ಕನ್ನಡಪ್ರಭ ವಾರ್ತೆ ದಾವಣಗೆರೆ
ಸಿಇಟಿ ರ್‍ಯಾಂಕಿಂಗ್‌ನಲ್ಲಿ ನಗರದ ಸರ್ ಎಂ.ವಿ.ಕಾಲೇಜಿನ ವಿದ್ಯಾರ್ಥಿನಿ ಎಸ್.ಅಮೂಲ್ಯ ರಾಜ್ಯಕ್ಕೆ 2ನೇ ರ್‍ಯಾಂಕ್ ಗಳಿಸುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಎಸ್.ಅಮೂಲ್ಯ 5 ವಿಭಾಗಗಳಲ್ಲಿ ರಾಜ್ಯಕ್ಕೆ 2ನೇ ರ‍್ಯಾಂಕ್ ಪಡೆದಿದ್ದಾರೆ.
ವೆಟರ್ನರಿ, ನರ್ಸಿಂಗ್, ಯೋಗ–ನ್ಯಾಚುರೋಪತಿ, ಬಿ.ಫಾರ್ಮಾ, ಫಾರ್ಮಾ ‘ಡಿ’ ವಿಭಾಗದಲ್ಲಿ ಎಸ್.ಅಮೂಲ್ಯ ದ್ವಿತೀಯ ಸ್ಥಾನ ಪಡೆದಿದ್ದರೆ, ಫಾರ್ಮ್ ಸೈನ್ಸನ್ಸ್(ಬಿಎಸ್ಸಿ ಅಗ್ರಿ) ವಿಭಾಗದಲ್ಲಿ 10ನೇ ರ‍್ಯಾಂಕ್ ಗಳಿಸಿದ್ದಾರೆ. ಇಲ್ಲಿನ ಸರ್ ಎಂ.ವಿ.ಕಾಲೇಜಿನ ವಿದ್ಯಾರ್ಥಿನಿ ಅಮೂಲ್ಯ ಇಡೀ ರಾಜ್ಯಕ್ಕೆ 2ನೇ ರ್ಯಾಂಕ್ ಗಳಿಸಿದ ಹಿನ್ನೆಲೆಯಲ್ಲಿ ಕಾಲೇಜಿನಲ್ಲಿ ಸಂಸ್ಥೆಯ ಕಾರ್ಯದರ್ಶಿ ಶ್ರೀಧರ್, ಆಡಳಿತ ಮಂಡಳಿಯಿಂದ ಸಿಹಿ ತಿನ್ನಿಸಿ, ಹೂಗುಚ್ಛ ನೀಡುವ ಮೂಲಕ ಸನ್ಮಾನಿಸಿ, ಗೌರವಿಸಿದರು.ಇಲ್ಲಿನ ಸರಸ್ವತಿ ಬಡಾವಣೆಯ ನಿವಾಸಿಯಾದ ವೆಟರ್ನರಿ ಅಧಿಕಾರಿ ಶಿವಮೂರ್ತಿ, ಗಂಗಮ್ಮ ದಂಪತಿ ಪುತ್ರಿಯಾದ ಅಮೂಲ್ಯ ಚಿಕ್ಕಂದಿನಿಂದಲೂ ಉತ್ತಮವಾಗಿ ಓದುತ್ತಾ ಬಂದಿದ್ದು, ವೈದ್ಯೆಯಾಗುವ ಕನಸನ್ನು ಕಂಡಿರುವ ಅಮೂಲ್ಯ ರಾಜ್ಯಮಟ್ಟದಲ್ಲಿ 2ನೇ ರ್‍ಯಾಂಕ್ ಪಡೆದಿದ್ದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ.
ಮಗಳ ಸಾಧನೆಗೆ ಸಂತಸ ಹಂಚಿಕೊಂಡ ತಂದೆ ಶಿವಮೂರ್ತಿ, ಪರೀಕ್ಷೆಗಾಗಿ ಸಾಕಷ್ಟು ಸಿದ್ಧತೆ ಮಾಡಿಕೊಂಡಿದ್ದ ಅಮೂಲ್ಯಗೆ ವೈದ್ಯಳಾಗುವ ಗುರಿ ಇದೆ. ಅಮೂಲ್ಯ ಪರಿಶ್ರಮಕ್ಕೆ ಈಗ ತಕ್ಕ ಫಲ ಸಿಕ್ಕಿದೆ. ನೀಟ್ ಪರೀಕ್ಷೆಯಲ್ಲೂ ಅಮೂಲ್ಯ ಇದೇ ರೀತಿಯ ಸಾಧನೆ ಮಾಡಲಿ ಎಂದು ಹಾರೈಸಿದರು.
ಶ್ರೀ ಚೈತನ್ಯ ಪಿಯು ಕಾಲೇಜಿನ ಎಂ.ಸುಚಿತಾ ರಾಜ್ಯಕ್ಕೆ ತೃತೀಯ ರ್‍ಯಾಂಕ್ ಪಡೆದಿದ್ದಾರೆ. 3 ವಿಭಾಗಗಳಲ್ಲಿ ರಾಜ್ಯಕ್ಕೆ ಸುಚಿತಾ 3ನೇ ರ‍್ಯಾಂಕ್ ಹಾಗೂ ಎರಡು ವಿಭಾಗಗಳಲ್ಲಿ 5ನೇ ರ‍್ಯಾಂಕ್ ಪಡೆದಿದ್ದಾರೆ. ಎಂಜಿನಿಯರಿಂಗ್‌ನಲ್ಲಿ ಅಗ್ರ 10ರಲ್ಲಿ ದಾವಣಗೆರೆ ಜಿಲ್ಲೆಯ ಯಾವೊಬ್ಬ ವಿದ್ಯಾರ್ಥಿ-ವಿದ್ಯಾರ್ಥಿನಿಯರೂ ಸ್ಥಾನ ಪಡೆದಿಲ್ಲ.