ಕನ್ನಡಪ್ರಭ ವಾರ್ತೆ ಚಳ್ಳಕೆರೆ
ಶುಕ್ರವಾರ ನಗರದ ಪ್ರವಾಸಿ ಮಂದಿರದಲ್ಲಿ ಹೋರಾಟ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾದ ಸಭೆಯಲ್ಲಿ ಬಂದ್ ಕುರಿತು ಒಕ್ಕೊರಲ ತೀರ್ಮಾನ ಕೈಗೊಂಡು, ಮುಂದುವರಿದು ಹೋರಾಟದ ರೂಪುರೇಷೆಗಳ ಬಗ್ಗೆ ವಿವಿಧ ರೈತ ಸಂಘಟನೆಗಳ ಹೋರಾಟಗಾರರು ಹಾಗೂ ಸಂಘ ಸಂಸ್ಥೆಗಳ ಪ್ರತಿನಿಧಿಗಳ ಸಭೆಯಲ್ಲಿ ಚರ್ಚಿಸಿದರು.
ಸಭೆಯಲ್ಲಿ ಮಾತನಾಡಿದ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಬಿ.ಎ.ಲಿಂಗಾರೆಡ್ಡಿ, ಸಭೆಯ ಒಮ್ಮತದ ನಿರ್ಧಾರದಂತೆ ಫೆ.೯ರಂದು ಸ್ವಯಂ ಪ್ರೇರಿತ ಬಂದ್‌ಗೆ ಎಲ್ಲರೂ ಸಹಕಾರ ನೀಡುವಂತೆ ಮನವಿ ಮಾಡಿದರು.ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಪ್ರೊ.ಬಣ) ರಾಜ್ಯ ಉಪಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ ಮಾತನಾಡಿ, ನೀರು ಎಲ್ಲರಿಗೂ ಅವಶ್ಯಕವಾಗಿ ಬೇಕಿದೆ. ಕಳೆದ ಹಲವಾರು ವರ್ಷಗಳಿಂದ ರೈತ ಸಂಘಟನೆಗಳೂ ಸಹ ಈ ವಿಚಾರವಾಗಿ ನಿರಂತರ ಹೋರಾಟ ನಡೆಸಿ ಸರ್ಕಾರವನ್ನು ಜಾಗೃತಿಗೊಳಿಸುವ ಕಾರ್ಯ ಮಾಡುತ್ತಾ ಬಂದಿದೆ. ಜಿಲ್ಲಾ ನೀರಾವರಿ ಅನುಷ್ಠಾನ ಸಮಿತಿಯ ನಿರ್ದೇಶನದಂತೆ ೯ರಂದು ಬಂದ್‌ಗೆ ಎಲ್ಲಾ ರೈತರು ಕೈಜೋಡಿಸೋಣವೆಂದರು.
ಜಿಲ್ಲಾ ನೀರಾವರಿ ಅನುಷ್ಠಾನ ಸಮಿತಿಯ ಜಿ.ಯಾದವರೆಡ್ಡಿ ಮಾತನಾಡಿ, ನೀರು ಇಲ್ಲದೆ ಬದುಕಲು ಸಾಧ್ಯವಿಲ್ಲ. ಪ್ರತಿವರ್ಷವೂ ಸಕಾಲದಲ್ಲಿ ಮಳೆಯಾಗದೇ ರೈತರು ಬೆಳೆಗಳನ್ನು ಕಳೆದುಕೊಂಡು ಕಂಗಾಲಾಗಿದ್ದಾರೆ. ಭದ್ರಾ ನೀರು ಈ ಭಾಗದಲ್ಲಿ ಹರಿದರೆ ಮಾತ್ರ ರೈತರಿಗೆ ಉಪಯೋಗವಾಗುತ್ತದೆ ಎಂದರು.
ಎಐಟಿಯುಸಿ ರಾಜ್ಯ ಸಂಚಾಲಕ ಸಿ.ವೈ.ಶಿವರುದ್ರಪ್ಪ, ಸಮಾಜ ಸೇವಕ ಎಚ್.ಎಸ್.ಸೈಯದ್, ಅನ್ವರ್ ಮಾಸ್ಟರ್, ಆರ್.ಪ್ರಸನ್ನಕುಮಾರ್, ಸಿಐಟಿಯು ಜಿಲ್ಲಾ ಸಂಚಾಲಕ ಟಿ.ತಿಪ್ಪೇಸ್ವಾಮಿ, ತಾಲ್ಲೂಕು ಅಧ್ಯಕ್ಷ ಟಿ.ನಿಂಗಣ್ಣ, ಎಂ.ಚೇತನ್‌ಕುಮಾರ್, ಛೇಂಬರ್‌ನ ಕೃಷ್ಣಮೂರ್ತಿ, ಕೆ.ಎಂ.ಕೋಟ್ರೇಶ್, ಶ್ರೀನಿವಾಸಲು, ನೇತಾಜಿ ಪ್ರಸನ್ನ, ಬಸವರೆಡ್ಡಿ, ತಿಪ್ಪೇಸ್ವಾಮಿ, ಚನ್ನಕೇಶವ, ಹಂಪಣ್ಣ, ತಳಕು ನಾಗರಾಜು ಮುಂತಾದವರು ಉಪಸ್ಥಿತರಿದ್ದರು.