ಬ್ಯಾಡಗಿ: ನೆಲಕ್ಕೆ ಬಿದ್ದಂತಹ ಶೇ. 75ರಷ್ಟು ನೀರನ್ನು ಸಂಗ್ರಹಿಸಿಡಲು ನಮಗೆ ವಿಫುಲ ಅವಕಾಶಗಳಿದೆ. ನೀರಿನ ಮರು ಬಳಕೆ ಕೃಷಿ, ಪರಿಸರ ಮತ್ತು ಸಮುದಾಯ ಪ್ರಯೋಜನಗಳಿಗೆ ಬಳಕೆಯಾಗಬೇಕು. ಆದ್ದರಿಂದ ಮಳೆನೀರು ಕೊಯ್ಲು ಹೆಚ್ಚು ಜನಪ್ರಿಯವಾಗಬೇಕಾಗಿದೆ ಎಂದು ಹಿರಿಯಶ್ರೇಣಿ ದಿವಾಣಿ ನ್ಯಾಯಾಧೀಶ ಅಮೋಲ ಜೆ. ಹಿರೆಕುಡಿ ಅಭಿಪ್ರಾಯಪಟ್ಟರು.
ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ವಿಶ್ವ ಜಲ ದಿನಾಚರಣೆ ಅಂಗವಾಗಿ ತಾಲೂಕು ಕಾನೂನು ಸಾಕ್ಷರತಾ ಸಮಿತಿ, ಅರಣ್ಯ ಇಲಾಖೆ ಹಾಗೂ ನ್ಯಾಯವಾದಿಗಳ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿ, ಪ್ರಪಂಚದಾದ್ಯಂತ ಸಂಸ್ಕರಿಸಿದ ನೀರಿನ ಮೇಲೆ ಜನರು ಹೆಚ್ಚು ಅವಲಂಬಿತವಾಗುತ್ತಿದ್ದಾರೆ. ಮಳೆ ನೀರಿನ ಸಂಗ್ರಹಣೆ ಹಾಗೂ ಮರುಬಳಕೆ ದೇಶದ ಆರ್ಥಿಕ ಅಭಿವೃದ್ಧಿಗೆ ಸಹಕಾರ ನೀಡುವುದಲ್ಲದೇ ಪರಿಸರಕ್ಕೆ ಅತ್ಯಂತ ಸುರಕ್ಷತಾ ಪ್ರಯೋಜನಗಳಿವೆ ಎಂದರು.ಮಳೆ ನೀರನ್ನು ಸಂಗ್ರಹಿಸುವುದರಿಂದ ಪರೋಕ್ಷವಾಗಿ ಇಂಗಾಲದ ಹೊರ ಸೂಸುವಿಕೆ ಕಡಿಮೆಯಾಗುತ್ತದೆ. ಮೋಡದಲ್ಲಿಯೂ ಸಂಸ್ಕರಿಸಿದ ಮಳೆ ನೀರನ್ನು ಬಳಸುವುದರಿಂದ ಸಸ್ಯಗಳ ಉತ್ತಮ ಬೆಳವಣಿಗೆ ಕಂಡುಬರುತ್ತದೆ. ಅದರ ಜತೆಗೆ ಅತಿ ಹೆಚ್ಚು ಸಸಿಗಳನ್ನು ನೆಡುವುದರಿಂದ ಪರಿಸರದಲ್ಲಿ ಆಮ್ಲಜನಕ ಉತ್ಪಾದನೆ ಆಗುವ ಮೂಲಕ ಮಾನವ ಸಂಕುಲಕ್ಕೆ ಆರೋಗ್ಯಕರವಾದ ವಾತಾವರಣ ನೀಡಲು ಸಾಧ್ಯವಾಗಲಿದೆ ಎಂದರು.
ಕಿರಿಯಶ್ರೇಣಿ ದಿವಾಣಿ ನ್ಯಾಯಾಧೀಶ ಸುರೇಶ ವಗ್ಗನವರ ಮಾತನಾಡಿ, ನೈಸರ್ಗಿಕ ಪ್ರಪಂಚದ ಮೇಲೆ ನಮ್ಮ ಬದುಕು ಅವಲಂಬಿತವಾಗಿದೆ. ಆದರೆ ಪರಿಸರ ವಿನಾಶದ ಉದ್ದೇಶದಿಂದಲೇ ನಡೆಯುತ್ತಿರುವ ಅಪರಾಧಗಳಿಗೆ ಕಠಿಣ ಕಾನೂನುಗಳನ್ನು ಜಾರಿಗೊಳಿಸುವ ಕೆಲಸವಾಗಬೇಕಾಗಿದೆ. ಪ್ರಸಕ್ತ ಶತಮಾನದಲ್ಲಿ ಬದುಕುಳಿಯಬೇಕಾದರೆ ನೈಸರ್ಗಿಕ ಪ್ರಪಂಚದ ಭವಿಷ್ಯದ ಬಗ್ಗೆ ಕಾಳಜಿ ನಮಗಿರಬೇಕಾಗಿದೆ. ಪರಿಸರ ನಾಶಕ್ಕೆ ಕಡಿವಾಣ ಹಾಕಲು ನಾವೆಲ್ಲರೂ ತ್ವರಿತವಾಗಿ ಕೆಲ ದೃಢ ನಿರ್ಧಾರಗಳನ್ನು ಕೈಗೊಳ್ಳಬೇಕಾಗಿದೆ ಎಂದರು.ನ್ಯಾಯವಾದಿಗಳ ಸಂಘದ ನೂತನ ಅಧ್ಯಕ್ಷ ರಾಜು ಶಿಡೇನೂರ ಮಾತನಾಡಿ, ಜಾಗತಿಕ ಜನಸಂಖ್ಯೆ ವೇಗವಾಗಿ ಬೆಳೆಯುತ್ತಿದೆ. ಆದರೆ ಇದಕ್ಕೆ ವಿರುದ್ಧವಾಗಿ ಪರಿಸರ ನಾಶವಾಗುತ್ತಿದೆ. ಹವಾಮಾನ ವೈಪರೀತ್ಯಗಳು ಅವಕಾಶ ಸಿಕ್ಕಾಗಲೆಲ್ಲಾ ನಮ್ಮ ಬದುಕನ್ನು ದುಸ್ತರಗೊಳಿಸುತ್ತಿವೆ. ಅರಣ್ಯ ಪ್ರದೇಶವನ್ನು ಹೇಗೆ ಉತ್ತಮವಾಗಿ ಸಂರಕ್ಷಿಸಬಹುದು ಎಂಬುದಕ್ಕೆ ತಜ್ಞರ ಅಭಿಪ್ರಾಯವನ್ನು ಸರ್ಕಾರಗಳು ಪಡೆದುಕೊಳ್ಳುವ ಮೂಲಕ ಸೂಕ್ತ ನಿರ್ಧಾರ ಗಳನ್ನು ಕೈಗೊಳ್ಳಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ನ್ಯಾಯವಾದಿಗಳ ಸಂಘದ ಮಾಜಿ ಅಧ್ಯಕ್ಷ ಎಸ್.ಎನ್. ಬಾರ್ಕಿ, ಉಪಾಧ್ಯಕ್ಷ ಜಿ.ಬಿ. ಯಲಗಚ್ಚ, ಹಿರಿಯ ನ್ಯಾಯವಾದಿಗಳಾದ ಬಿ.ಎಸ್. ಚೂರಿ, ಪ್ರಕಾಶ ಬನ್ನಿಹಟ್ಟಿ, ಸುರೇಶ ಗುಂಡಪ್ಪನವರ ಸೇರಿದಂತೆ ಅರಣ್ಯ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.ವಿನಯಕುಮಾರಗೆ ಸರ್ವೋತ್ತಮ ಸೇವಾ ಪ್ರಶಸ್ತಿಬ್ಯಾಡಗಿ: ರಾಜ್ಯ ಸರ್ಕಾರಿ ನೌಕರರ ದಿನಾಚರಣೆ ಅಂಗವಾಗಿ ಕೊಡಮಾಡಲ್ಪಡುವ ಜಿಲ್ಲಾಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿಗೆ ಸ್ಥಳೀಯ ಪುರಸಭೆಯ ಮುಖ್ಯಾಧಿಕಾರಿ ವಿನಯಕುಮಾರ ಭಾಜನಾರಾಗಿದ್ದಾರೆ.ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಪ್ರಶಸ್ತಿ ನೀಡಿ ಗೌರವಿಸಿದರು. ವಿನಯಕುಮಾರ ಅವರ ಸಾಧನೆಗೆ ಅಧ್ಯಕ್ಷ ಬಾಲಚಂದ್ರಗೌಡ ಪಾಟೀಲ ಸೇರಿದಂತೆ ಪುರಸಭೆ ಸರ್ವ ಸದಸ್ಯರು ಹಾಗೂ ಕಚೇರಿ ಸಿಬ್ಬಂದಿ ಅಭಿನಂದಿಸಿದೆ.