ಕನ್ನಡಪ್ರಭವಾರ್ತೆ ಚಳ್ಳಕೆರೆ
ಇಂತಹ ಸಂದಿಗ್ಧ ವೇಳೆ ಶುಕ್ರವಾರ ತಡರಾತ್ರಿ ತಾಲೂಕಿನಾದ್ಯಂತ ಭರ್ಜರಿ ಮಳೆಯಾಗಿದೆ. ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಕೆಲೆವೆಡೆ ಮನೆಗಳು ಬಿದ್ದು, ಜಮೀನಿನ ಬೆಳೆಯಲ್ಲಿ ನೀರು ನಿಂತಿದೆ. ಶುಕ್ರವಾರ ರಾತ್ರಿ ನಾಯಕನಹಟ್ಟಿ -129.6, ಚಳ್ಳಕೆರೆ- 123.00, ತಳಕು- 93.04 ದೇವರಮರಿಕುಂಟೆ- 42.04, ಪರಶುರಾಮಪುರ- 39.06, ಬಿದ್ದು ಒಟ್ಟು 426.18, ಮಿಮೀ. ಮಳೆಯಾಗಿದೆ.
ಚಳ್ಳಕೆರೆ ನಗರದ ಪಾವಗಡ ರಸ್ತೆಯ ಹಳ್ಳ ತುಂಬಿ ಹರಿದು ಕೆಲವು ಗಂಟೆಗಳ ಕಾಲ ವಾಹನಗಳ ಸಂಚಾರ ನಿಂತಿತ್ತು. ನಗರದ ತ್ಯಾಗರಾಜ ನಗರ, ಅಂಬೇಡ್ಕರ್ ನಗರ, ರಹೀಂನಗರ, ಕಾಟಪ್ಪನಹಟ್ಟಿ ಮುಂತಾದ ಕಡೆಗಳಲ್ಲಿ ಮಳೆಯ ನೀರು ಮನೆಗಳಿಗೆ ನುಗ್ಗಿ ಅವಾಂತರ ಉಂಟು ಮಾಡಿತ್ತು. ಎಲ್ಲಾ ಕೆರೆಗಳಲ್ಲೂ ನೀರಿನ ಪ್ರಮಾಣ ಹೆಚ್ಚಿದೆ.ತ್ಯಾಗರಾಜ ನಗರ ಹಳೇ ಮಯೂರ ಬೇಕರಿ ಬಳಿ ಪಗಡಲಬಂಡೆ ನಾಗೇಂದ್ರಪ್ಪ, ಶೋಭಾ, ಚಿರಂಜೀವಿ, ಶಿವಕುಮಾರ್, ನಾಗವೇಣಿ, ನೇತ್ರಮ್ಮ, ಪ್ರವೀಣ, ಶಾಂತಕುಮಾರ್ ಮನೆಗಳಿಗೆ ನೀರು ನುಗ್ಗಿ ಇಡೀ ರಾತ್ರಿ ಜನರ ನಿದ್ದೆ ಗೆಡಿಸಿತು. ಮಳೆಯ ನೀರನ್ನು ಪ್ರಯಾಸದಿಂದಲೇ ಹೊರಹಾಕಿದರು. ಪೌರಾಯುಕ್ತ ಜಗರೆಡ್ಡಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.