ಭ್ರಷ್ಟಾಚಾರದ ವಿರುದ್ಧ ಎಲ್ಲರೂ ಹೋರಾಡಿ: ನ್ಯಾ.ಎಲ್‌.ನಾರಾಯಣಸ್ವಾಮಿ

KannadaprabhaNewsNetwork |  
Published : Jun 07, 2026, 01:15 AM IST
6ಕೆಡಿವಿಜಿ1-ದಾವಣಗೆರೆ ರಾ.ಲ.ಕಾನೂನು ಕಾಲೇಜಿನಲ್ಲಿ ಶನಿವಾರ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿದ ಲೋಕಪಾಲ ಭಾರತದ ನ್ಯಾಯಾಂಗ ಸದಸ್ಯರು, ಹಿಮಾಚಲ ಪ್ರದೇಶದ ಉಚ್ಚ ನ್ಯಾಯಾಲಯದ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಲ್.ನಾರಾಯಣಸ್ವಾಮಿ. | Kannada Prabha

ಸಾರಾಂಶ

ಭ್ರಷ್ಟಾಚಾರವೆಂಬುದು ಇಡೀ ವ್ಯವಸ್ಥೆಗೆ ಅಂಟಿರುವ ಕ್ಯಾನ್ಸರ್ ರೋಗದಂತೆ ಬಾಧಿಸುತ್ತಿದ್ದು, ಇಂತಹ ಭ್ರಷ್ಟಾಚಾರದ ವಿರುದ್ಧ ಪ್ರತಿಯೊಬ್ಬರೂ ಸ್ವಯಂ ಪ್ರೇರಣೆಯಿಂದ ಹೋರಾಡಬೇಕು ಎದು ನವದೆಹಲಿಯ ಲೋಕಪಾಲ ಭಾರತದ ನ್ಯಾಯಾಂಗ ಸದಸ್ಯರು, ಹಿಮಾಚಲ ಪ್ರದೇಶದ ಉಚ್ಚ ನ್ಯಾಯಾಲಯದ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಲ್.ನಾರಾಯಣಸ್ವಾಮಿ ಸಲಹೆ ನೀಡಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಭ್ರಷ್ಟಾಚಾರವೆಂಬುದು ಇಡೀ ವ್ಯವಸ್ಥೆಗೆ ಅಂಟಿರುವ ಕ್ಯಾನ್ಸರ್ ರೋಗದಂತೆ ಬಾಧಿಸುತ್ತಿದ್ದು, ಇಂತಹ ಭ್ರಷ್ಟಾಚಾರದ ವಿರುದ್ಧ ಪ್ರತಿಯೊಬ್ಬರೂ ಸ್ವಯಂ ಪ್ರೇರಣೆಯಿಂದ ಹೋರಾಡಬೇಕು ಎದು ನವದೆಹಲಿಯ ಲೋಕಪಾಲ ಭಾರತದ ನ್ಯಾಯಾಂಗ ಸದಸ್ಯರು, ಹಿಮಾಚಲ ಪ್ರದೇಶದ ಉಚ್ಚ ನ್ಯಾಯಾಲಯದ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಲ್.ನಾರಾಯಣಸ್ವಾಮಿ ಸಲಹೆ ನೀಡಿದರು.

ನಗರದ ಬಾಪೂಜಿ ವಿದ್ಯಾಸಂಸ್ಥೆಯ ಆರ್.ಎಲ್. ಕಾನೂನು ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶದಿಂದ ಕಾಲೇಜಿನ ಸುವರ್ಣ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಆಡಳಿತದಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಬಲಪಡಿಸುವಲ್ಲಿ ಲೋಕಪಾಲ ವ್ಯವಸ್ಥೆಯ ಪಾತ್ರ ವಿಷಯವಾಗಿ ಹಮ್ಮಿಕೊಂಡಿದ್ದ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿ, ಭ್ರಷ್ಟಾಚಾರ ನಿರ್ಮೂಲನೆಗೆ ಪ್ರತಿಯೊಬ್ಬರೂ ಹೋರಾಡಬೇಕು ಎಂದರು.

ಇಡೀ ಸಮಾಜ ಮತ್ತು ಆಡಳಿತ ವ್ಯವಸ್ಥೆಯನ್ನು ಕೊಳೆಸುವ ಮಹಾ ಪಿಡುಗಾಗಿ ಭ್ರಷ್ಟಾಚಾರ ಕಾಡುತ್ತಿದೆ. ಇದು ವ್ಯವಸ್ಥೆಗೆ ಅಂಟಿಕೊಂಡಿರುವ ಕ್ಯಾನ್ಸರ್ ಆಗಿದ್ದು, ಭ್ರಷ್ಟಾಚಾರವಿರುವ ಜಾಗದಲ್ಲಿ ಸಾಮಾಜಿಕ ಸಮಾನತೆ, ನ್ಯಾಯ ಸಿಗಲು ಸಾಧ್ಯವೇ ಇಲ್ಲ. ಹಣ ಕೊಟ್ಟರಷ್ಟೇ ನ್ಯಾಯ ಎಂಬುದು ವ್ಯವಸ್ಥೆಯ ದುರಂತ ಎಂದು ತಿಳಿಸಿದರು.

ಸಾರ್ವಜನಿಕರ ಕೆಲಸ, ಕಾರ್ಯಕ್ಕೆ, ನ್ಯಾಯಕ್ಕೆ ಹಣ ಪಾವತಿಸಬೇಕಾದ ಸ್ಥಿತಿ ಬಂದರೆ ಅದನ್ನು ನ್ಯಾಯ ಎನ್ನಲು ಸಾಧ್ಯವಿಲ್ಲ. ಜಾಗತಿಕ ಭ್ರಷ್ಟಾಚಾರದ ಸೂಚ್ಯಂಕದಲ್ಲಿ ಭಾರತ 86ನೇ ಸ್ಥಾನದಲ್ಲಿದೆ. ಇದು ನಾವೆಲ್ಲರೂ ಗಂಭೀರವಾಗಿ ಆಲೋಚಿಸಬೇಕಾದ ಸಂಗತಿ ಎಂದರು.

ವಿಶ್ವ ಸಂಸ್ಥೆಯ ಕರೆಯ ಮೇರೆಗೆ ಭ್ರಷ್ಚಾಚಾರ ತಡೆಗೆ ಸರ್ಕಾರದ ಹಸ್ತಕ್ಷೇಪವಿಲ್ಲದ ಸ್ವತಂತ್ರ ತನಿಖಾ ಸಂಸ್ಥೆಯ ಅಗತ್ಯವಿತ್ತು. ದೇಶದಲ್ಲಿ ಅಣ್ಣಾ ಹಜಾರೆ, ಜಸ್ಟೀಸ್‌ ಸಂತೋಷ್ ಹೆಗಡೆ ಸೇರಿ ಅನೇಕ ಮಹನೀಯರು ಸರ್ಕಾರದ ವಿರುದ್ಧ ನಡೆಸಿದ ಹೋರಾಟದಿಂದಾಗಿ 2013ರಲ್ಲಿ ಲೋಪಾಲ ಮತ್ತು ಲೋಕಾಯುಕ್ತ ಕಾಯ್ದೆ ಜಾರಿಗೊಂಡಿತು. ಈ ಕಾಯ್ದೆಯು ಯಾವೇ ತಪ್ಪು ಮಾಡಿದರೂ ಅಂತಹವರ ವಿರುದ್ದ ತನಿಖೆ ನಡೆಸುವ ಮತ್ತು ಕಾನೂನು ಕ್ರಮ ಜರುಗಿಸುವ ಸರ್ವಾಧಿಕಾರ ಹೊಂದಿದೆ ಎಂದು ವಿವರಿಸಿದರು.

ಬಾಪೂಜಿ ವಿದ್ಯಾಸಂಸ್ಥೆ ಆಡಳಿತ ಮಂಡಳಿ ಅಧ್ಯಕ್ಷ ಆರ್.ಎಲ್.ಉಮಾಶಂಕರ ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಪ್ರಾಚಾರ್ಯ ಬಿ.ಪಿ.ಬಸವನಗೌಡ, ನಿರ್ದೇಶಕ ಎಂ.ಸೋಮಶೇಖರಪ್ಪ, ಸಹಾಯಕ ಪ್ರಾಧ್ಯಾಪಕ ಕೆ.ಎನ್.ಪ್ರದೀಪ, ಸಹಾಯಕ ಪ್ರಾಧ್ಯಾಪಕಿ ಟಿ.ಸಿ.ಪಂಕಜಾ, ಹಿರಿಯ ವಕೀಲ ಹನುಮಂತಪ್ಪ ಇತರರು ಇದ್ದರು.

ಲೋಕಪಾಲಕ್ಕೆ ಸಾರ್ವಜನಿಕರು ದೂರು ನೀಡುವಾಗ ಕೇವಲ ಗಾಳಿ ಮಾತನ್ನು ನಂಬಿ ನೀಡಬಾರದು. ದೂರಿನ ಜತೆ ನಿಖರ ಸಾಕ್ಷ್ಯ, ಅಫಿಡವಿಟ್ ಸಲ್ಲಿಸುವುದು ಕಡ್ಡಾಯ. ಪ್ರಚಾರಕ್ಕೆ, ಸುಳ್ಳು ದೂರು ನೀಡಿದರೆ, ಅಂತಹ ದೂರುದಾರರ ವಿರುದ್ಧವೇ ಕಠಿಣ ಕಾನೂನು ಕ್ರಮ ತಪ್ಪಿದ್ದಲ್ಲ. ಸುಳ್ಳು ಆರೋಪ ಹೊರಿಸುವವರಿಗೆ ಜೈಲು ಶಿಕ್ಷೆ ಮತ್ತು ಭಾರೀ ದಂಡ ವಿಧಿಸಲು ಕಾಯ್ದೆಯಲ್ಲಿ ಅವಕಾಶವಿದೆ.

ಎಲ್.ನಾರಾಯಣಸ್ವಾಮಿ ನ್ಯಾಯಮೂರ್ತಿ

ಮಹಿಳೆಯರು ಕಾನೂನು ಸೇವೆಗೆ ಹೆಚ್ಚು ಬರಬೇಕು

ಹೆಣ್ಣುಮಕ್ಕಳು ಕಾನೂನು ಪದವಿ ಓದುವುದು ಸ್ವಲ್ಪ ಕಷ್ಟವಾಗಬಹುದು. ಆದರೆ, ಎಲ್ಲ ಕ್ಷೇತ್ರದಲ್ಲೂ ಸಾಧನೆ ಮಾಡಿರುವ ಹೆಣ್ಣುಮಕ್ಕಳಿಗೆ ಇದೂ ಸಾಧ್ಯವಾಗಲಿದೆ. ದೇಶದಲ್ಲಿ ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯಗಳ ವಿರುದ್ಧ ಕಾನೂನು ಹೋರಾಟ ನಡೆಸಲು ಹೆಚ್ಚಿನ ಮಹಿಳೆಯರು ಕಾನೂನು ವೃತ್ತಿಗೆ ಬರಬೇಕಾದ ಅಗತ್ಯವಿದೆ. ಕಾನೂನು ಕೇವಲ ನ್ಯಾಯಾಲಯಕ್ಕೆ ಸೀಮಿತವಲ್ಲ, ಅದು ಇಡೀ ಸಮಾಜದ ಆರೋಗ್ಯ ಕಾಯುವ ಸಂಜೀವಿನಿ. ಹಾಗಾಗಿ ವಿದ್ಯಾರ್ಥಿಗಳು ದೇಶದ ಸಂವಿಧಾನ ಮತ್ತು ಕಾನೂನನ್ನು ಎತ್ತಿಹಿಡಿಯುವ ಭರವಸೆಯ ನಾಯಕರಾಗಬೇಕು ಎಂದು ನ್ಯಾಯಮೂರ್ತಿ ಎಲ್.ನಾರಾಯಣಸ್ವಾಮಿ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಂಜಪ್ಪನವರ ನಿಸ್ಪೃಹ ಸೇವೆ ಅನುಕರಣೀಯ: ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ
ಮಲ್ಲಘಟ್ಟ ಸುತ್ತಮುತ್ತ 35 ಕೋಟಿ.ರು. ಅಭಿವೃದ್ಧಿ: ಡಿ.ಕೆ.ಶಿವಕುಮಾರ್