ಕುವೆಂಪು ಅವರು ಕೇವಲ ಒಬ್ಬ ಕವಿ ಅಥವಾ ಸಾಹಿತಿಯಲ್ಲ. ಅವರು ಕರ್ನಾಟಕದ ಅಮೂಲ್ಯ ಆಸ್ತಿ. ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿ ಜಗತ್ತಿಗೆ ಪರಿಚಯಿಸಿದ ಮಹಾನ್ ಚೇತನರಾಗಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ ನಾಲತವಾಡ ವಲಯದ ಅಧ್ಯಕ್ಷ ಡಾ.ಡಿ.ಆರ್.ಮಳಖೇಡ ಹೇಳಿದರು.
ಕನ್ನಡಪ್ರಭ ವಾರ್ತೆ ನಾಲತವಾಡ
ಕುವೆಂಪು ಅವರು ಕೇವಲ ಒಬ್ಬ ಕವಿ ಅಥವಾ ಸಾಹಿತಿಯಲ್ಲ. ಅವರು ಕರ್ನಾಟಕದ ಅಮೂಲ್ಯ ಆಸ್ತಿ. ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿ ಜಗತ್ತಿಗೆ ಪರಿಚಯಿಸಿದ ಮಹಾನ್ ಚೇತನರಾಗಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ ನಾಲತವಾಡ ವಲಯದ ಅಧ್ಯಕ್ಷ ಡಾ.ಡಿ.ಆರ್.ಮಳಖೇಡ ಹೇಳಿದರು.ಸ್ಥಳೀಯ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಡೆದ ಸುವರ್ಣ ಕರ್ನಾಟಕ ಸಂಭ್ರಮ, ಸರಣಿ ಉಪನ್ಯಾಸ ಮಾಲಿಕೆ ಹಾಗೂ ಕುವೆಂಪು ಜಯಂತಿ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು. ಕುವೆಂಪು ಅವರ ಸಾಹಿತ್ಯವು ಮಾನವೀಯತೆ, ವಿಶ್ವಮಾನವ ತತ್ವ ಮತ್ತು ಸಾಮಾಜಿಕ ಸಮಾನತೆ ಮಹತ್ವದ ಸಂದೇಶವನ್ನು ಹೊತ್ತು ತಂದಿದೆ. ವಿಶ್ವಮಾನವ ಎಂಬ ಪರಿಕಲ್ಪನೆಯನ್ನು ಕುವೆಂಪು ಅವರು ತಮ್ಮ ಕೃತಿಗಳ ಮೂಲಕ ಸಮಾಜಕ್ಕೆ ನೀಡಿದ್ದು, ಇಂದಿನ ಯುವ ಪೀಳಿಗೆ ಅವರ ವಿಚಾರಧಾರೆ ಅಳವಡಿಸಿಕೊಳ್ಳಬೇಕಾಗಿದೆ ಎಂದರು.
ರಕ್ಕಸಗಿ ಕ್ಲಸ್ಟರ್ ಸಿಆರ್‌ಪಿ ಮಹಾಂತೇಶ ನೂಲಿನವರ ಮಾತನಾಡಿ, ವಿಶ್ವಮಾನವ ಸಂದೇಶ ಸಾರಿದ ಕುವೆಂಪು ಅವರು ಕುಪ್ಪಳಿಯಲ್ಲಿ ಜನಿಸಿ, ಕವನ ಹಾಗೂ ಕಾದಂಬರಿಗಳ ಮೂಲಕ ಹೊಸ ಹೊಸ ಪದಗಳನ್ನು ಕನ್ನಡ ಸಾಹಿತ್ಯಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಮೊಟ್ಟ ಮೊದಲ ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡದ ಮೇರು ಕವಿಯಾಗಿದ್ದಾರೆ. ಮನುಷ್ಯ ಜಾತಿ ಒಂದೇ ಎಂಬ ತತ್ವದೊಂದಿಗೆ ಬದುಕಿದ ಅವರು, ಜೀವನ ಪೂರ್ತಿ ಜಾತಿಭೇದವಿಲ್ಲದೆ ನಡೆದುಕೊಂಡ ಮಹಾನ್ ಕವಿ. ಚಾತುರ್ವರ್ಣ ವ್ಯವಸ್ಥೆಯನ್ನು ತಮ್ಮ ಕವಿತೆಗಳ ಮೂಲಕ ತೀವ್ರವಾಗಿ ಟೀಕಿಸಿದ್ದು, ನಾಡಗೀತೆಯಲ್ಲೂ ಮನುಷ್ಯರೆಲ್ಲರೂ ಒಂದೇ ಎಂಬ ಭಾವನೆಯನ್ನು ಮೂಡಿಸಿದ್ದಾರೆ. ದೇಶ ಸಮೃದ್ಧಿಯಾಗಬೇಕಾದರೆ ಎಲ್ಲರೂ ಒಂದೇ ಎಂಬ ಮನೋಭಾವನೆ ಬೆಳಿಬೇಕು. ಇಂದಿನ ಕಾಲಘಟ್ಟದಲ್ಲಿ ಕುವೆಂಪು ಇದ್ದಿದ್ದರೆ ಜಾತಿ ವ್ಯವಸ್ಥೆಯನ್ನು ನೋಡಿ ಬಹಳ ನೋವು ಅನುಭವಿಸುತ್ತಿದ್ದರು ಎಂದು ಅಭಿಪ್ರಾಯಪಟ್ಟರು.ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಹಾಗೂ ಶಿಕ್ಷಕರಾದ ರಾಜು ಹಾದಿಮನಿ ಮಾತನಾಡಿ, ಗಾಂಧಿ ಈ ದೇಶಕ್ಕೆ ಹೇಗೆ ಪ್ರಸ್ತುತರಾಗಿದ್ದಾರೋ, ಹಾಗೆಯೇ ಕರ್ನಾಟಕಕ್ಕೆ ಕುವೆಂಪು ಪ್ರಸ್ತುತರಾಗಿದ್ದಾರೆ. ಅವರು ರಚಿಸಿದ ನಾಡಗೀತೆಗೆ ಇಂದು ನೂರು ವರ್ಷಗಳು ಪೂರ್ಣಗೊಂಡಿವೆ. ಕುವೆಂಪು ಅವರ ಸಾಹಿತ್ಯ ಇಂದಿಗೂ ಪ್ರಸ್ತುತವಾಗಿದ್ದು, ನಾಡಗೀತೆ ಮೂಲಕ ಮಾತ್ರವಲ್ಲದೆ ವಿಶ್ವಮಾನವ ಸಂದೇಶದ ಮೂಲಕವೂ ಜನಮನವನ್ನು ಗೆದ್ದಿದ್ದಾರೆ. ಕನ್ನಡವನ್ನು ಉಳಿಸುವಲ್ಲಿ ಹಾಗೂ ಬೆಳೆಸುವಲ್ಲಿ ಅವರ ಪಾತ್ರ ಮಹತ್ತರವಾಗಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಎ.ಎಚ್.ಖಾಜಿ ಮುಖ್ಯಗುರುಗಳು ಮಾತನಾಡಿ, ನಮ್ಮ ಶಾಲೆಯಲ್ಲಿ ಅನೇಕ ಕಾರ್ಯಕ್ರಮಗಳು ನಡೆದಿವೆ. ಆದರೆ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಂಡ ಈ ಕಾರ್ಯಕ್ರಮ ಅತ್ಯಂತ ಅಪರೂಪವಾದದ್ದು. ಅದು ಕೂಡ ಕನ್ನಡದ ಮಹಾಕವಿ ಕುವೆಂಪು ಅವರ ಜನ್ಮದಿನದ ಅಂಗವಾಗಿ ನಡೆದಿರುವುದು ಅತ್ಯಂತ ಸಂತಸದ ವಿಷಯ. ಕನ್ನಡದ ಬಗ್ಗೆ ಕೇವಲ ಮಾತಾಡುವಷ್ಟಕ್ಕೆ ಸೀಮಿತವಾಗದೇ, ಕನ್ನಡದ ನೆಲ, ಜಲ, ಭಾಷೆಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ಕೆಲಸವನ್ನು ಎಲ್ಲರೂ ಸೇರಿ ಮಾಡಬೇಕಿದೆ ಎಂದು ಕರೆ ನೀಡಿದರು.ಕಸಾಪ ಸದಸ್ಯ ಬಿ.ಬಿ. ಪೂಜಾರಿ ನಿರೂಪಿಸಿದರು. ಪಿ.ಜಿ. ಬಿರಾದಾರ ಸ್ವಾಗತಿಸಿದರು. ಕನ್ನಡ ಸಾಹಿತ್ಯ ಪರಿಷತ್‌ನ ಗೌರವ ಅಧ್ಯಕ್ಷ ಎ.ಎಸ್. ಪಟ್ಟಣಶಟ್ಟಿ, ಮಹಾಂತೇಶ ಮೆನದಾಳಮಠ, ಶಾಲೆ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಇದ್ದರು.