ಗಾಳಿ, ಮಳೆಯ ವೇಳೆ ವಿದ್ಯುತ್‌ ಅನಾಹುತ ತಪ್ಪಿಸಲು ಸೆಸ್ಕ್‌ ಸನ್ನದ್ಧ

KannadaprabhaNewsNetwork | Published : Apr 17, 2025 12:50 AM

ಸಾರಾಂಶ

ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ ನಿಯಮಿತ (ಸೆಸ್ಕ್‌) ಗ್ರಾಹಕರಿಗೆ ಅಡಚಣೆರಹಿತವಾದ ವಿದ್ಯುತ್‌ ಸೇವೆ ನೀಡುತ್ತಾ ಬಂದಿದೆ. ಪ್ರಸ್ತುತ ಪೂರ್ವ ಮುಂಗಾರು ಆರಂಭ ಆಗುತ್ತಿರುವ ವೇಳೆ ಉಂಟಾಗುವ ವಿದ್ಯುತ್ ‌ಸಮಸ್ಯೆಗಳು, ಅಪಾಯಗಳ ಕುರಿತಂತೆ ಜಾಗೃತಿ ಮೂಡಿಸಿ ಎಚ್ಚರವಹಿಸಲು ಕ್ರಮವಹಿಸಲಾಗಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ ನಿಯಮಿತ (ಸೆಸ್ಕ್‌) ಗ್ರಾಹಕರಿಗೆ ಅಡಚಣೆರಹಿತವಾದ ವಿದ್ಯುತ್‌ ಸೇವೆ ನೀಡುತ್ತಾ ಬಂದಿದೆ. ಪ್ರಸ್ತುತ ಪೂರ್ವ ಮುಂಗಾರು ಆರಂಭ ಆಗುತ್ತಿರುವ ವೇಳೆ ಉಂಟಾಗುವ ವಿದ್ಯುತ್ ‌ಸಮಸ್ಯೆಗಳು, ಅಪಾಯಗಳ ಕುರಿತಂತೆ ಜಾಗೃತಿ ಮೂಡಿಸಿ ಎಚ್ಚರವಹಿಸಲು ಕ್ರಮವಹಿಸಲಾಗಿದೆ.

ಸೆಸ್ಕ್ ವ್ಯಾಪ್ತಿಯ 5 ಜಿಲ್ಲೆಗಳಲ್ಲಿ ಪೂರ್ವ ಮುಂಗಾರು ಆರಂಭವಾಗಿ ಅಲ್ಲಲ್ಲಿ ಮಳೆಯಾಗುತ್ತಿದೆ. ಇಂತಹ ಸಂದರ್ಭಗಳಲ್ಲಿ ಅತಿಯಾದ ಗಾಳಿ ಮತ್ತು ಮಳೆಯಿಂದ ವಿದ್ಯುತ್ ಅನಾಹುತಗಳು ಸಂಭವಿಸುವ ಸಾಧ್ಯತೆ ಇದೆ. ಮಳೆಯಿಂದ ಸಂಭವಿಸಬಹುದಾದ ವಿದ್ಯುತ್‌ ಅವಘಡಗಳು ಹಾಗೂ ತೊಂದರೆಗಳನ್ನು ಎದುರಿಸಲು ಸೆಸ್ಕ್ ಸನ್ನದ್ಧವಾಗಿದೆ. ಈ ಸಂಬಂಧ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸೆಸ್ಕ್‌ ಅಧ್ಯಕ್ಷರೂ ಆಗಿರುವ ಶಾಸಕ ರಮೇಶ್‌ ಬಂಡಿಸಿದ್ದೇಗೌಡ ಅವರು ನಿಗಮದ ಅಧಿಕಾರಿಗಳಿಗೆ ಸೂಚಿಸಿದರು.

ಮಳೆಯ ಸಂದರ್ಭದಲ್ಲಿ ಉಂಟಾಗುವ ಪ್ರಾಕೃತಿಕ ವಿಕೋಪ ಪರಿಸ್ಥಿತಿ ಎದುರಿಸಲು ಸೆಸ್ಕ್‌ ಸನ್ನದ್ಧವಾಗಿದ್ದರೆ ಗ್ರಾಹಕರ ಸುರಕ್ಷತೆ ಬಗ್ಗೆಯೂ ಹೆಚ್ಚಿನ ನಿಗಾವಹಿಸಲಾಗಿದ್ದು, ಸ್ಥಳೀಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಗ್ರಾಹಕರಿಗೆ ಅಗತ್ಯವಾದ ಸೇವೆ ನೀಡಲು ಕಾರ್ಯಪ್ರವೃತ್ತರಾಗಿದ್ದಾರೆ. ಅದರಂತೆ ಸಾರ್ವಜನಿಕರು ಅತಿಯಾದ ಗಾಳಿ ಮತ್ತು ಮಳೆಯ ಸಂದರ್ಭದಲ್ಲಿ ವಿದ್ಯುತ್ ಅಪಾಯಗಳು ಸಂಭವಿಸದಂತೆ ಅಗತ್ಯ ಮುನ್ನೆಚ್ಚರಿಕೆವಹಿಸಲು ಕೋರಿದ್ದಾರೆ.

ಅಲ್ಲದೇ ತಮ್ಮ ಸುತ್ತಮುಲ್ಲಿನ ಪ್ರದೇಶಗಳಲ್ಲಿ ವಿದ್ಯುತ್‌ ತಂತಿಗಳು ತುಂಡಾಗಿರುವುದು, ವಿದ್ಯುತ್‌ ಕಂಬಗಳು ಹಾನಿಯಾಗಿರುವುದು ಅಥವಾ ಟ್ರಾನ್ಸ್‌ ಫಾರ್ಮರ್‌ ಗಳಲ್ಲಿ ಸಮಸ್ಯೆಗಳು ಕಂಡುಬಂದಲ್ಲಿ ಸಾರ್ವಜನಿಕರು ತುರ್ತಾಗಿ 24x7 ಸಹಾಯವಾಣಿ 1912 ಅಥವಾ ನಿಗಮದ ವಾಟ್ಸಾಪ್‌ ಸಂಖ್ಯೆ 94489 91912 ಸಂಖ್ಯೆಗೆ ಫೋಟೋ ಸಹಿತವಾಗಿ ಮಾಹಿತಿ ನೀಡುವಂತೆ ಅಥವಾ ಸ್ಥಳೀಯ ಸೆಸ್ಕ್‌ ಅಧಿಕಾರಿ, ಸಿಬ್ಬಂದಿಗೆ ಮಾಹಿತಿ ನೀಡುವಂತೆ ಸೆಸ್ಕ್‌ ಪ್ರಭಾರ ವ್ಯವಸ್ಥಾಪಕ ನಿರ್ದೇಶಕ ಕೆ.ಎಂ. ಮುನಿಗೋಪಾಲ್‌ ರಾಜು ತಿಳಿಸಿದ್ದಾರೆ.ಅಗತ್ಯ ಮುನ್ನೆಚ್ಚರಿಕೆ ಕ್ರಮಗಳು

- ರಸ್ತೆ ಬದಿ ಅಥವಾ ಇತರೆ ಕಡೆಗಳಲ್ಲಿ ತುಂಡಾಗಿ ಬಿದ್ದ ತಂತಿಗಳನ್ನು ಮುಟ್ಟಬೇಡಿ.

- ಬಟ್ಟೆ ಒಣಗಿಸಲು ವಿದ್ಯುತ್‌ ಕಂಬಗಳು, ವೈಯರ್‌ಗಳನ್ನು ಬಳಸಬೇಡಿ.

- ವಿದ್ಯುತ್‌ ಕಂಬಗಳು ಅಥವಾ ಟ್ರಾನ್ಸ್‌ಫಾರ್ಮರ್‌ ಅಕ್ಕಪಕ್ಕದಲ್ಲಿ ದನಕರುಗಳನ್ನು ಕಟ್ಟಿ ಹಾಕಬೇಡಿ.

- ಮಳೆ ಹಾಗೂ ಗಾಳಿಯ ಸಂದರ್ಭದಲ್ಲಿ ಟ್ರಾನ್ಸ್‌ಫಾರ್ಮರ್‌ಗಳ ಸಮೀಪ ನಿಲ್ಲದಂತೆ ಎಚ್ಚರವಹಿಸಿ.

Share this article