ಹುಬ್ಬಳ್ಳಿ: ಈ ಭಾಗದಲ್ಲಿ ಸಿಜಿಎಚ್‌ಎಸ್ ಕೇಂದ್ರ ತೆರೆಯಬೇಕು ಎನ್ನುವುದು ಸಾಕಷ್ಟು ನೌಕರರ ಬೇಡಿಕೆಯಿತ್ತು. ಅವರ ಬೇಡಿಕೆಯಂತೆ ಕೇಂದ್ರ ಸರ್ಕಾರ ಹು-ಧಾ ಮಹಾನಗರ ಪಾಲಿಕೆ ಸಹಯೋಗದಲ್ಲಿ ಈ ಘಟಕ ತೆರೆದಿದ್ದು, ಫಲಾನುಭವಿಗಳಿಗೆ ಸಾಕಷ್ಟು ಪ್ರಯೋಜನವಾಗಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ಕೇಂದ್ರ ಸರ್ಕಾರದ ಆರೋಗ್ಯ ಯೋಜನೆ ಅಡಿಯಲ್ಲಿ ಸರ್ಕಾರಿ ನೌಕರರು, ಪಿಂಚಣಿದಾರರು ಮತ್ತು ಅವರ ಕುಟುಂಬಗಳಿಗೆ ಸಮಗ್ರ ಆರೋಗ್ಯ ಸೇವೆ ಒದಗಿಸುವ ಕೇಂದ್ರವಾಗಿದೆ. ಈ ಕೇಂದ್ರದಲ್ಲಿ ವೈದ್ಯಕೀಯ ಸಮಾಲೋಚನೆ, ರೋಗನಿರ್ಣಯ ಪರೀಕ್ಷೆಗಳು ಮತ್ತು ಇತರ ಆರೋಗ್ಯ ಸೌಲಭ್ಯಗಳು ಲಭ್ಯವಿದ್ದು, ಗದಗ, ಹಾವೇರಿ, ಧಾರವಾಡ ಭಾಗದ ಕೇಂದ್ರ ಸರ್ಕಾರಿ ನೌಕರರು, ನಿವೃತ್ತರು ಹಾಗೂ ಅವರ ಅವಲಂಬಿತರ ಇದರ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ ಎಂದರು.ದೇಶದಲ್ಲಿ ಅಂದಾಜು 50 ಲಕ್ಷ ಮಂದಿ ಈ ಯೋಜನೆ ಅಡಿಯಲ್ಲಿ ಬರುತ್ತಾರೆ. ರಾಜ್ಯದಲ್ಲಿ ಸುಮಾರು 1.75 ಲಕ್ಷ ಮಂದಿಯಿದ್ದು, ಹುಬ್ಬಳ್ಳಿ ಕೇಂದ್ರದ ವ್ಯಾಪ್ತಿಯಲ್ಲಿ 50 ಸಾವಿರ ಮಂದಿಯಿದ್ದಾರೆ. ಯಾವುದಾದರೂ ಚಿಕಿತ್ಸೆ ಸರ್ಕಾರಿ ಆಸ್ಪತ್ರೆಯಲ್ಲಿ ಇಲ್ಲದಿದ್ದಾಗ, ಖಾಸಗಿ ಆಸ್ಪತ್ರೆಗೆ ತೋರಿಸಬೇಕೆಂದರೆ ಈ ಕೇಂದ್ರದ ಶಿಫಾರಸು ಬೇಕಾಗುತ್ತದೆ. ಫಲಾನುಭವಿಗಳಿಗೆ ಕೇಂದ್ರದಿಂದ ಶೀಘ್ರ ಸ್ಮಾರ್ಟ್ ಕಾರ್ಡ್ ವಿತರಿಸಲಾಗುವುದು ಎಂದರು.
ದೀರ್ಘಕಾಲಿನ ಪರಿಣಾಮ ಬೀರುವ ಕಾಯಿಲೆಗಳನ್ನು ಮುಂಜಾಗ್ರತಾ ಚಿಕಿತ್ಸೆ ಮೂಲಕ ತಡೆಗಟ್ಟಬಹುದು. ಇತ್ತೀಚಿಗೆ ವಿಜ್ಞಾನ ಸಂಶೋಧನೆಯಲ್ಲಿ ಸಾಕಷ್ಟು ಬದಲಾವಣೆಯಾಗಿದ್ದು, ಕ್ಯಾನ್ಸರ್ ರೋಗವನ್ನು ಸಹ ಶೇ. 70ರಷ್ಟು ಗುಣಪಡಿಸಬಹುದಾಗಿದೆ. ಸೂಕ್ತ ಸಮಯದಲ್ಲಿ ಚಿಕಿತ್ಸೆ, ಔಷಧೋಪಚಾರ ಪಡೆಯಬೇಕು. ಕೆಲವು ರೋಗಕ್ಕೆ ಚಿಕಿತ್ಸೆ ವೆಚ್ಚ ದುಬಾರಿಯಾದರೂ, ಸರ್ಕಾರದ ಯೋಜನೆಯಲ್ಲಿ ಅದರ ಪ್ರಯೋಜನ ಪಡೆಯಬಹುದಾಗಿದೆ ಎಂದರು.ಶಾಸಕ ಮಹೇಶ ಟೆಂಗಿನಕಾಯಿ, ವಿಪ ಸದಸ್ಯ ಪ್ರದೀಪ ಶೆಟ್ಟರ್, ಪಾಲಿಕೆ ಮೇಯರ್ ಜ್ಯೋತಿ ಪಾಟೀಲ ಮಾತನಾಡಿದರು. ಉಪ ಮೇಯರ್ ಸಂತೋಷ ಚವ್ಹಾಣ, ಪಾಲಿಕೆ ಆಯುಕ್ತ ರುದ್ರೇಶ ಘಾಳಿ, ಡಾ. ಶ್ರೀಧರ ದಂಡಪ್ಪನವರ, ಬೆಂಗಳೂರಿನ ಸಿಜಿಎಚ್‌ಎಸ್ ಮುಖ್ಯಸ್ಥೆ ಡಾ. ಗಂಗಮ್ಮ, ನಿರ್ದೇಶಕ ಎಚ್.ಎಸ್. ಪ್ರಸನ್ನ ಸೇರಿದಂತೆ ಹಲವರಿದ್ದರು.