- "ನಿಮ್ಮ ಹಕ್ಕು ನಿಮ್ಮ ಧ್ವನಿ " ಮಕ್ಕಳೊಂದಿಗೆ ಸಂವಾದ ಕಾರ್ಯಕ್ರಮ । ಜಿಲ್ಲೆಯಲ್ಲಿ ಬಾಲ್ಯವಿವಾಹಗಳ ತಡೆಯಲು ತಾಕೀತು
ಕನ್ನಡಪ್ರಭ ವಾರ್ತೆ ದಾವಣಗೆರೆ
ತಾಯಿ ಗರ್ಭದಲ್ಲಿರುವಾಗಲೇ ಮಗುವಿನ ಹಕ್ಕುಗಳು ಆರಂಭವಾಗುತ್ತವೆ. ಮಕ್ಕಳ ಹಕ್ಕುಗಳ ರಕ್ಷಣೆಗಾಗಿಯೇ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ರಚಿಸಲಾಗಿದೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸದಸ್ಯೆ ಅಪರ್ಣಾ ಎಂ. ಕೊಳ್ಳ ಹೇಳಿದರು.ನಗರದ ಎ.ವಿ.ಕೆ. ಕಾಲೇಜು ರಸ್ತೆಯಲ್ಲಿನ ಗುರುಭವನದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪೊಲೀಸ್ ಇಲಾಖೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕಾರ್ಮಿಕ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ವತಿಯಿಂದ ಆಯೋಜಿಸಲಾಗಿದ್ದ ನಿಮ್ಮ ಹಕ್ಕು ನಿಮ್ಮ ಧ್ವನಿ ಮಕ್ಕಳೊಂದಿಗೆ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಇಂದಿಗೂ ಬಾಲ್ಯ ವಿವಾಹ ಪ್ರಕರಣ ದಾಖಲಾಗುತ್ತಿವೆ. ಮಾರ್ಚ್ ಮತ್ತು ಏಪ್ರಿಲ್ ಮಾಹೆಗಳಲ್ಲಿ ಮದುವೆ ನಡೆಯುವ ಸಂಭವಗಳಿರುತ್ತವೆ. ಈ ಸಂದರ್ಭದಲ್ಲಿ ಬಾಲ್ಯ ವಿವಾಹ ನಡೆಯುವುದು ಕಂಡುಬಂದಲ್ಲಿ ಮಕ್ಕಳ ಸಹಾಯವಾಣಿ ಸಂಖ್ಯೆ 1098 ಅಥವಾ ಪೊಲೀಸ್ ಇಲಾಖೆ ಸಹಾಯವಾಣಿ ಸಂಖ್ಯೆ 112ಗೆ ಸಂಪರ್ಕಿಸಲು ತಿಳಿಸಿದರು.
ಇದಕ್ಕೆ ದನಿಗೂಡಿಸಿದ ಜಿಲ್ಲಾ ಎಸ್‌ಪಿ ಉಮಾ ಪ್ರಶಾಂತ್, ಜಿಲ್ಲೆಯಲ್ಲಿ ಇಲಾಖೆ ಮಾಹಿತಿ ಪ್ರಕಾರ ಪ್ರಸ್ತುತ 820 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಮನೆ ಮನೆಗೆ ಪೊಲೀಸ್ ಭೇಟಿ ನೀಡಿದಾಗ ವಿದ್ಯಾಭ್ಯಾಸದ ಕಡೆ ಒಲವಿಲ್ಲದಿರವುದು, ಬಾಲಕಾರ್ಮಿಕ ಪದ್ಧತಿ, ಬಡತನ ಹಾಗೂ ಪೋಷಕರಿಗೆ ಶಿಕ್ಷಣದ ಮಹತ್ವ ತಿಳಿಯದಿರುವುದು, ಈ ಎಲ್ಲ ಕಾರಣಗಳಿಂದ ಹೊರಗುಳಿದಿದ್ದಾರೆ. ಆದರೂ ಮನೆ ಮನೆಗೆ ಭೇಟಿ ನೀಡುವ ಸಂದರ್ಭದಲ್ಲಿ ಪೋಷಕರ ಮನವೊಲಿಸಿ ಕರೆತರುವ ಪ್ರಯತ್ನ ಮಾಡಲಾಗುತ್ತಿದೆ. ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ಸೌಲಭ್ಯಗಳನ್ನು ಸದುಪಯೋಗ ಪಡೆದುಕೊಳ್ಳಬೇಕು. ಗುಣಮಟ್ಟದ ಶಿಕ್ಷಣ ಪಡೆದು ನಮ್ಮಂತೆಯೇ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು ಎಂದು ಹುರಿದುಂಬಿಸಿದರು.
ನಗರದ ಎಸ್‌ಪಿಎಸ್ ಶಾಲೆಯಲ್ಲಿ ಸುಸಜ್ಜಿತ ಕಟ್ಟಡ ಗುಣಮಟ್ಟದ ಶಿಕ್ಷಣವಿದೆ. ಆದರೆ ಆಟದ ಮೈದಾನವಿಲ್ಲ ಎಂದು ಬೇಸರಿಸಿದರು. ಆಗ ಸಂಬಂಧಪಟ್ಟ ಅಧಿಕಾರಿಗಳು ಪ್ರತಿಕ್ರಿಯಿಸಿ ನಗರದಲ್ಲಿ ಲಭ್ಯವಿರುವ ಸರ್ಕಾರಿ ನಿವೇಶನ ಪಡೆದು ನೀಡಲಾಗುವುದು ಭರವಸೆ ನೀಡಿದರು.
ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೊಟ್ರೇಶ್ ಅಧ್ಯಕ್ಷತೆ ಕಾರ್ಯಕ್ರಮದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕವಿತಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ರಾಜಾನಾಯ್ಕ, ಬಡಾವಣೆ ಪೊಲೀಸ್ ಇನ್‌ಸ್ಪೆಕ್ಟರ್ ಗಾಯತ್ರಿ ಮತ್ತಿತರರು ಇದ್ದರು.
(ಬಾಕ್ಸ್) * ಪುಸ್ತಕ ಓದುವ ಹವ್ಯಾಸ ಒಳ್ಳೆಯದು: ಎಸ್‌ಪಿ ಸಲಹೆ ಇಂದಿನ ಮಕ್ಕಳು ಟಿವಿ, ಮೊಬೈಲ್ ಬಳಕೆ, ಆನ್ ಲೈನ್ ಗೇಮಿಂಗ್ ಗೀಳಿಗೆ ಹೆಚ್ಚು ಬಲಿಯಾಗುತ್ತಿದ್ದಾರೆ. ಇದರಿಂದ ಓದುವ ಆಸಕ್ತಿ, ಏಕಾಗ್ರತೆ ಪಠ್ಯಗಳ ಜೊತೆಗಿನ ಒಡನಾಟವನ್ನೇ ಮರೆಯುತ್ತಿದ್ದಾರೆ. ಇದು ಆತಂಕಕಾರಿ ವಿಚಾರ. ಆದ್ದರಿಂದ ಮಕ್ಕಳು ಪುಸ್ತಕ ಓದುವ ಹವ್ಯಾಸ ರೂಢಿಸಿಕೊಳ್ಳಬೇಕು ಎಂದು ಎಸ್‌ಪಿ ಉಮಾ ಪ್ರಶಾಂತ್ ಹೇಳಿದರು.
ಪೋಕ್ಸೋ ಕಾಯ್ದೆಗೆ ಸಂಬಂಧಪಟ್ಟಂತೆ ಪ್ರತಿಕ್ರಿಯಿಸಿದ ಎಸ್‌ಪಿ ಅವರು ಪ್ರತಿ ವರ್ಷ ಸುಮಾರು 90 ರಿಂದ 100 ಪ್ರಕರಣಗಳು ದಾಖಲಾಗುತ್ತಿವೆ. ಇಂತಹ ಪ್ರಕರಣ ಇತ್ಯರ್ಥಪಡಿಸುವ ಸಲುವಾಗಿ ವಿಶೇಷ ನ್ಯಾಯಾಲಯಗಳು ಸಹ ಸ್ಥಾಪಿಸಲಾಗಿದೆ. ಪ್ರಸಕ್ತ ವರ್ಷದಲ್ಲಿ ಶೇ.94 ಪೋಕೋ ಪ್ರಕರಣ ದಾಖಲಾಗಿವೆ ಎಂದು ಮಾಹಿತಿ ನೀಡಿದರು.
ಈ ಪ್ರಕರಣಗಳು ಹೆಚ್ಚಿನದಾಗಿ ಹದಿಹರೆಯದ ವಯಸ್ಸಿನಲ್ಲಿ ಅಥವಾ ಓದುವ ವಯಸ್ಸಿನಲ್ಲಿ ಪ್ರೀತಿ - ಪ್ರೇಮದ ಪಾಶಕ್ಕೆ ಬಲಯಾಗಿ ಅತಿ ಹೆಚ್ಚು ಪ್ರಕರಣ ದಾಖಲಾಗುತ್ತವೆ. ಮಕ್ಕಳು ಓದುವ ವಯಸ್ಸಿನಲ್ಲಿ ಶ್ರದ್ಧೆಯಿಂದ ಅಧ್ಯಯನ ಮಾಡಬೇಕು. ಪ್ರೀತಿ, ಪ್ರೇಮ ಎಂಬ ಅಮಲಿಗೆ ಬಿದ್ದು ಭವಿಷ್ಯದ ಜೀವನ ಹಾಳು ಮಾಡಿಕೊಳ್ಳಬೇಡಿ ಎಂದು ಸಲಹೆ ನೀಡಿದರು.- - -
-2ಕೆಡಿವಿಜಿ37:ದಾವಣಗೆರೆಯಲ್ಲಿ ಜಿಲ್ಲಾಡಳಿತದಿಂದ ನಡೆದ ನಿಮ್ಮ ಹಕ್ಕು ನಿಮ್ಮ ಧ್ವನಿ ಮಕ್ಕಳೊಂದಿಗೆ ಸಂವಾದ ಕಾರ್ಯಕ್ರಮವನ್ನು ಅಪರ್ಣಾ ಎಂ.ಕೊಳ್ಳ ಉದ್ಘಾಟಿಸಿದರು.