ನಗರಸಭೆ ಘನತ್ಯಾಜ್ಯ ಘಟಕದ ಹಿಂಭಾಗದ ಹೊಲದಲ್ಲಿ ಮೇವು ಮೇಯಲು ಕಟ್ಟಿಹಾಕಿದ್ದ ಹಸುಗಳ ಮೇಲೆ ಸರಿಸುಮಾರು 15ಕ್ಕೂ ಹೆಚ್ಚು ಬೀದಿ ನಾಯಿಗಳು ದಾಳಿನಡೆಸಿವೆ.
ಕನ್ನಡಪ್ರಭ ವಾರ್ತೆ ಗೌರಿಬಿದನೂರು
ತಾಲೂಕಿನ ಇಡಗೂರು ರಸ್ತೆಯ ನಗರಸಭೆ ಘನತ್ಯಾಜ್ಯ ಘಟಕದಲ್ಲಿ ಬಳಿ ಬೀದಿ ನಾಯಿಗಳ ಗುಂಪೊಂದು ತೋಟದ ಮನೆ ಆವರಣದಲ್ಲಿ ಕಟ್ಟಿದ್ದ ಹಸು ಮತ್ತು ಕರುವಿನ ಮೇಲೆ ದಾಳಿ ನಡೆಸಿ ನಾರಾಯಣಸ್ವಾಮಿ ಎಂಬುವವರಿಗೆ ಸೇರಿದ ಹಸು ಹಾಗೂ ಅದರ ಕರು ಸಾವನ್ನಪ್ಪಿದೆ.ನಗರಸಭೆ ಘನತ್ಯಾಜ್ಯ ಘಟಕದ ಹಿಂಭಾಗದ ಹೊಲದಲ್ಲಿ ಮೇವು ಮೇಯಲು ಕಟ್ಟಿಹಾಕಿದ್ದ ಹಸುಗಳ ಮೇಲೆ ಸರಿಸುಮಾರು 15ಕ್ಕೂ ಹೆಚ್ಚು ಬೀದಿ ನಾಯಿಗಳು ದಾಳಿನಡೆಸಿವೆ. ತೀವ್ರವಾಗಿ ಗಾಯಗೊಂಡಿದ್ದರಿಂದ ಹಸು ಸ್ಥಳದಲ್ಲೇ ಮೃತಪಟ್ಟಿದೆ. ಘಟನೆಯಲ್ಲಿ ನಾಯಿಗಳು ಹಸುವಿನ ಮೇಲೆ ದಾಳಿ ನಡೆಸಿ ಅದರ ಮುಖ ಹಾಗೂ ಹಿಂಬದಿಯನ್ನು ತಿಂದುಹಾಕಿವೆ.ಮೇಯಲೆಂದು ಹಸುವನ್ನು ಹೊಲದಲ್ಲಿ ಕಟ್ಟಿಹಾಕಿ ಮನೆಗೆ ಹೋಗಿ ಬರುವಷ್ಟರಲ್ಲಿ ಹಸು ಮತ್ತು ಕರುವಿನ ಮೇಲೆ ದಾಳಿ ನಡೆಸಿದ ನಾಯಿಗಳು ಎಲ್ಲೆಂದರಲ್ಲಿ ಕಚ್ಚಿ ಗಾಯಗೊಳಿಸಿವೆ. ಹಸು-ಕರುವನ್ನು ಕಟ್ಟಿಹಾಕಿದ್ದರಿಂದ ನಾಯಿಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದೇ ನರಳಾಡಿದೆ. ಕ್ರೂರ ನಾಯಿಗಳ ದಾಳಿಗೆ ಕರುವಿನ ದೇಹವೆಲ್ಲ ಹರಿದು ಹೋಗಿದೆ. ಬಾಯಿ, ಮೂಗು ಹೊಟ್ಟೆಭಾಗಕ್ಕೆ ತೀವ್ರ ಪೆಟ್ಟಾಗಿದೆ. ನಾಯಿ ದಾಳಿಗೆ ತೀವ್ರ ವೇದನೆ ಪಡುತ್ತಿದ್ದ ಕರುವಿನ ಧ್ವನಿ ಕೇಳಿ ಸ್ಥಳೀಯರು ಬಂದು ನಾಯಿಗಳನ್ನು ಹೊಡೆದು ಓಡಿಸಿ ಮಾಲೀಕನಿಗೆ ವಿಷಯವನ್ನು ತಿಳಿಸಿದರೂ ಮಾಲಿಕ ಬಂದು ನೋಡುವಷ್ಟರಲ್ಲಿ ಹಸು ಮತ್ತು ಕರುಗಳು ಎರಡು ಸಾವನ್ನಪ್ಪಿವೆ.ಈ ರೀತಿಯ ಘಟನೆ ಇದೇ ಮೊದಲೆನಲ್ಲ. ಈ ಹಿಂದೆ ಒಮ್ಮೆ ಮರಿಯಣ್ಣ ಎಂಬುವವರ 20 ಕುರಿಗಳನ್ನು ಘಟಕದಲ್ಲಿರುವ ನಾಯಿಗಳು ಕೊಂದಿದ್ದವು. ಆಗ ಅಧಿಕಾರಿಗಳಿಗೆ ವಿಷಯ ತಿಳಿಸಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ ಎಂದು ತಿಳಿಸಿದರು.ಈ ನಗರಸಭೆ ಘನ ತ್ಯಾಜ್ಯದ ನಾಯಿಗಳು ಬಹಳಷ್ಟು ಬಾರಿ ಇದೇ ರೀತಿಯಲ್ಲಿ ದಾಳಿ ನಡೆಸಿದಾಗ ಹಸು, ಕರು. ಕೋಳಿ, ಕುರಿ ಮತ್ತು ಮೇಕೆಗಳು ಸಾವನ್ನಪ್ಪಿವೆ. ಈ ವಿಚಾರವಾಗಿ ಘಟನೆ ನಡೆದ ಪ್ರತಿ ಬಾರಿ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಆದರೂ ಸಹ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಹಸುವಿನ ಮಾಲಿಕ ನಾರಾಯಣಸ್ವಾಮಿ.ನಾಯಿಗಳ ಹಾವಳಿ ಜಾಸ್ತಿಯಾಗಿದೆ. ನಾಯಿಗಳ ಗುಂಪುಗಳಿಗೆ ಘನತ್ಯಾಜ್ಯ ಘಟಕದಲ್ಲಿ ಮಾಂಸದ ಅಂಗಂಡಿಗಳಿಂದ ತರುವ ಆಹಾರ ಹಾಕುತ್ತಿದ್ದಾರೆ. ಕೆಲವೊಮ್ಮೆ ಮಾಂಸ ಸಿಗದೇ ಇದ್ದಾಗ ಅವು ಮಕ್ಕಳು, ಮಹಿಳೆಯರು ಹಾಗೂ ಅಮಾಯಕ ದನಕರುಗಳ ಮೇಲೆ ದಾಳಿ ಮಾಡುತ್ತಿವೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಈಗಲಾದರೂ ಬೀದಿ ನಾಯಿಗಳ ಹಾವಳಿಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಘನತ್ಯಾಜ್ಯ ಘಟಕದ ಸುತ್ತನಮುತ್ತಲಿನಲ್ಲಿರುವ ಜಮೀನಿನ ಮಾಲೀಕರು ಮತ್ತು ಗ್ರಾಮಸ್ಥರು ಆಗ್ರಹಿಸಿದರು.ಕೋಟ್......
ತ್ಯಾಜ್ಯ ಘಟಕದ ಹಿಂಭಾಗದಲ್ಲಿರುವ ಕಾಂಪೌಂಡ್ ಗೋಡೆ ದುರಸ್ಥಿಯಲ್ಲಿದ್ದು ಅತಿ ಶೀಘ್ರದಲ್ಲಿ ಗೋಡೆಯನ್ನು ಸರಿಪಡಿಸಿ, ಇನ್ನೂ ಎತ್ತರಕ್ಕೆ ನಿರ್ಮಾಣ ಮಾಡಲಾಗುವುದು. ಈಗಾಗಲೇ ನಾಯಿಗಳಿಗೆ ಲಸಿಕೆ ಹಾಕಿ, ಸಂತಾನಹರಣಶಸ್ತ್ರ ಚಿಕಿತ್ಸೆ ಪ್ರಕ್ರಿಯೆ ನಡೆಸಲಾಗಿದೆ. ಅಪಾಯಕಾರಿ ಬೀದಿ ನಾಯಿಗಳನ್ನು ಗುರುತಿಸಿ, ಆಶ್ರಯ ತಾಣಗಳಿಗೆ ಸ್ಥಳಾಂತರಿಸುವ ಕೆಲಸವನ್ನು ಮಾಡಲಾಗುವುದು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.