |  
Published : Mar 29, 2026, 02:30 AM IST
ರೋಟರಿ ಕ್ಲಬ್‌ ಆಫ್‌ ಸೆಂಟ್ರಲ್‌ ಅನುದಾನದ ಅಡಿ ಎಫ್‌ಪಿಎಐ ಆಯೋಜಿಸಿದ್ದ ಅಭಿಯಾನದಲ್ಲಿ 9 ರಿಂದ 14 ವರ್ಷದ ಮಕ್ಕಳಿಗೆ ಗರ್ಭಕಂಠ ಕ್ಯಾನ್ಸರ್‌ ಲಸಿಕೆ ಹಾಗೂ ಸರ್ಟಿಫಿಕೇಟ್‌ ವಿತರಣೆ. | Kannada Prabha

ಸಾರಾಂಶ

ವಿವಿಧ ರೀತಿಯ ಕ್ಯಾನ್ಸರ್‌ಗಳಲ್ಲಿ ಗರ್ಭಕಂಠದ ಕ್ಯಾನ್ಸರ್‌ ಎರಡನೇ ಸ್ಥಾನದಲ್ಲಿದೆ. 40ರ ನಂತರ ಮಹಿಳೆಯರಿಗೆ ಹೆಚ್ಚಾಗಿ ಕಾಣಿಸಿಕೊಳ್ಳುವ ಈ ಮಾರಕ ರೋಗಕ್ಕೆ ಮಕ್ಕಳಿದ್ದಾಗಲೇ ಮುನ್ನೆಚ್ಚರಿಕೆ ಕ್ರಮವಾಗಿ ಲಸಿಕೆ ಹಾಕಿಕೊಂಡರೆ ತಡೆಯಬಹುದು.

ಬಸವರಾಜ ಹಿರೇಮಠ

ಧಾರವಾಡ:

ಮಹಿಳೆಯರಲ್ಲಿ ಅತೀ ವೇಗವಾಗಿ ಹರಡುತ್ತಿರುವ ಗರ್ಭಕಂಠದ ಕ್ಯಾನ್ಸರ್‌ ತಡೆಯಲು ಇದೀಗ ಆರೋಗ್ಯ ಇಲಾಖೆ ಕಾರ್ಯೋನ್ಮುಖವಾಗಿದೆ. ದುಬಾರಿ ವೆಚ್ಚ ಭರಿಸಿ ಖಾಸಗಿಯಾಗಿ ಪಡೆಯಬೇಕಿದ್ದ ಎಚ್‌ಪಿವಿ ಲಸಿಕೆಯನ್ನು ಸರ್ಕಾರದಿಂದಲೇ ಎಲ್ಲ ಆಸ್ಪತ್ರೆಗಳಲ್ಲಿ ನೀಡಲಾಗುತ್ತಿದೆ.

ವಿವಿಧ ರೀತಿಯ ಕ್ಯಾನ್ಸರ್‌ಗಳಲ್ಲಿ ಗರ್ಭಕಂಠದ ಕ್ಯಾನ್ಸರ್‌ ಎರಡನೇ ಸ್ಥಾನದಲ್ಲಿದೆ. 40ರ ನಂತರ ಮಹಿಳೆಯರಿಗೆ ಹೆಚ್ಚಾಗಿ ಕಾಣಿಸಿಕೊಳ್ಳುವ ಈ ಮಾರಕ ರೋಗಕ್ಕೆ ಮಕ್ಕಳಿದ್ದಾಗಲೇ ಮುನ್ನೆಚ್ಚರಿಕೆ ಕ್ರಮವಾಗಿ ಲಸಿಕೆ ಹಾಕಿಕೊಂಡರೆ ತಡೆಯಬಹುದು. ಈ ಹಿನ್ನೆಲೆಯಲ್ಲಿ ಸರ್ಕಾರ 14ರಿಂದ 15 ವಯಸ್ಸಿನ ಮಕ್ಕಳಿಗೆ ಈ ಲಸಿಕಾಕರಣ ಶುರು ಮಾಡಿದೆ.

ಸರ್ಕಾರಿ ಆಸ್ಪತ್ರೆಯಲ್ಲಿ ಲಭ್ಯ:

ಮಹಿಳೆಯರಿಗೆ ಗರ್ಭಕಂಠದ ಕ್ಯಾನ್ಸರ್‌ ತಗುಲದಂತೆ ತಡೆಯುವಲ್ಲಿ ಪರಿಣಾಮಕಾರಿ ಎಂದು ಪರಿಗಣಿಸಲಾಗಿರುವ ಎಚ್‌ಪಿವಿ (ಹ್ಯೂಮನ್ ಪ್ಯಾಪಿಲೋಮ ವೈರಸ್) ಲಸಿಕೆಯನ್ನು ಮಾ. 10ರಿಂದಲೇ ನೀಡಲು ಶುರುವಾಗಿದೆ. ಬರೀ ಜಿಲ್ಲಾಸ್ಪತ್ರೆ ಮಾತ್ರವಲ್ಲದೇ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ ಸೇರಿದಂತೆ ಸರ್ಕಾರದ ಎಲ್ಲ ರೀತಿಯ ಆಸ್ಪತ್ರೆಗಳಲ್ಲಿ ಈ ಲಸಿಕೆ ಲಭ್ಯ. 14 ವರ್ಷದಿಂದ 15 ವರ್ಷದೊಳಗಿನ ಬಾಲಕಿಯರಿಗೆ ಉಚಿತವಾಗಿ ಲಸಿಕೆ ನೀಡಲು ಸರ್ಕಾರ ನಿರ್ಧರಿಸಿದೆ. ಜಿಲ್ಲೆಯಲ್ಲಿ ಈ ವಯೋಮಾನದ ಅಂದಾಜು 20 ಸಾವಿರಕ್ಕೂ ಅಧಿಕ ಬಾಲಕಿಯರಿದ್ದಾರೆ. ಪ್ರತಿ ಬಾಲಕಿಗೆ ಎಚ್‌ಪಿವಿ ಲಸಿಕೆಯ ಒಂದು ಡೋಸ್ ಮಾತ್ರ ನೀಡಬೇಕೆಂದು ಸರ್ಕಾರ ನಿರ್ದೇಶನ ನೀಡಿದೆ. ಜಿಲ್ಲೆಗೆ ಮೊದಲ ಹಂತದಲ್ಲಿ 20,500 ಡೋಸ್‌ ಪೂರೈಕೆಯಾಗಿದ್ದು, ಒಟ್ಟು ಜನಸಂಖ್ಯೆಯ ಶೇ. 1ರಷ್ಟು ಲಸಿಕೆ ಪೂರೈಕೆಯಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಸ್‌.ಎಂ. ಹೊನಕೇರಿ ಮಾಹಿತಿ ನೀಡಿದರು.

ಲಸಿಕೆ ನೀಡುವ ಬಗ್ಗೆ ಶುಶ್ರೂಷಕರಿಗೆ ತರಬೇತಿ ನೀಡಲಾಗಿದೆ. ಈಗಾಗಲೇ ನೀಡಲಾಗುವ ಇತರೆ ಲಸಿಕೆಗಳ ಮಾದರಿಯಲ್ಲೇ ಈ ಲಸಿಕೆಯನ್ನೂ ನೀಡಲಾಗುತ್ತದೆ. ಪ್ರತಿಯೊಂದು ಶಾಲೆಗಳಿಗೆ ಹೋಗಿ ಬಾಲಕಿಯರಿಗೆ ಲಸಿಕೆ ಬಗ್ಗೆ ಮಾಹಿತಿ ನೀಡಿ, ಪ್ರಯೋಜನ ಪಡೆಯುವಂತೆ ತಿಳಿಸಲು ಸೂಚಿಸಲಾಗಿದೆ. ಜೊತೆಗೆ ಬಾಲಕಿಯರು ತಂದೆ-ತಾಯಿಯ ಅನುಮತಿ ಪಡೆದು, ಪತ್ರದಲ್ಲಿ ಸಹಿ ಪಡೆದ ಬಳಿಕವೇ ಲಸಿಕೆ ಪಡೆಯಲು ಮುಂದಾಗುವಂತೆ ತಿಳಿಸಬೇಕು ಎಂದು ಶಾಲೆಯ ಮುಖ್ಯ ಶಿಕ್ಷಕರಿಗೆ ತಿಳಿಸಲಾಗಿದೆ ಎಂದು ಡಾ. ಹೊನಕೇರಿ ತಿಳಿಸಿದರು.

ಸರ್ಕಾರಿ ಆಸ್ಪತ್ರೆಗಳಿಗೆ ಬೆಳಗ್ಗೆ 10ರಿಂದ ಮಧ್ಯಾಹ್ನ 2ರ ಅವಧಿಯಲ್ಲಿ ತಮ್ಮ ಪೋಷಕರಿಂದಿಗೆ ಭೇಟಿ ನೀಡಿ, ಲಸಿಕೆ ಹಾಕಿಸಿಕೊಳ್ಳಬಹುದು. ರಜಾ ದಿನಗಳಲ್ಲಿ ಲಸಿಕೆ ಹಾಕಲಾಗುವುದಿಲ್ಲ. ಲಸಿಕೆ ಪಡೆದ ಬಳಿಕ ಮುಂಜಾಗ್ರತಾ ಕ್ರಮವಾಗಿ ಮಕ್ಕಳನ್ನು ಅರ್ಧಗಂಟೆ ಅಥವಾ ಸ್ವಲ್ಪ ಸಮಯದ ವರೆಗೆ ಅಲ್ಲೇ ಇರಲು ತಿಳಿಸುತ್ತೇವೆ ಎಂದವರು ತಿಳಿಸಿದರು.

ಎಫ್‌ಪಿಎಐದಿಂದ 3 ಸಾವಿರ ಮಕ್ಕಳಿಗೆ ಲಸಿಕೆ:

ಸರ್ಕಾರದಿಂದ ಈ ಲಸಿಕಾಕರಣಕ್ಕೂ ಮುಂಚೆಯೇ 2022ರಿಂದ ಇಲ್ಲಿಯ ಫ್ಯಾಮಿಲಿ ಪ್ಲಾನಿಂಗ್‌ ಅಸೋಸಿಯೇಶನ್‌ ಆಫ್‌ ಇಂಡಿಯಾ (ಎಫ್‌ಪಿಎಐ) ಜಿಲ್ಲಾದ್ಯಂತ ಗರ್ಭಕಂಠ ಕ್ಯಾನ್ಸರ್‌ ತಡೆಯುವಲ್ಲಿ ಕಾರ್ಯ ಆರಂಭಿಸಿತ್ತು. ಬರೀ 14 ವಯಸ್ಸಿನ ಬಾಲಕಿಯರು ಮಾತ್ರವಲ್ಲದೇ 9ರಿಂದ 14ನೇ ವಯಸ್ಸಿನ 3000 ಬಾಲಕಿಯರಿಗೆ ಈ ವರೆಗೆ ಲಸಿಕೆ ಹಾಕಿದೆ. ಈ ಪೈಕಿ 2500 ಲಸಿಕೆಗೆ ರೋಟರಿ ಕ್ಲಬ್‌ ಗ್ಲೋಬಲ್‌ನಿಂದ ಅನುದಾನ ದೊರೆತಿದೆ. ಇದರೊಂದಿಗೆ ಗರ್ಭಕಂಠ ಕ್ಯಾನ್ಸರ್‌ ಮುಕ್ತ ಹಳ್ಳಿ ಮಾಡುವ ಉದ್ದೇಶದಿಂದ ಗ್ರಾಮಗಳಿಗೆ ಸಂಚರಿಸಿ 30 ವರ್ಷದ ಮಹಿಳೆಯರಿಗೆ ತಪಾಸಣೆ ಹಾಗೂ ಚಿಕಿತ್ಸೆ ಸಹ ಮಾಡಲಾಗಿದೆ. ಆದರೆ, ಯಾವುದೇ ವೈಜ್ಞಾನಿಕ ಆಧಾರವಿಲ್ಲದೇ ಕೆಲವರು ಈ ಲಸಿಕೆಯಿಂದ ಮಕ್ಕಳಾಗುವುದಿಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಈ ಲಸಿಕೆಯಿಂದ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಲಿದೆಯೇ ಹೊರತು ಮಕ್ಕಳಾಗದೇ ಇರುವ ಪ್ರಶ್ನೆಯೇ ಇಲ್ಲ ಎಂದು ಎಫ್‌ಪಿಎಐನ ವ್ಯವಸ್ಥಾಪಕಿ ಸುಜಾತಾ ಆನಿಶೆಟ್ಟರ್‌ ಕನ್ನಡಪ್ರಭಕ್ಕೆ ಮಾಹಿತಿ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಣಿಪಾಲ ಕೆಎಂಸಿ: ರಕ್ತ ವರ್ಗಾವಣೆ ಸೇವೆ ರಾಷ್ಟ್ರೀಯ ಕಾರ್ಯಾಗಾರ
ಆರೋಗ್ಯ ಸ್ಥಿರವಾಗಿಟ್ಟುಕೊಳ್ಳಲು ಆಯುರ್ವೇದ ಸಹಕಾರಿ