ಸಿಬ್ಬಂದಿ ಕೊರತೆಗೆ ಹೈರಾಣಾದ ರೋಗಿಗಳು । ಸರತಿಯಲ್ಲಿ ನಿಂತು ಟೋಕನ್ ಪಡೆದರೂ ದೊರೆಯದ ವೈದ್ಯರು । ಬಡವರಿಗೆ ತೊಂದರೆ
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ರೋಗಿಗಳು ಪರದಾಡಬೇಕಾಗಿದ್ದು ಇದರಿಂದ ಬೇಸತ್ತು ಆಸ್ಪತ್ರೆ ಸಿಬ್ಬಂದಿಗೆ ಹಿಡಿಶಾಪ ಹಾಕುತ್ತಿದ್ದಾರೆ.ಪ್ರತಿ ನಿತ್ಯ ಸಾವಿರಾರು ಜನರು ಬರುವ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು, ಸಿಬ್ಬಂದಿ ಇಲ್ಲದೆ ರೋಗಿಗಳು ಪರಿತಪ್ಪಿಸುತ್ತಿದ್ದು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕಂಡೂ ಕಾಣದಂತೆ ಕಣ್ಮುಚ್ಚಿ ಕುಳಿತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಅಧಿಕಾರಿಗಳು, ರಾಜಕೀಯ ನಾಯಕರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಸರ್ಕಾರಗಳು ಜನರಿಗೆ ಎಷ್ಟೆಲ್ಲಾ ಸೌಲಭ್ಯಗಳನ್ನು ನೀಡಲು ಮುಂದಾದರೂ ನೇರವಾಗಿ ಜನರಿಗೆ ಸೌಲಭ್ಯಗಳು ದೊರೆಯದೆ ಸಮಸ್ಯೆಗಳೇ ಹೆಚ್ಚಾಗುತ್ತಿದ್ದು ಆಯುರ್ವೇದ ವೈದ್ಯರು ಜ್ವರಕ್ಕೆ ಔಷಧಿ ನೀಡಿದರೆ, ಮಕ್ಕಳ ತಜ್ಞ ವೈದ್ಯರು ವೃದ್ಧರಿಗೆ ಔಷಧಿ ನೀಡುವ ಪ್ರಸಂಗಗಳು ಸರ್ವೇ ಸಾಮಾನ್ಯವಾಗಿವೆ.
ರಾಜಕಾರಣಿಗಳು ಹಾಗೂ ರಕ್ಷಾ ಸಮಿತಿಯ ಸದಸ್ಯರಂತೂ ಆಸ್ಪತ್ರೆಯ ಬಗ್ಗೆ ನಿಗಾ ವಹಿಸುವ ಬದಲು ಪೊಲೀಸ್ ಠಾಣೆಗಳ ಎದುರು ರಾಜಕೀಯ ಮಾಡಿಕೊಂಡು ಪಂಚಾಯಿತಿ ಮಾಡುವುದರಲ್ಲಿ ಸಕ್ರಿಯರಾಗಿದ್ದಾರೆ.
ಮಧುಮೇಹ, ಸಕ್ಕರೆ ಕಾಯಿಲೆ ರೋಗಿಗಳಂತೂ ಸರ್ಕಾರಿ ಆಸ್ಪತ್ರೆಗೆ ಹೋಗುವುದೇ ಇಲ್ಲ, ರಸ್ತೆ ಅಪಘಾತವಾಗಿ ಆಸ್ಪತ್ರೆಗೆ ರೋಗಿಯನ್ನು ಕರೆತಂದರೆ ಪ್ರಥಮ ಚಿಕಿತ್ಸೆ ನೀಡಿ ವೈದ್ಯರಿಲ್ಲ ಹಾಸನಕ್ಕೆ ಅಥವಾ ಬೇರೆ ಖಾಸಗಿ ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗಿ ರೋಗಿಯ ಜೀವಕ್ಕೆ ಅಪಾಯವಿದೆ. ಆ್ಯಂಬುಲೆನ್ಸ್‌ಗಳನ್ನು ಕರೆಸುತ್ತೇವೆ, ಕಡಿಮೆ ಖರ್ಚಿನಲ್ಲಿ ಹೋಗಬಹುದು ಎಂದು ಜಾರಿಕೊಳ್ಳುವ ಪ್ರಸಂಗಗಳು ಹೆಚ್ಚಾಗುತ್ತಿವೆ.
ಸರ್ಕಾರಿ ಆಸ್ಪತ್ರೆಯಲ್ಲಿ ಆಗುತ್ತಿರುವ ತೊಂದರೆಗಳಿಂದ ರೋಗಿಗಳು ಬೇಸತ್ತಿದ್ದು ಉದ್ದೇಶಪೂರ್ವಕವಾಗಿ ಜನರಿಗೆ ತೊಂದರೆ ನೀಡಿ ಖಾಸಗಿ ಆಸ್ಪತ್ರೆಗೆ ಹೋಗುವಂತೆ ಮಾಡುತ್ತಿದ್ದಾರೆ. ಇದರ ಬಗ್ಗೆ ಅಧಿಕಾರಿಗಳು ಗಮನಹರಿಸಲಿ.
ಸರ್ಕಾರಿ ಆಸ್ಪತ್ರೆ ಕೇವಲ ನೆಪ ಮಾತ್ರಕ್ಕೆ ಇದ್ದು ಜನರಿಗೆ ಯಾವುದೇ ಸೌಲಭ್ಯಗಳು ಸಿಗುತ್ತಿಲ್ಲ. ಸರ್ಕಾರಿ ಆಸ್ಪತ್ರೆಗೆ ಬೀಗ ಹಾಕಿದರೆ ಎಲ್ಲವೂ ಸರಿಹೋಗುತ್ತದೆ.