ಹೊಟ್ಟು, ಮೇವಿನ ಅಭಾವ, ಹೆಚ್ಚಿದ ಬೇಡಿಕೆ

KannadaprabhaNewsNetwork |  
Published : Dec 11, 2023, 01:15 AM IST
ಗದಗ ಎಪಿಎಂಸಿ ಮಾರುಕಟ್ಟಿಗೆ ಮಾರಟಕ್ಕೆ ಬಂದ ಹೊಟ್ಟು, ಮೇವಿನ ಟ್ರ್ಯಾಕ್ಟರ್. | Kannada Prabha

ಸಾರಾಂಶ

ಗದಗ ಜಿಲ್ಲೆಯಲ್ಲಿ ಕಳೆದ ವರ್ಷ ಅತಿಯಾದ ಮಳೆಯಿಂದ ತೇವಾಂಶ ಹೆಚ್ಚಾಗಿ ಶೇಂಗಾ ಹೊಟ್ಟು ಭೂಮಿಯಲ್ಲಿ ಇರುವಾಗಲೇ ಕೊಳೆತು ನಾಶವಾಗಿ ಅಷ್ಟಾಗಿ ಶೇಂಗಾ ಹೊಟ್ಟು ಶೇಖರಣೆಯಾಗಿರಲಿಲ್ಲ, ಪ್ರಸಕ್ತ ವರ್ಷ ಮಳೆ ಇಲ್ಲದೆ ಬರಗಾಲ ಛಾಯೆ ಆವರಿಸಿದ್ದು, ಅಷ್ಟೋ ಇಷ್ಟೋ ಮಳೆಗೆ ಬಿತ್ತಿದ ರೈತರು ಫಸಲು ಬೇಡ ಕನಿಷ್ಠ ಪಕ್ಷ ಜಾನುವಾರುಗಳಿಗೆ ಮೇವು ಆಗಲಿ ಎಂದರೆ ತೇವಾಂಶ ಕೊರತೆಯಿಂದ ಬೆಳವಣಿಗೆಯಲ್ಲಿ ಕುಂಠಿತವಾಗಿ ಹೊಟ್ಟು, ಮೇವಿನ ಅಭಾವ ಸೃಷ್ಟಿಯಾಗಿದೆ.

ಜಾನುವಾರುಗಳು ಹೊಂದಿದ ರೈತರಿಗೆ ಸಂಕಷ್ಟ, ಮೇವಿಗೆ ದುಪ್ಪಟ್ಟು ಬೆಲೆ

ಮಹೇಶ ಛಬ್ಬಿ ಕನ್ನಡಪ್ರಭ ವಾರ್ತೆ ಗದಗ

ಕಳೆದ ವರ್ಷ ಅತಿವೃಷ್ಟಿ, ಪ್ರಸಕ್ತ ಅನಾವೃಷ್ಟಿಯಿಂದ ಜಿಲ್ಲೆಯಾದ್ಯಂತ ಜಾನುವಾರುಗಳಿಗೆ ಮೇವಿನ ಅಭಾವ ಸೃಷ್ಟಿಯಾಗಿದ್ದು, ಸದ್ಯ ಹೊಟ್ಟು, ಮೇವಿಗೆ ಬೇಡಿಕೆ ಹೆಚ್ಚಾಗಿದೆ.

ಕಳೆದ ವರ್ಷ ಅತಿಯಾದ ಮಳೆಯಿಂದ ತೇವಾಂಶ ಹೆಚ್ಚಾಗಿ ಶೇಂಗಾ ಹೊಟ್ಟು ಭೂಮಿಯಲ್ಲಿ ಇರುವಾಗಲೇ ಕೊಳೆತು ನಾಶವಾಗಿ ಅಷ್ಟಾಗಿ ಶೇಂಗಾ ಹೊಟ್ಟು ಶೇಖರಣೆಯಾಗಿರಲಿಲ್ಲ, ಪ್ರಸಕ್ತ ವರ್ಷ ಮಳೆ ಇಲ್ಲದೆ ಬರಗಾಲ ಛಾಯೆ ಆವರಿಸಿದ್ದು, ಅಷ್ಟೋ ಇಷ್ಟೋ ಮಳೆಗೆ ಬಿತ್ತಿದ ರೈತರು ಫಸಲು ಬೇಡ ಕನಿಷ್ಠ ಪಕ್ಷ ಜಾನುವಾರುಗಳಿಗೆ ಮೇವು ಆಗಲಿ ಎಂದರೆ ತೇವಾಂಶ ಕೊರತೆಯಿಂದ ಬೆಳವಣೆಗೆಯಲ್ಲಿ ಕುಂಠಿತವಾಗಿ ಹೊಟ್ಟು, ಮೇವಿನ ಅಭಾವ ಸೃಷ್ಟಿಯಾಗಿದೆ.

ರೈತರಿಗೆ ಸಂಕಷ್ಟ:ಸತತ ಅತಿವೃಷ್ಟಿ, ಅನಾವೃಷ್ಟಿಯಿಂದ ಕಂಗಾಲಾದ ರೈತರಿಗೆ ಆರ್ಥಿಕತೆ ಹೊಡೆತದ ಜತೆಗೆ ಜಾನುವಾರುಗಳ ಹೊಂದಿದ ರೈತರಿಗೆ ಹೊಟ್ಟು, ಮೇವಿನ ಕೊರತೆಯಾಗಿ ಬೆಲೆಯಲ್ಲಿ ದುಪ್ಪಟ್ಟಾಗಿದ್ದರಿಂದ ಮತ್ತಷ್ಟು ರೈತರನ್ನು ಸಂಕಷ್ಟಕ್ಕೆ ದೂಡಿದೆ.

ಗದಗ ತಾಲೂಕು ಗ್ರಾಮೀಣ ಭಾಗದಲ್ಲಿ ಕೆಂಪು ಮಣ್ಣಿನ (ಮಸಾರಿ)ಪ್ರದೇಶ ಹೆಚ್ಚಾಗಿದ್ದು, ಈ ಭಾಗದಲ್ಲಿ ಹೆಚ್ಚಾಗಿ ಬಳ್ಳಿ ಶೇಂಗಾ ಬೆಳೆಯುವುದರಿಂದ ಹಾವೇರಿ, ರಾಣಿಬೆನ್ನೂರು, ದಾವಣಗೆರೆ, ಹರಿಹರ, ಕೊಪ್ಪಳ, ಗಂಗಾವತಿ, ಹೊಸಪೇಟೆ ಸೇರಿದಂತೆ ವಿವಿಧ ಭಾಗಗಳಿಂದ ಜಾನುವಾರುಗಳಿಗೆ ಹೊಟ್ಟು ಖರೀದಿಸಲು ರೈತರು ಆಗಮಿಸುತ್ತಿದ್ದು, ಶೇಂಗಾ ಹೊಟ್ಟಿನ ಬಣವಿಗಳ ಗಾತ್ರಗಳಿಗೆ ಅನುಗುಣವಾಗಿ ದರ ನಿಗದಿಯಾಗುತ್ತದೆ. ಸದ್ಯ ಕಳೆದ ವರ್ಷಗಳಿಗಿಂತ ಹೊಟ್ಟಿನ ಬೆಲೆ ದುಪ್ಪಟ್ಟು ಆಗಿದ್ದು, ಎಕರೆ ಹೊಲದ ಹೊಟ್ಟಿಗೆ ರು. ೧೫-೨೦ ಸಾವಿರ, ಎರಡು ಎಕರೆ ಹೊಲದ ಹೊಟ್ಟಿಗೆ ೩೦-೪೦ ಸಾವಿರದ ವರೆಗೆ, ಬಣವಿ ಗಾತ್ರಕ್ಕೆ ಅನುಗುಣವಾಗಿ ಶೇಂಗಾ ಹೊಟ್ಟು ಈಗಾಗಲೇ ಮಾರಾಟವಾಗುತ್ತಿದೆ ಎನ್ನುತ್ತಾರೆ ರೈತರು.

ಗದಗ ಎಪಿಎಂಸಿ ದನದ ಮಾರುಕಟ್ಟೆಯಲ್ಲಿ ಶನಿವಾರ ಒಂದು ಗಾಡಿ ಹೊಟ್ಟು, ಮೇವಿಗೆ ರು. ೮೦೦೦ ದವರೆಗೆ ದರ ವಿತ್ತು, ಅದು ಹಳೆಯ ಮೇವು. ೫೦ ಕೆಜಿಯ ಗಾತ್ರದ ಚೀಲಕ್ಕೆ ೨೦೦ ರಿಂದ ರು. ೨೫೦ ರವರಗೆ ಶೇಂಗಾ ಹೊಟ್ಟನ್ನು ಟಗರು ಮಾರಾಟಗಾರರು ಖರೀದಿಸಿದರು.

ಕಳೆದ ವರ್ಷ ಹಿಂಗಾರು ಬಿತ್ತನೆಯಾದ ನಂತರ ಅತಿಯಾಗಿ ಮಳೆ ಸುರಿದ ಪರಿಣಾಮ ತೇವಾಂಶ ಹೆಚ್ಚಾಗಿ ಬಿಳಿ ಜೋಳ ಬೆಳೆಯಲ್ಲ ನಾಶವಾದ ಕಾರಣ ಕಳೆದ ವರ್ಷವು ಅಷ್ಟಾಗಿ ಮೇವಿನ ಶೇಖರಣೆಯಾಗಲಿಲ್ಲ. ಪ್ರಸಕ್ತ ವರ್ಷ ಹಿಂಗಾರು ಮಳೆಯು ಪ್ರಾರಂಭದಲ್ಲಿ ಅಷ್ಟಾಗಿ ಸುರಿಯದ ಕಾರಣ ಜಿಲ್ಲೆಯಾದ್ಯಂತ ಹೆಚ್ಚಾಗಿ ಕಡಲೆ ಬಿತ್ತನೆಯಾಗಿದ್ದು, ಬಿಳಿ ಜೋಳ ಬಿತ್ತನೆ ಕುಂಠಿತವಾಗಿದೆ. ಮೇವಿನ ಕೊರತಗೆ ಇದೊಂದು ಕಾರಣವಾಗಿದೆ.

ಜಾನುವಾರುಗಳ ರಕ್ಷಣೆ ಮಾಡುವುದು ಹೇಗೆ ಎನ್ನುವುದು ತಿಳಿಯದಂತಾಗಿದೆ. ಶೇಂಗಾ ಹೊಟ್ಟನ್ನು ಹೆಚ್ಚಿನ ಬೆಲೆಗೆ ತಂದು ಟಗರುಗಳನ್ನ ಮೇಯಿಸಿ ಕಳೆದ ವರ್ಷಕ್ಕೆ ಮರಿಗಳನ್ನು ಮಾರಿದರೆ ನಷ್ಟವಾಗುತ್ತದೆ. ಈ ಮಧ್ಯ ಟಗರು ಸಾಕುವುದು ಹೇಗೆ ಎಂಬ ಪ್ರಶ್ನೆ ಕಾಡುತ್ತಿದೆ. ಮೇವಿನ ಅಭಾವದಿಂದ ಎಲ್ಲ ರೈತರಿಗೂ ಸಮಸ್ಯೆಯಾಗಿದೆ ಎಂದು ಕೃಷಿಕ ಮಹಿಳೆ ಮಂಗಳಾ ಕಿರಣ ನೀಲಗುಂದ ಹೇಳಿದರು.

ಸದ್ಯ ಮೇವಿನ ಅಗತ್ಯತೆ ಹೆಚ್ಚಿದ್ದು, ನಮ್ಮ ಮನೆಯ ಸದಸ್ಯರಂತೆ, ಕೃಷಿಕರ ಜೀವನಾಡಿಯಾಗಿರುವ ಜಾನುವಾರಗಳ ರಕ್ಷಣೆ ಮಾಡುವುದು ಸದ್ಯದ ಪರಿಸ್ಥಿತಿಯಲ್ಲಿ ದೊಡ್ಡ ಸವಾಲಾಗಿ ಪರಿಣಮಿಸಿದೆ. ಸರಿಯಾದ ಮಳೆ ಇಲ್ಲದೆ ಸಾಲ, ಸೂಲ ಮಾಡಿ ಖರ್ಚು ಮಾಡಿದಷ್ಟು ಫಸಲು ಬಾರದೇ ಸಂಕಷ್ಟದಲ್ಲಿದ್ದೇವೆ. ಈಗ ಮೇವಿನ ಕೊರತೆಯಾಗಿ ಮತ್ತಷ್ಟ ಸಂಕಷ್ಟಕ್ಕೆ ದೂಡಿದೆ ಎನ್ನುತ್ತಾರೆ ರೈತರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ