ಮೀಸಲಾತಿ ಅಳವಡಿಕೊಂಡು ನೇಮಕಾತಿ ಮಾಡಲಾಗುವುದು

KannadaprabhaNewsNetwork |  
Published : Apr 01, 2026, 01:45 AM IST
ಚಿತ್ರ 2 | Kannada Prabha

ಸಾರಾಂಶ

ಚಿತ್ರದುರ್ಗದ ಶಿವಶರಣ ಮಾದಾರ ಚನ್ನಯ್ಯ ಗುರುಪೀಠದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಚಿವ ಕೆ.ಎಚ್.ಮುನಿಯಪ್ಪ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಸರ್ಕಾರ ನೇಮಕಾತಿಗೆ ಮುಂದಾಗಿರುವ ಹುದ್ದೆಗಳಿಗೆ ಒಳ ಮೀಸಲಾತಿಯನ್ನು ಅಳವಡಿಸಿಕೊಂಡೇ ನೇಮಕಾತಿ ಮಾಡಲಾಗುವುದು. ಈಗ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಅದು ಅಂತಿಮವಾಗುವುದರೊಳಗೆ ನಮ್ಮ ಸರ್ಕಾರ ಒಳ ಮೀಸಲಾತಿಯನ್ನು ಜಾರಿ ಮಾಡಲಿದ್ದು ಅದರಂತೆಯೇ ನೇಮಕಾತಿ ಪ್ರಕ್ರಿಯೆ ನಡೆದು ಎಲ್ಲಾ ಸಮುದಾಯದ ನಿರುದ್ಯೋಗಿ ಅಭ್ಯರ್ಥಿಗಳಿಗೆ ನ್ಯಾಯ ಸಿಗಲಿದೆ. ಇದರಲ್ಲಿ ಯಾವುದೇ ಆತಂಕ ಬೇಡ ಎಂದು ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.

ಚಿತ್ರದುರ್ಗ ನಗರಕ್ಕೆ ಭೇಟಿ ನೀಡಿದ್ದ ಅವರು, ಶಿವಶರಣ ಮಾದಾರ ಚನ್ನಯ್ಯ ಗುರುಪೀಠದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಹಿಂದಿನ ಬಿಜೆಪಿ ಸರ್ಕಾರ ಮೀಸಲಾತಿಯ ಪ್ರಮಾಣವನ್ನುಶೇ.56ಕ್ಕೆ ಏರಿಸಿದೆ. ಆದರೆ ನ್ಯಾಯಾಲಯ ಶೇ.50ಕ್ಕೆ ಒಳಪಡಿಸುವಂತೆ ಆದೇಶ ನೀಡಿದೆ. ಈ ಆದೇಶದ ಹಿನ್ನೆಲೆಯಲ್ಲಿ ಎಲ್ಲಾ ಸಮುದಾಯಗಳಿಗೆ ಮೀಸಲಾತಿ ಪ್ರಮಾಣವನ್ನು ಸ್ವಲ್ಪಮಟ್ಟಿಗೆ ಕಡಿಮೆ ಮಾಡಿ ಜಾರಿಗೊಳಿಸಲು ಎಲ್ಲಾ ಸಮುದಾಯದ ಮುಖಂಡರು ಸಮ್ಮತಿಸಿದ್ದಾರೆ. ಇದರ ಬಗ್ಗೆ ಅಂತಿಮವಾಗಿ ಸಚಿವ ಸಂಪುಟದಲ್ಲಿ ತೀರ್ಮಾನ ಮಾಡಿ ಉಪಚುನಾವಣೆಯ ನಂತರ ಜಾರಿ ಮಾಡಲಾಗುವುದು. ಒಳಮೀಸಲಾತಿಗೆ ಸಂಬಂಧಪಟ್ಟಂತೆ ಪರಿಶಿಷ್ಟ ಜಾತಿಯ ಎಲ್ಲಾ ಸಮುದಾಯಗಳು ಕಳೆದ 35 ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿವೆ. ಇದರ ಜಾರಿಗೆ ಹಲವಾರು ಆಯೋಗಗಳನ್ನು ರಚನೆ ಮಾಡಿ ವರದಿಯನ್ನು ತಯಾರಿಸಲಾಗಿದ್ದು ಇದರ ಬಗ್ಗೆ ಈಗಾಗಲೇ ಸಚಿವ ಸಂಪುಟದಲ್ಲಿ ಎರಡು ಮೂರು ಬಾರಿ ಚರ್ಚೆ ನಡೆದಿದೆ. ಅಂತಿಮವಾಗಿ ಮಾ.27ರಂದು ವಿಶೇಷ ಅಧಿವೇಶನದಲ್ಲಿ ಸರ್ಕಾರ ಜಾರಿ ಮಾಡಲು ಮುಂದಾಗಿತ್ತು. ಆದರೆ ಉಪ ಚುನಾವಣೆಯ ನೀತಿ ಸಂಹಿತೆಯ ಹಿನ್ನೆಲೆಯಲ್ಲಿ ಜಾರಿಯನ್ನು ಮುಂದೂಡಲಾಗಿದೆ ಎಂದು ಸಚಿವರು ತಿಳಿಸಿದರು.

ರಾಜ್ಯದಲ್ಲಿ ನಡೆಯುತ್ತಿರುವ ಉಪ ಚುನಾವಣೆಯ ನೀತಿ ಸಂಹಿತೆ ಮುಗಿದ ನಂತರ ಒಳ ಮೀಸಲಾತಿಯನ್ನು ಜಾರಿ ಮಾಡಲಾಗುವುದು. ಇದರಲ್ಲಿ ಯಾವುದೇ ಆತಂಕ ಬೇಡ. ನಮ್ಮ ನೆರೆ ರಾಜ್ಯಗಳು ಈಗಾಗಲೇ ಒಳ ಮೀಸಲಾತಿಯನ್ನು ಜಾರಿ ಮಾಡಿವೆ. ಅದರಂತೆ ನಮ್ಮ ರಾಜ್ಯದಲ್ಲೂ ಸಹ ಜಾರಿಯಾಗಲಿದೆ. ಪರಿಶಿಷ್ಟ ಜಾತಿಯಲ್ಲಿ 101 ಉಪ ಜಾತಿಗಳಿವೆ. ಸಮಗಾರ, ಡೆಕ್ಕರ್, ಡೋಲರ್ ಇವರೆಲ್ಲ ಮಾದಿಗ ಸಮುದಾಯಕ್ಕೆ ಸಂಬಂಧ ಪಟ್ಟವರು. ಈ ಜನರಿಗೆ ಸ್ವಲ್ಪ ಗೊಂದಲ ಇದೆ. ಇವರಿಗೆ ಯಾವ ರೀತಿ ಪ್ರಾತಿನಿಧ್ಯತೆ ಕೊಡಬೇಕು ಎಂಬುದರ ಸಲುವಾಗಿ ಉಪ ಸಮುದಾಯದ ನಾಯಕರೊಂದಿಗೆ ಸಭೆ ಮಾಡಲಿದ್ದೇವೆ. ನಿಮಗೇನು ಅನ್ಯಾಯ ಆಗಿದೆ ಅದನ್ನು ಸರಿಪಡಿಸಲಿಕ್ಕೆ ಸರ್ಕಾರ ಬದ್ಧವಾಗಿದೆ ಎಂದರು. ಮಾದಿಗ ಮಹಾಸಭಾ ಕಟ್ಟಿಕೊಂಡು ಜನರನ್ನು ಗೊಂದಲಕ್ಕೆ ಈಡು ಮಾಡುತ್ತಾರೆ ಎಂಬ ಕಾರಜೋಳರವರ ಹೇಳಿಕೆಗೆ ಪ್ರತಿಕ್ರಿಯಿಸಿ ಅವರ ಸರ್ಕಾರದ ಅವಧಿಯಲ್ಲಿ ಮೀಸಲಾತಿಯನ್ನು ಹೆಚ್ಚಳ ಮಾಡಿದ್ದು ಸಂತೋಷ. ಆದರೆ ಅವರದೇ ಸರ್ಕಾರ ಇತ್ತು 9ನೇ ಶೆಡ್ಯೂಲ್‌ಗೆ ಸೇರಿಸಬಹುದಾಗಿತ್ತು ಎಂದು ಸಂಸದರಿಗೆ ಟಾಂಗ್ ನೀಡಿದರು.

ರಾಜ್ಯದಲ್ಲಿ ಪೆಟ್ರೋಲ್ ಹಾಗೂ ಸಿಲಿoಡರ್ ಗ್ಯಾಸ್‍ನ ಅಭಾವವಿಲ್ಲ. ಸರಿಯಾದ ರೀತಿಯಲ್ಲಿ ವಿತರಣೆ ಆಗುತ್ತಿದೆ. ಯಾರಾದರೂ ಕಾಳಸಂತೆಯಲ್ಲಿ ಮಾರಾಟ ಮಾಡುವುದು ಕಂಡು ಬಂದರೆ ಅಂತವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು. ಇದಲ್ಲದೆ ರಾಜ್ಯಕ್ಕೆ ಹೆಚ್ಚಿನ ರೀತಿಯಲ್ಲಿ ಪೆಟ್ರೋಲ್ ಹಾಗೂ ಸಿಲಿಂಡರ್ ಗ್ಯಾಸ್ ನೀಡುವಂತೆ ಕೇಂದ್ರಕ್ಕೆ ಪತ್ರವನ್ನು ಸಹ ಬರೆಯಲಾಗಿದೆ. 2023ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಪಂಚ ಗ್ಯಾರಂಟಿಗಳನ್ನು ನೀಡಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಪಕ್ಷ ಬಾಗಲಕೋಟೆ ಹಾಗೂ ದಾವಣಗೆರೆ ಉಪಚುನಾವಣೆಯಲ್ಲಿ ಗೆಲುವು ಸಾಧಿಸಲಿದೆ. ಇದಕ್ಕೆ ಎಲ್ಲಾ ಮತದಾರರು ಮತ ನೀಡುವುದರ ಮುಖಾಂತರ ಆಶೀರ್ವಾದ ನೀಡಿ ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲಿದ್ದಾರೆ. ದಾವಣಗೆರೆಯಲ್ಲಿ ಶಾಮನೂರು ಶಿವಶಂಕರಪ್ಪ ರವರ ಮೊಮ್ಮಗ ಹಾಗೂ ಬಾಗಲಕೋಟೆಯಲ್ಲಿ ಮೇಟಿರವರ ಮಗ ಉಮೇಶ್ ಮೇಟಿರವರಿಗೆ ಟಿಕೆಟ್ ನೀಡಲಾಗಿದೆ. ಇವರನ್ನು ಉಪಚುನಾವಣೆಯಲ್ಲಿ ಗೆಲ್ಲಿಸುವ ಮುಖಾಂತರ ಅವರ ಮೃತರ ಆತ್ಮಕ್ಕೆ ಶಾಂತಿಯನ್ನು ನೀಡಬೇಕಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಕಾಂಬ್ಲೆ ಸಂತೋಷ್, ಡಿಸಿಸಿ ಕಾರ್ಯಾಧ್ಯಕ್ಷ ಹಾಲಸ್ವಾಮಿ ಸೇರಿದಂತೆ ಹಲವರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಮೂಲ್‌ ಸೌಲಭ್ಯಗಳ ಪ್ರಯೋಜನ ಪಡೆಯಿರಿ
ನೆಲಮಂಗಲ ರೋಟರಿ ಸಂಸ್ಥೆಗೆ ಸಮುದಾಯ ಸೇವಾ ಪ್ರಶಸ್ತಿ