ಚಳ್ಳಕೆರೆ ಇಂದಿರಾ ಕಾಂಪ್ಲೆಕ್ಸ್ ಆಪರೇಷನ್ ಸಕ್ಸಸ್

KannadaprabhaNewsNetwork |  
Published : Apr 01, 2026, 01:45 AM IST
ಚಿತ್ರದುರ್ಗ 1 | Kannada Prabha

ಸಾರಾಂಶ

Construction of the complex in collaboration with the Urban Development Department.

ಜಡೇಕುಂಟೆ ಮಂಜುನಾಥ್

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ಸುಮಾರು 50 ವರ್ಷಕ್ಕೂ ಹೆಚ್ಚು ಹಳೆಯದಾದ ನೆಹರು ವೃತ್ತದಿಂದ ಬೆಂಗಳೂರು ರಸ್ತೆಯ ಕಾಂಗ್ರೆಸ್ ಕಚೇರಿವರೆಗೂ ನಿರ್ಮಾಣವಾಗಿದ್ದ ಇಂದಿರಾ ಕಾಂಪ್ಲೆಕ್ಸ್ ತೆರವು ಕಾರ್ಯಾಚರಣೆಯ ಕಾರ್ಯ ಭರದಿಂದ ಸಾಗಿದೆ.

ಹಳೆಯ ಮಳಿಗೆಗಳನ್ನು ನೆಲಸಮಗೊಳಿಸುವ ನಗರಸಭೆಯ ಕಾರ್ಯಕ್ಕೆ ರಾಜಕೀಯ ಪಕ್ಷಗಳ ಜಿದ್ದಾಜಿದ್ದಿನ ಆಖಾಡವಾಗಿದ್ದು ಸಾರ್ವಜನಿಕ ವಲಯದಲ್ಲಿ ಕುತೂಹಲ ಮೂಡಿಸಿದ್ದು ದಿಟ. ಆದರೆ, ನ್ಯಾಯಾಲಯದ ಆದೇಶ ಕೈಯಲ್ಲಿಡಿದು ವರ್ತಕರ ಮನವೊಲಿಸಿದ ನಗರಸಭಾ ಅಧಿಕಾರಿಗಳು ಇಂದಿರಾ ಕಾಂಪ್ಲೆಕ್ಸ್ ಆಪರೇಷನ್ ತೆರವು ಕಾರ್ಯಾಚರಣೆಗೆ ಫೀಲ್ಡಿಗಿಳಿದಿದ್ದರು. ನ್ಯಾಯಲಯದ ಆದೇಶವಿದ್ದರೂ ಮಳಿಗೆ ಬಿಡಲೊಲ್ಲದ ವರ್ತಕರ ಮೊಂಡುತನ ಕಂಡಿದ್ದ ಅಧಿಕಾರಿಗಳು ಇದೀಗ ಅಂತೂ ಆಪರೇಷನ್ ಸಕ್ಸಸ್ ಆದಂತೆ ಎಂದು ನಿಟ್ಟುಸಿರು ಬಿಡುವಂತಾಗಿರುವುದಂತೂ ವಾಸ್ತವ.

ಕಳೆದ ವಾರ ಸುಮಾರು 250 ಪೋಲೀಸರ ದಂಡು ಕಟ್ಟಿಕೊಂಡು ಹೋಗಿ ಜೆಸಿಬಿ ಹಲ್ಲುಗಳಿಂದ ಮಳಿಗೆಯ ನೆತ್ತಿ ಮೇಲೆ ಇಟ್ಟಾಗ ಶುರುವಾದ ರಾಜಕೀಯ ಎಲ್ಲಿಗೆ ಹೋಗುತ್ತೆ ಎಂಬ ಅಂದಾಜು ಸಿಗದಷ್ಟು ಮಟ್ಟಿಗೆ ಕಾವೇರಿತ್ತು. ಶಾಸಕ ಟಿ.ರಘುಮೂರ್ತಿ ಅವರನ್ನೇ ನೇರ ಹೊಣೆಗಾರರನ್ನಾಗಿ ಮಾಡಿ ಆರೋಪಿಸಲಾಗಿತ್ತು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಮುಖಂಡರುಗಳೂ ಸಹ ನಗರಸಭೆ ಅಧಿಕಾರಿಗಳ ನಡೆಯನ್ನು ಬೆಂಬಲಿಸುವ ಜೊತೆಗೆ ಶಾಸಕರ ಅಭಿವೃದ್ಧಿಗೆ ವಿರೋಧ ಪಕ್ಷಗಳ ಅಡ್ಡಿ ಎಂಬಂತೆ ಪ್ರತ್ಯಾರೋಪಗಳನ್ನು ಮಾಡುವ ಮೂಲಕ ಉತ್ತರ ಕೊಟ್ಟಿದ್ದರು.

ವರ್ತಕರ ಸಾಮಾನು ಸರಂಜಾಮುಗಳನ್ನು ಎತ್ತಿ ಬೇರೆಡೆಗೆ ಸ್ಥಳಾಂತರಿಸಲು ಅಧಿಕಾರಿಗಳು ಕಾಲವಕಾಶ ಕೊಟ್ಟಿದ್ದರು. ಮಂಗಳವಾರ ಮುಂಜಾನೆ ಹೊತ್ತಿಗೆ ಜೆಸಿಬಿಗಳು ಇಂದಿರಾ ಕಾಂಪ್ಲೆಕ್ಸ್ ಆಪರೇಷನ್ ಶುರುಮಾಡಿದ್ದವು. ನಗರ ಸಭಾ ಸಿಬ್ಬಂದಿ ಪೌರಕಾರ್ಮಿಕರೂ ಸೇರಿದಂತೆ ಬಹುತೇಕ ನೌಕರರು ಬೆಂಗಳೂರು ರಸ್ತೆಯಲ್ಲಿ ಬೀಡು ಬಿಟ್ಟಿದ್ದರು. ಪೋಲೀಸರ ಸರ್ಪಗಾವಲು ಜನರ ಆಕರ್ಷಣೆಯ ಕೇಂದ್ರಬಿಂದು ಎಂಬಂತಿತ್ತು. ಇದೀಗ ವರ್ತಕರ ಪಾಡು ಹೇಳತೀರದಾದರೂ ಈ ಕಾಂಪ್ಲೆಕ್ಸ್ ತೆರವು ಅನಿವಾರ್ಯವಾಗಿತ್ತು. ಲೋಕೋಪಯೋಗಿ ಇಲಾಖೆಯೂ ಕೂಡ ಇದು ಯೋಗ್ಯವಲ್ಲದ ಕಟ್ಟಡ ಎಂದೇ ಹೇಳಿತ್ತು. ಶಿಥಿಲ ಕಟ್ಟಡಗಳಲ್ಲೇ ತಮ್ಮ ವ್ಯವಹಾರ ಮುಂದುವರೆಸಿದ್ದ ವರ್ತಕರು ಮಾತ್ರ ಈ ಕಟ್ಟಡ ಬಿಡುವುದಿಲ್ಲ ಎಂಬಂತೆ ಮಾತನಾಡುತ್ತಿದ್ದರು. ಇದಕ್ಕೆ ಕಾರಣ ಅತೀ ಕಡಿಮೆ ಬಾಡಿಗೆ ಮತ್ತು ಬೆಂಗಳೂರು ಮುಖ್ಯ ರಸ್ತೆಗೆ ಹೊಂದಿಕೊಂಡಿರುವುದರಿಂದ ವ್ಯವಹಾರಕ್ಕೂ ಮೋಸವಿಲ್ಲ. ಒಳ್ಳೆಯ ವ್ಯಾಪಾರ ಆಗುತ್ತಿದ್ದ ಜಾಗವಿದು. ಇದನ್ನು ಬಿಡಬಾರದು ಎಂದೇ ನ್ಯಾಯಾಲಯಕ್ಕೂ ಹೋಗಿದ್ದರು. ಕಳೆದ ಹನ್ನೊಂದು ವರ್ಷಗಳ ಕಾನೂನು ಹೋರಾಟ ಕೊನೆಗೂ ವರ್ತಕರ ಕೈಹಿಡಿಯಲೇ ಇಲ್ಲ.

ಇಂದಿರಾ ಕಾಂಪ್ಲೆಕ್ಸ್ ಜಾಗದಲ್ಲಿ ನಗರಾಭಿವೃದ್ಧ ಇಲಾಖೆಯಲ್ಲಿ ಇಲ್ಲಿರುವ ಖಾಲಿ ಜಾಗ ತೋರಿಸಿ ಸಾಲದ ರೂಪದಲ್ಲಿ ಹಣ ಮಂಜೂರು ಮಾಡಿಸಿಕೊಂಡು ಸುಸಜ್ಜಿತ ಶಾಪಿಂಗ್ ಕಾಂಪ್ಲೆಕ್ಸ್ ಮಾಡುವ ಯೋಜನೆ ಈಗಾಗಲೇ ಅಧಿಕಾರಿಗಳ ಮಟ್ಟದಲ್ಲಿ ಇದೆ. ಇನ್ನೇನು ಕಾಂಪ್ಲೆಕ್ಸ್ ಸಂಪೂರ್ಣ ನೆಲಸಮಗೊಳಿಸಿದ ಎರಡು ಮೂರು ತಿಂಗಳ ಒಳಗಾಗಿ ಕಾಮಗಾರಿ ಶುರುವಾಗಲಿದೆ. ಮಳಿಗೆಗಳನ್ನು ಬಾಡಿಗೆ ನೀಡಿ ಬಂದ ಆದಾಯದಲ್ಲಿ ಈ ಸಾಲ ತೀರುವಳಿ ಮಾಡಬೇಕು ಎನ್ನುತ್ತಾರೆ ನಗರಸಭೆ ಅಧಿಕಾರಿಗಳು.

ಒಟ್ಟಾರೆ ಶಿಥಿಲ ಕಟ್ಟಡ ತೆರವು ಕಾರ್ಯಾಚರಣೆಗೆ ಆರಂಭದಲ್ಲಿ ಅಡಚಣೆಗಳು ಉದ್ಭವಿಸಿದರೂ ಅಂತಿಮವಾಗಿ ಈ ಬಹುದೊಡ್ಡ ಕಾಂಪ್ಲೆಕ್ಸ್ ನೆಲಸಮಗೊಳಿಸಿದ್ದು ಅಧಿಕಾರಿಗಳಿಗೆ ಸಮಾಧಾನ ತಂದಿದೆ. ಎಲ್ಲಿ ಪ್ರಾಣಾಪಾಯಗಳು ಸಂಭವಿಸಿ ದೊಡ್ಡ ದುರಂತಕ್ಕೆ ಕಾರಣವಾಗಲಿದೆಯೋ ಎಂಬ ಆತಂಕವಿತ್ತು. ಆದರೆ ಸಾರ್ವಜನಿಕರಿಗೆ ಈ ಜಾಗ ಮುಂದೊಂದು ದಿನ ಯಾವುದಕ್ಕೆ ಬಳಕೆ ಆಗಲಿದೆ ಎಂಬ ಕುತೂಹಲವಂತೂ ಇದ್ದೇ ಇದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಮೂಲ್‌ ಸೌಲಭ್ಯಗಳ ಪ್ರಯೋಜನ ಪಡೆಯಿರಿ
ನೆಲಮಂಗಲ ರೋಟರಿ ಸಂಸ್ಥೆಗೆ ಸಮುದಾಯ ಸೇವಾ ಪ್ರಶಸ್ತಿ