ಸರಗಳ್ಳತನ: ನಾಲ್ವರು ಅಂತಾರಾಜ್ಯ ಕಳ್ಳರ ಬಂಧನ

KannadaprabhaNewsNetwork |  
Published : Feb 12, 2026, 02:30 AM IST
ಪೊಟೊ: 10ಎಸ್‌ಎಂಜಿಕೆಪಿ09 | Kannada Prabha

ಸಾರಾಂಶ

ಒಂಟಿ ಮನೆ ದರೋಡೆ ಮತ್ತು ಸರಗಳ್ಳತನ ಮಾಡುತ್ತಿದ್ದ ನಾಲ್ವರು ಅಂತರಾಜ್ಯ ಕಳ್ಳರನ್ನು ಶಿವಮೊಗ್ಗ ವಿನೋಬನಗರ ಠಾಣೆ ಪೊಲೀಸರು ಬಂಧಿಸಿದ್ದು, 25 ಲಕ್ಷ ರು. ಮೌಲ್ಯದ ಚಿನ್ನಾಭರಣ, ಬೈಕ್ ಅನ್ನು ಜಪ್ತಿ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಒಂಟಿ ಮನೆ ದರೋಡೆ ಮತ್ತು ಸರಗಳ್ಳತನ ಮಾಡುತ್ತಿದ್ದ ನಾಲ್ವರು ಅಂತರಾಜ್ಯ ಕಳ್ಳರನ್ನು ಶಿವಮೊಗ್ಗ ವಿನೋಬನಗರ ಠಾಣೆ ಪೊಲೀಸರು ಬಂಧಿಸಿದ್ದು, 25 ಲಕ್ಷ ರು. ಮೌಲ್ಯದ ಚಿನ್ನಾಭರಣ, ಬೈಕ್ ಅನ್ನು ಜಪ್ತಿ ಮಾಡಿದ್ದಾರೆ.

ತಮಿಳುನಾಡು ಕೊಯಮತ್ತೂರಿನ ಅರಸು ಅಲಿಯಾಸ್ ಆರ್.ವಲ್ಲರಸು(25), ಸೇಲಂ ತಾಲೂಕಿನ ಕೇಶವನ್(43), ಹೊಸೂರು ಬತ್ತಲಪಲ್ಲಿ, ಹಾಲಿ ಬೆಂಗಳೂರು ಅತ್ತಿಬೆಲೆ ಎಡವನಹಳ್ಳಿಯ ಸತೀಶ್‌ಕುಮಾರ್(40) ಹಾಗೂ ಬೆಂಗಳೂರು ಗೋರಿಪಾಳ್ಯದ ಕಾಲಾ ಅಲಿಯಾಸ್ ಇಬ್ರಾಹಿಂ ಪಾಶಾ ಬಂಧಿತರು.

ಶಿವಮೊಗ್ಗ ವಿನೋಬನಗರ 16ನೇ ತಿರುವಿನಲ್ಲಿ 2025ರ ನ.18 ರಂದು ಬೈಕ್‌ನಲ್ಲಿ ಬಂದಿದ್ದ ಇಬ್ಬರು, ಪಾದಚಾರಿ ಹೊನ್ನಮ್ಮ ಅವರ ಬಂಗಾರದ ಮಾಂಗಲ್ಯ ಸರ ಕಿತ್ತು ಪರಾರಿಯಾಗಿದ್ದರು. ಈ ಬಗ್ಗೆ ವಿನೋಬನಗರ ಠಾಣೆಗೆ ದೂರು ನೀಡಿದ್ದರು. ಡಿವೈಎಸ್‌ಪಿ ಟಿ.ಸಂಜೀವ್ ಕುಮಾರ್ ಮಾರ್ಗದರ್ಶನದಲ್ಲಿ ವಿನೋಬನಗರ ಸಿಪಿಐ ಡಿ.ಕೆ.ಸಂತೋಷಕುಮಾರ್ ಉಸ್ತುವಾರಿಯಲ್ಲಿ ಪಿಎಸ್‌ಐ ಜಿ.ತಿರುಮಲೇಶ್ ಮತ್ತು ಸಿಬ್ಬಂದಿ ಕೆ.ಆರ್.ರಾಜು, ಬಿ.ಚಂದ್ರಾನಾಯ್ಕ, ಎಸ್.ಜಿ.ಮಲ್ಲಪ್ಪ, ಎನ್.ಕೆ.ಅರುಣ್‌ಕುಮಾರ್, ಮನುಶಂಕರ ಅವರನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ.

ವಿನೋಬನಗರ 16ನೇ ತಿರುವಿನಲ್ಲಿ ಮಾಂಗಲ್ಯಸರ ಕಳ್ಳತನ ಮಾಡಿದ್ದ ಪ್ರಕರಣದಲ್ಲಿ ವಲ್ಲರಸು ಮತ್ತು ಇಬ್ರಾಹಿಂ ಪಾಶಾನಿಂದ 4.80 ಲಕ್ಷ ರು. ಮೌಲ್ಯದ 40 ಗ್ರಾಂ ಬಂಗಾರದ ಗಟ್ಟಿ, 1.50 ಲಕ್ಷ ರು. ಮೌಲ್ಯದ ಬೈಕ್, ಕೇಶವನ್ ಕಡೆಯಿಂದ ಮೈಸೂರು ಪಿರಿಯಾಪಟ್ಟಣ ಠಾಣೆ ವ್ಯಾಪ್ತಿಯ ಪ್ರಕರಣದಲ್ಲಿ 8.50 ಲಕ್ಷ ರು. ಮೌಲ್ಯದ 70 ಗ್ರಾಂ ಮಾಂಗಲ್ಯ ಸರ ಹಾಗೂ ವಿನೋಬನಗರ ಠಾಣಾ ವ್ಯಾಪ್ತಿಯ ಪ್ರಕರಣದಲ್ಲಿ 10.20 ಲಕ್ಷ ರು. ಮೌಲ್ಯದ 60 ಗ್ರಾಂ ಬಂಗಾರದ ಆಭರಣ ಜಪ್ತಿ ಮಾಡಿದ್ದಾರೆ.

ತುಮಕೂರು ಕೊಲೆ ಕೇಸ್‌ನಲ್ಲಿ ಇಬ್ಬರು ಭಾಗಿ: ಸರಗಳ್ಳರು ತುಮಕೂರಿನಲ್ಲಿ ಇರುವುದನ್ನು ಖಚಿತಪಡಿಸಿಕೊಂಡು ವಿನೋಬನಗರ ಠಾಣೆ ಪೊಲೀಸರು ಬಂಧನಕ್ಕೆ ತೆರಳಿದ್ದರು. ಅಷ್ಟರಲ್ಲೇ ತುಮಕೂರಿನಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಕೇಶವನ್ ಮತ್ತು ಸತೀಶ್‌ಕುಮಾರ್ ಭಾಗಿಯಾಗಿ ಅಲ್ಲಿಂದ ಪರಾರಿಯಾಗಿದ್ದರು. ಬೆಂಗಳೂರಿನ ಅತ್ತಿಬೆಲೆಯ ಎಡವನಹಳ್ಳಿಯಲ್ಲಿದ್ದರು. ಖಚಿತ ಮಾಹಿತಿ ಮೇರೆಗೆ ಶಿವಮೊಗ್ಗ ಪೊಲೀಸರೇ ಕೊಲೆ ಕೇಸ್‌ನಲ್ಲಿ ಭಾಗಿಯಾಗಿದ್ದ ಇಬ್ಬರನ್ನು ಬಂಧಿಸಿ ತುಮಕೂರು ಪೊಲೀಸರಿಗೆ ಒಪ್ಪಿಸಿದ್ದರು. ಇದೇ ವೇಳೆ ಪಾಂಡಿಚೇರಿ ಜೈಲಿನಲ್ಲಿದ್ದ ವಲ್ಲರಸು ಮತ್ತು ಇಬ್ರಾಹಿಂ ಪಾಶಾನನ್ನು ಶಿವಮೊಗ್ಗ ಮತ್ತು ಮೈಸೂರಿನಲ್ಲಿ ನಡೆದಿದ್ದ ಸರಗಳ್ಳತನ ಪ್ರಕರಣದಲ್ಲಿ ವಶಕ್ಕೆ ಪಡೆದು ಕರೆತಂದಿದ್ದರು. ಬಳಿಕ ಬಾಡಿ ವಾರೆಂಟ್ ಪಡೆದು ತುಮಕೂರು ಪೊಲೀಸರಿಂದ ಕೇಶವನ್ ಮತ್ತು ಸತೀಶ್‌ಕುಮಾರ್‌ನನ್ನೂ ವಶಕ್ಕೆ ಪಡೆದಿದ್ದರು. ನಾಲ್ವರನ್ನೂ ನ್ಯಾಯಾಲಯಕ್ಕೆ ಹಾಜರು ಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾನಗಲ್ಲದಲ್ಲಿ ಕುಡಿವ ನೀರಿನ ಸಮಸ್ಯೆಯಾಗದಂತೆ ಮುಂಜಾಗ್ರತೆ
ಚಿರತೆ ದಾಳಿಗೆ ಎರಡು ಕರುಗಳ ಬಲಿ