ಚಾಮರಾಜನಗರ ವಿವಿಗೆ ಡಾ.ಅಂಬೇಡ್ಕರ್ ಹೆಸರಿಡಿ

KannadaprabhaNewsNetwork | Published : Apr 23, 2025 12:34 AM

ಸಾರಾಂಶ

ಚಾಮರಾಜನಗರದಲ್ಲಿ ದಲಿತ ಸಂಘರ್ಷ ಸಮಿತಿಯಿಂದ ಸಾಹಿತಿ ಸೋಮಶೇಖರ ಬಿಸಲ್ವಾಡಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರಚಾಮರಾಜನಗರ ವಿಶ್ವವಿದ್ಯಾನಿಲಯಕ್ಕೆ ಡಾ.ಬಿ.ಆರ್. ಅಂಬೇಡ್ಕರ್ ವಿಶ್ವವಿದ್ಯಾನಿಲಯ ಎಂದು ಹೆಸರಿಡುವಂತೆ ಸಾಹಿತಿ ಸೋಮಶೇಖರ ಬಿಸಲ್ವಾಡಿ ಆಗ್ರಹಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು ವಿಶ್ವವಿದ್ಯಾನಿಲಯದ ಉಪಕೇಂದ್ರವಾಗಿ 2010-2011ನೇ ಶೈಕ್ಷಣಿಕ ವರ್ಷದಲ್ಲಿ ಚಾಮರಾಜನಗರ (ಬೇಡರಪುರ)ದಲ್ಲಿ ಆರಂಭಗೊಂಡ ಸ್ನಾತಕೋತ್ತರ ಕೇಂದ್ರವು 2015ರಲ್ಲಿ ಮೈಸೂರಿನ ವಿಶ್ವವಿದ್ಯಾನಿಲಯದ ಸಿಂಡಿಕೇಟ್‌ನಲ್ಲಿ ಅಂಗೀಕಾರವಾಗಿ ಮಾಜಿ ಸಂಸದ ದಿ.ಧ್ರುವನಾರಾಯಣ ಅವರ ಪ್ರಯತ್ನದಿಂದಾಗಿ ಡಾ.ಬಿ.ಆರ್.ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರ ಎಂಬ ಹೆಸರಿನಿಂದ ಮುಂದುವರಿಯಲ್ಪಟ್ಟಿತು ಎಂದರು.ಈ ಸ್ನಾತಕೋತ್ತರ ಕೇಂದ್ರವು 53 ಎಕರೆ ವಿಸ್ತೀರ್ಣ ಹೊಂದಿದ್ದು ಕನ್ನಡ, ಅರ್ಥಶಾಸ್ತ್ರ ರಾಜ್ಯಶಾಸ್ತ್ರ, ಜಾನಪದ, ಗ್ರಂಥಾಲಯ ವಿಜ್ಞಾನ, ರಸಾಯನಶಾಸ್ತ್ರ ಭೌತಶಾಸ್ತ್ರ, ಸಮಾಜ ಸೇವಾ ಕಾರ್ಯ, ಗಣಿತ, ಗಣಕಯಂತ ವಿಜ್ಞಾನ, ಎಂಬಿಎ, ಎಂಕಾಂ, ಎಂಎ., ಇತ್ಯಾದಿ 13 ಸ್ನಾತಕೋತ್ತರ ವಿಷಯಗಳಲ್ಲಿ ತರಗತಿಗಳು ನಡೆಯುತ್ತಿವೆ. 2023 ಮಾ.28ರಂದು ಘನ ಸರ್ಕಾರದಿಂದ "ಚಾಮರಾಜನಗರ ವಿಶ್ವವಿದ್ಯಾನಿಲಯ " ಎಂಬ ಹೆಸರಿನಿಂದ ನೂತನ ವಿಶ್ವವಿದ್ಯಾನಿಲಯವಾಗಿ ಸ್ಥಾಪಿಸಲ್ಪಟ್ಟಿದೆ ಎಂದರು.ಅಂದಿನಿಂದಲೂ ನಾವು ಈ ವಿವಿಗೆ ಡಾ.ಅಂಬೇಡ್ಕರ್ ವಿಶ್ವವಿದ್ಯಾನಿಲಯ ಹೆಸರಿಡುವಂತೆ ನಿರಂತರ ಮನವಿ ನೀಡುತ್ತಲೇ ಬಂದಿದ್ದೇವೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಮನವಿ ನೀಡಿದ್ದೇವೆ ಎಂದರು. ರಾಜ್ಯದಲ್ಲಿ ಸ್ಥಾಪನೆಗೊಂಡಿರುವ ಹಲವು ವಿಶ್ವವಿದ್ಯಾನಿಲಯಗಳು ಬೇರೆ ಬೇರೆ ಮಹನೀಯರ ಹೆಸರಿನಲ್ಲಿ ಈಗಾಗಲೇ ನಡೆಯುತ್ತಿವೆ. ಆದರೆ ಡಾ.ಅಂಬೇಡ್ಕರ್ ಹೆಸರಿನಲ್ಲಿ ಯಾವೊಂದು ವಿಶ್ವವಿದ್ಯಾನಿಲಯವು ಇರುವುದಿಲ್ಲ ಎಂದರು.

ಡಾ.ಬಿ.ಆರ್.ಅಂಬೇಡ್ಕರ್ ಹೆಸರಿನಲ್ಲಿ 7 ವರ್ಷಗಳು ನಡೆಸಲ್ಪಟ್ಟ ಸ್ನಾತಕೋತ್ತರ ಕೇಂದ್ರದ ಹೆಸರನ್ನು ಕೈಬಿಟ್ಟು ಚಾಮರಾಜನಗರ ವಿಶ್ವವಿದ್ಯಾನಿಲಯ ಹೆಸರಿನಿಂದ ಸ್ಥಾಪಿಸಿದ್ದು ವಿಷಾದನೀಯ ಇದು ಅಂಬೇಡ್ಕರ್ ಅವರಿಗೆ ಮಾಡಿದ ಅಪಚಾರ ಎಂದರು. ಕಳೆದ ಫೆಬ್ರವರಿ ತಿಂಗಳಲ್ಲಿ ಮುಖ್ಯಮಂತ್ರಿ, ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳ (ತಿದ್ದುಪಡಿ) ಅಧಿನಿಯಮ 2024ಕ್ಕೆ ರಾಜ್ಯಪಾಲರ ಅನುಮೋದನೆ ದೊರಕಿದ್ದು ರಾಯಚೂರು ವಿಶ್ವ ವಿದ್ಯಾನಿಲಯ ಅದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯ ಎಂದು ಮರು ನಾಮಕರಣಗೊಳಿಸಲಾಗಿದೆ, ವಿಜಯಪುರ ವಿವಿಗೆ ಅಕ್ಕಮಹಾದೇವಿ ಹೆಸರಿದೆ, ಶಿವಮೊಗ್ಗ ವಿವಿಗೆ ಕುವೆಂಪು ಹೆಸರಿದೆ ಎಂದರು.

ದಲಿತರು ಶೇ.60 ರಷ್ಟು ನೆಲೆಸಿರುವ ಹಾಗೂ ಲೋಕಸಭಾ ಮೀಸಲು ಕ್ಷೇತ್ರ ಹೊಂದಿರುವ ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿ ಸ್ಥಾಪನೆಗೊಂಡಿರುವ ಈ ವಿಶ್ವವಿದ್ಯಾನಿಲಯಕ್ಕೆ ಡಾ.ಅಂಬೇಡ್ಕರ್ ವಿಶ್ವವಿದ್ಯಾನಿಲಯ ಎಂದು ನಾಮಕರಣ ಮಾಡಬೇಕೆಂದು ಜಿಲ್ಲೆಯ ದಲಿತ ಸಂಘಟನೆಗಳು ಹಾಗೂ ಜಿಲ್ಲೆಯ ಸಾರ್ವಜನಿಕರ ಪರವಾಗಿ ವಿನಂತಿಸುತ್ತಾ, 24 ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಘೋಷಣೆ ಮಾಡಬೇಕು ಎಂದರು. ಅದೇ ರೀತಿ ಯಾವುದೇ ಕಾರಣಕ್ಕೂ ಈ ವಿಶ್ವವಿದ್ಯಾನಿಲಯವನ್ನು ಮುಚ್ಚಬಾರದು ಎಂದು ಒತ್ತಾಯಿಸಿದರು.

ಜನ ಹಿತಾಶಕ್ತಿ ಹೋರಾಟ ವೇದಿಕೆ ರಾಮಸಮುದ್ರ ಸುರೇಶ್ ಮಾತನಾಡಿ, ಡಾ.ಅಂಬೇಡ್ಕರ್ ವಿಶ್ವವಿದ್ಯಾನಿಲಯ ಎಂದು ನಾಮಕರಣ ಮಾಡದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು. ಪತ್ರಿಕಾಗೋಷ್ಠಿಯಲ್ಲಿ ದಸಂಸ ಜಿಲ್ಲಾ ಸಂಚಾಲಕ ಸಿ. ರಾಜಣ್ಣ, ಯರಿಯೂರು, ಜಿಲ್ಲಾ ಸಂಘಟನಾ ಸಂಚಾಲಕ ದೊರೆಸ್ವಾಮಿ (ಜಾನಿ), ನಂಜುಂಡಸ್ವಾಮಿ ಗುಂಡ್ಲುಪೇಟೆ, ಶಿವಕುಮಾರ್ ಕೊಳ್ಳೇಗಾಲ, ರಂಗಸ್ವಾಮಿ ಮಾಡ್ರಹಳ್ಳಿ ಇದ್ದರು.

Share this article