ಎಂಜಿನಿಯರಿಂಗ್ ಸೇರಿ ವಿವಿಧ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆ 2026ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ) ದಿನಾಂಕವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಶುಕ್ರವಾರ ಪ್ರಕಟಿಸಿದ್ದು, ಏ.23, 24ರಂದು ಪರೀಕ್ಷೆಗಳು ನಡೆಯಲಿವೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಎಂಜಿನಿಯರಿಂಗ್ ಸೇರಿ ವಿವಿಧ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆ 2026ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ) ದಿನಾಂಕವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಶುಕ್ರವಾರ ಪ್ರಕಟಿಸಿದ್ದು, ಏ.23, 24ರಂದು ಪರೀಕ್ಷೆಗಳು ನಡೆಯಲಿವೆ. ಏ.23ರ ಬೆಳಗ್ಗೆ 10.30ರಿಂದ 11.50ರವರೆಗೆ ಭೌತಶಾಸ್ತ್ರ, ಮಧ್ಯಾಹ್ನ 2.30ರಿಂದ 3.50ರವರೆಗೆ ರಸಾಯನಶಾಸ್ತ್ರ, ಏ.24ರ ಬೆಳಗ್ಗೆ ಗಣಿತಶಾಸ್ತ್ರ ಮಧ್ಯಾಹ್ನ ಜೀವಶಾಸ್ತ್ರ ಪರೀಕ್ಷೆಗಳು ನಡೆಯಲಿವೆ. ಹೊರನಾಡು ಮತ್ತು ಗಡಿನಾಡು ಕನ್ನಡಿಗ ವಿದ್ಯಾರ್ಥಿಗಳಿಗೆ ಏ.22ರ ಬೆಳಗ್ಗೆ 10.30ರಿಂದ 11.30ರವರೆಗೆ ಕನ್ನಡ ಭಾಷಾ ಪರೀಕ್ಷೆಗಳು ನಡೆಯಲಿವೆ. ಜ.15ರಿಂದ ಸಿಇಟಿ ಪರೀಕ್ಷೆಗೆ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು ಎಂದು ಪ್ರಾಧಿಕಾರ ವೇಳಾಪಟ್ಟಿ ಪ್ರಕಟಿಸಿದೆ.ಇನ್ನು, ಸಿಇಟಿ ಪ್ರಕ್ರಿಯೆಯನ್ನು ಮತ್ತಷ್ಟು ವಿದ್ಯಾರ್ಥಿಸ್ನೇಹಿಯಾಗಿಸಲು ಪ್ರಾಧಿಕಾರ ಹಲವು ಹೊಸ ಸುಧಾರಣೆ, ಸಿದ್ಧತಾ ಕ್ರಮ ಮಾಡಿಕೊಂಡಿದೆ. ಪ್ರಮುಖವಾಗಿ ವಿದ್ಯಾರ್ಥಿಗಳಿಗೆ ನೀಡಲು ಸಿಇಟಿ ಕುರಿತ ಸಮಗ್ರ ಮಾಹಿತಿಯುಳ್ಳ ‘ಸಿಇಟಿ ದಿಕ್ಸೂಚಿ’ ಕಿರು ಹೊತ್ತಿಗೆ ಹೊರತಂದಿದೆ. ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ್ ಪ್ರಕಾಶ್ ಪಾಟೀಲ್ ಮಲ್ಲೇಶ್ವರದ ಕೆಇಎ ಕಚೇರಿಯಲ್ಲಿ ಈ ಹೊತ್ತಿಗೆ ಬಿಡುಗಡೆ ಮಾಡಿದರು. ಬಳಿಕ ಮಾತನಾಡಿದ ಡಾ.ಸುಧಾಕರ್, ದಶಕಗಳಿಂದ ಸಿಇಟಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವ ಪ್ರಾಧಿಕಾರವು, 2025ರಲ್ಲಿ ಎದುರಾದ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು 2026ನೇ ಸಾಲಿನ ಸಿಇಟಿ ಪ್ರಕ್ರಿಯೆಗೆ ಹೊಸ ರೀತಿಯಲ್ಲಿ ಸಿದ್ಧತೆ ಮಾಡಿಕೊಂಡಿದೆ. ಸಿಇಟಿ ದಿಕ್ಸೂಚಿಯಲ್ಲಿ ಅರ್ಜಿ ಸಲ್ಲಿಕೆಯಿಂದ ಹಿಡಿದು ಆಪ್ಷನ್ ಎಂಟ್ರಿ, ದಾಖಲೆಗಳ ಪರಿಶೀಲನೆ, ಸೀಟು ಹಂಚಿಕೆ, ಶುಲ್ಕ ಪಾವತಿ, ಕಾಲೇಜು ದಾಖಲಾತಿ ವರೆಗೆ ಸಂಪೂರ್ಣ ಮಾಹಿತಿ ಇರುತ್ತದೆ. ಈ ಬಾರಿ ಸಿಇಟಿಗೆ ನೋಂದಾಯಿಸುವ ರಾಜ್ಯ 3,112 ಸರ್ಕಾರಿ ಹಾಗೂ ಖಾಸಗಿ ವಿಜ್ಞಾನ ಪಿಯು ಕಾಲೇಜುಗಳು ಹಾಗೂ ಸಿಬಿಎಸ್‌ಇ, ಐಸಿಎಸ್‌ಇಯಿಂದ ಸಿಇಟಿಗೆ ನೋಂದಾಯಿಸುವ 3.75 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೂ ಈ ಹೊತ್ತಿಗೆಯನ್ನು ಉಚಿತವಾಗಿ ನೀಡಲಾಗುತ್ತದೆ ಎಂದು ತಿಳಿಸಿದರು.ಕಾಲೇಜು ಹಂತದಲ್ಲೇ ಅರ್ಜಿ ಭರ್ತಿ: ಕಳೆದ ಬಾರಿ ಆನ್‌ಲೈನ್‌ನಲ್ಲಿ ಪರಿಶೀಲನೆಯಾಗದವರ ದಾಖಲೆಗಳನ್ನು ಕಾಲೇಜು ಹಂತದಲ್ಲಿ ಪರಿಶೀಲನೆಗೆ ಅವಕಾಶ ನೀಡಲಾಗಿತ್ತು. ಈ ಪ್ರಯೋಗ ಯಶಸ್ವಿಯಾಗಿದ್ದು, ಈ ಬಾರಿ ಕಾಲೇಜು ಹಂತದಲ್ಲೇ ಅರ್ಜಿ ಭರ್ತಿ ಮಾಡುವುದಕ್ಕೂ ನೆರವಾಗಲು ಕೆಇಎ ಮುಂದಾಗಿದೆ. ಇದಕ್ಕಾಗಿ ಪ್ರತಿ ಕಾಲೇಜಿನ ಆಯ್ದ ಉಪನ್ಯಾಸಕರಿಗೆ ಅರ್ಜಿ ಭರ್ತಿ ಬಗ್ಗೆ ಆನ್‌ಲೈನ್ ತರಬೇತಿ ನೀಡಲಾಗುವುದು. ಆ ಉಪನ್ಯಾಸಕರು ತಮ್ಮ ಕಾಲೇಜಿನ ಸಿಬ್ಬಂದಿಗೆ ತರಬೇತಿ ನೀಡಿ, ವಿದ್ಯಾರ್ಥಿಗಳ ಅರ್ಜಿ ಭರ್ತಿ ಮೇಲ್ವಿಚಾರಣೆ ನಡೆಸಬಹುದು. ಇದರಿಂದ ಸೈಬರ್ ಸೆಂಟರ್ ಗಳ ಮೇಲೆ ಅವಲಂಬನೆ, ತಪ್ಪುಗಳಾಗುವುದನ್ನು ಕಡಿಮೆ ಮಾಡಬಹುದು ಎಂದರು.ಎಂಜಿನಿಯರಿಂಗ್ ಕಾಲೇಜಲ್ಲಿ ಹೆಲ್ಪ್‌ಡೆಸ್ಕ್:ಕೋರ್ಸ್/ಕಾಲೇಜು (ಆಪ್ಷನ್ಸ್ ಎಂಟ್ರಿ) ಆಯ್ಕೆ ದಾಖಲಿಸಲು ನೆರವಾಗುವ ‘ಸಿಇಟಿ ಮಂಥನ’ ಕಾರ್ಯಕ್ರಮವನ್ನು ಕಳೆದ ವರ್ಷ ಸೀಮಿತ ಸಂಖ್ಯೆಯ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ನಡೆಸಲಾಗಿತ್ತು. ಇದು ವಿದ್ಯಾರ್ಥಿ/ಪೋಷಕರ ಮನ ಗೆದ್ದಿತ್ತು. ಹೀಗಾಗಿ ಈ ಬಾರಿ ಇನ್ನೂ ಹೆಚ್ಚಿನ ಕಾಲೇಜುಗಳಲ್ಲಿ ಈ ಕಾರ್ಯಕ್ರಮ ನಡೆಸಲಾಗುವುದು. ಅಲ್ಲದೆ, ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸರ್ಕಾರಿ, ಅನುದಾನಿತ ಎಂಜಿನಿಯರಿಂಗ್ ಕಾಲೇಜು ಹಾಗೂ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಕೂಡ ಆಪ್ಷನ್ಸ್ ಎಂಟ್ರಿ ಸಂದರ್ಭದಲ್ಲಿ ‘ಹೆಲ್ಪ್ ಡೆಸ್ಕ್’ ತೆರೆಯಲಾಗುವುದು. ಉಳಿದಂತೆ ಕಳೆದ ಬಾರಿಯಂತೆ ಪ್ರಾಧಿಕಾರದ ಫೇಸ್‌ಬುಕ್, ಎಕ್ಸ್ ಖಾತೆ, ಕೆಇಎ ವಿಕಸನ ಯೂಟ್ಯೂಬ್ ಚಾನೆಲ್, ಕೆಇಎ ಬಾಟ್ ಇತರೆ ಸಮಾಜಿಕ ಜಾಲತಾಣಗಳಲ್ಲಿ ಸಿಇಟಿ ಬಗ್ಗೆ ಮಾಹಿತಿ ನೀಡಲಾಗಿದೆ ಎಂದು ವಿವರಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.