ಕನ್ನಡಪ್ರಭ ವಾರ್ತೆ ಮೈಸೂರು
ಚಲುವಾಂಬ ಆಸ್ಪತ್ರೆಯಲ್ಲಿನ ನವಜಾತ ಶಿಶುಗಳ ಸಾವುಗಳು ಸ್ಪಷ್ಟವಾಗಿ ಖಾಸಗಿ ನರ್ಸಿಂಗ್ ಹೋಂಗಳು ಹಾಗೂ ಸರ್ಕಾರಿ ಆಸ್ಪತ್ರೆಗಳ ವೈದ್ಯರ ನಡುವಿನ ಅಪವಿತ್ರ ಮೈತ್ರಿಯ ಪರಿಣಾಮವಾಗಿದೆ. ಮೈಸೂರು ಮೆಡಿಕಲ್ ಕಾಲೇಜು ವ್ಯಾಪ್ತಿಯ ಬಹುತೇಕ ಆಸ್ಪತ್ರೆಗಳಲ್ಲಿ ಸೇವಾಪರತೆ ಕೊರತೆ ಜತೆಗೆ ವಿಪರೀತ ಲಂಚದ ಹಾವಳಿಯಿಂದ ಸಾರ್ವಜನಿಕರು ರೋಸಿಹೋಗಿದ್ದು ಇದು ಆಡಳಿತ ವ್ಯವಸ್ಥೆ ಕುಸಿದುಬಿದ್ದಿರುವ ದ್ಯೋತಕವಾಗಿದೆ ಎಂದರು.
ಚಲುವಾಂಬ ಆಸ್ಪತ್ರೆ ನವಜಾತ ಶಿಶುಗಳ ಸಾವಿನ ಮನೆಯಾಗಿದೆ. ಡಿಎಚ್ಒ, ಜಿಲ್ಲಾಧಿಕಾರಿ, ಜಿಪಂ ಸಿಇಒ ನೇತೃತ್ವದ ಶಿಶು ಮರಣ ತಡೆಗಟ್ಟುವ ಸಮಿತಿಯ ಸಭೆಗಳು ನಡೆಯುತ್ತಿಲ್ಲ. ನಡೆದರೂ ಅವು ಕಾಟಾಚಾರಕ್ಕೆ ಎಂಬಂತಿದೆ. ಈ ಎಲ್ಲಾ ಸಾವುಗಳ ಕುರಿತು ಸಾಮಾಜಿಕ ಆಡಿಟಿಂಗ್ ನಡೆಸಿ ಬಹಿರಂಗಪಡಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.ಕೆ.ಆರ್. ಆಸ್ಪತ್ರೆ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಜಿಲ್ಲಾಸ್ಪತ್ರೆ ಸೇರಿದಂತೆ ಬಹುತೇಕ ವೈದ್ಯರು ಕರ್ತವ್ಯದ ವೇಳೆಯಲ್ಲಿ ಖಾಸಗಿ ಪ್ರಾಕ್ಟೀಸ್ ನಲ್ಲಿದ್ದಾರೆ. ಇವರ ಬಗ್ಗೆ ಕ್ರಮ ಕೈಗೊಳ್ಳುವಲ್ಲಿ ವೈದ್ಯಕೀಯ ಕಾಲೇಜಿನ ಡೀನ್ ಮತ್ತು ವೈದ್ಯಕೀಯ ಅಧೀಕ್ಷಕರು ವಿಫಲರಾಗಿದ್ದಾರೆ ಎಂದು ದೂರಿದರು.
ಈ ಹಿನ್ನೆಲೆಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ ತಕ್ಷಣ ಕಾಲೇಜಿಗೆ ಭೇಟಿ ನೀಡಿ ಪರೀಶೀಲಿಸಬೇಕು. ಅಂತರ ಕಾಲೇಜು ವರ್ಗಾವಣೆಗೆ ನಿಯಮ ರೂಪಿಸಬೇಕು. ಜಿಲ್ಲಾಧಿಕಾರಿಗಳು ಮೆಡಿಕಲ್ ಕಾಲೇಜು ಆಸ್ಪತ್ರೆಗಳ ಆಡಳಿತ ಸುಧಾರಣೆಗಾಗಿ ಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಜಂಟೀ ಸಭೆ ಆಯೋಜಿಸಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಆಸ್ಪತ್ರೆ ಉಳಿಸಿ ಹೋರಾಟ ಸಮಿತಿ ಸಂಚಾಲಕ ಎಂ.ಬಿ.ನಾಗಣ್ಣಗೌಡ. ಮೈಸೂರು ಘಟಕದ ಎಸ್.ಕೆ. ರಾಜೂಗೌಡ, ಕರ್ನಾಟಕ ರಕ್ಷಣಾ ವೇದಿಕೆಯ ಆಟೋ ವೆಂಕಟೇಶ್, ಸೋಮಶೇಖರ್, ಕರ್ನಾಟಕ ರಾಷ್ಡ ಸಮಿತಿ ನಗರ ಘಟಕ ಅಧ್ಯಕ್ಷ ನಾಗೇಂದ್ರ, ನಾಗರಾಜು, ಸಿ. ವಿಜಯ್, ಯುವ ಕಾರ್ಯದರ್ಶಿ ರಾಜು, ಮಹಿಳಾ ಘಟಕದ ಅಧ್ಯಕ್ಷೆ ನಾಗರತ್ನ, ಚಂದ್ರಕಲಾ ಮೊದಲಾದವರು ಇದ್ದರು.