ಮಹಿಳೆಯರು ಶಿಕ್ಷಣದಿಂದ ವಂಚಿತರಾಗಬಾರದು. ಮಹಿಳೆಯರು ಶಿಕ್ಷಣವಂತರಾದರೆ ಮಾತ್ರ ಈ ಸಮಾಜದಲ್ಲಿ ಇರುವ ಅಂಕು-ಡೊಂಕುಗಳನ್ನು ತಿದ್ದಲು ಸಾಧ್ಯವಾಗುತ್ತದೆ. ಸಮಾಜದಲ್ಲಿ ಹೆಣ್ಣು, ಗಂಡು ಇಬ್ಬರು ಸಮಾನರು.
ಕನ್ನಡಪ್ರಭ ವಾರ್ತೆ ಇಂಡಿ
ಮಹಿಳೆಯರ ಸಬಲೀಕರಣಕ್ಕಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ಜ್ಞಾನ ವಿಕಾಸ ಯೋಜನೆ ಜಾರಿಗೆ ತಂದಿದೆ. ಇದರಿಂದ ಲಕ್ಷಾಂತರ ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗಿದೆ ಎಂದು ಹಿರಿಯ ದಿವಾಣಿ ನ್ಯಾಯಾಧೀಶ ಮತ್ತು ಜಿಎಂಎಫ್‌ಸಿ ಇಂಡಿ ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷ ಕೋಟೆಪ್ಪ ಕಾಂಬಳೆ ಹೇಳಿದರು.ತಾಲೂಕಿನ ಹಿರೇರೂಗಿ ಗ್ರಾಮದ ಶ್ರೀ ಜೇಟ್ಟಿಗೆಶ್ವರ ದೇವಾಲಯ ಆವರಣದಲ್ಲಿ ತಾಲೂಕುಮಟ್ಟದ ಮಹಿಳಾ ವಿಚಾರಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು. ಮಹಿಳೆಯರು ಶಿಕ್ಷಣದಿಂದ ವಂಚಿತರಾಗಬಾರದು. ಮಹಿಳೆಯರು ಶಿಕ್ಷಣವಂತರಾದರೆ ಮಾತ್ರ ಈ ಸಮಾಜದಲ್ಲಿ ಇರುವ ಅಂಕು-ಡೊಂಕುಗಳನ್ನು ತಿದ್ದಲು ಸಾಧ್ಯವಾಗುತ್ತದೆ. ಸಮಾಜದಲ್ಲಿ ಹೆಣ್ಣು, ಗಂಡು ಇಬ್ಬರು ಸಮಾನರು. ಆದ್ದರಿಂದ ಲಿಂಗ ಪತ್ತೆ ಹಾಗೂ ಬಾಲ್ಯ ವಿವಾಹ ಮಾಡುವುದು ಅಪರಾಧ ಎಂದು ಹೇಳಿದರು.
ಇಂಡಿ ತಾಲೂಕು ಯೋಜನಾಧಿಕಾರಿ ಎಲ್.ಎಂ.ನಟರಾಜ ಮಾತನಾಡಿ, ಗ್ರಾಮೀಣ ಭಾಗದ ಮಹಿಳೆಯರಿಗೆ ಶಿಕ್ಷಣ, ಆರೋಗ್ಯ, ಪೌಷ್ಟಿಕ ಆಹಾರ, ಕಾನೂನು ಅರಿವು, ಕೌಟುಂಬಿಕ ಸಾಮರಸ್ಯ ಕುರಿತು ಅರಿವು ಮೂಡಿಸುವ ಜೊತೆಗೆ ಅಧ್ಯಯನ ಪ್ರವಾಸಗಳ ಮೂಲಕ ಹೆಚ್ಚಿನ ಜಾಗೃತಿ ಮೂಡಿಸಲಾಗುತ್ತಿದೆ. ಮಹಿಳೆಯರು ಆರ್ಥಿಕವಾಗಿ ಸಬಲರಾಗಲು ಹಲವು ಯೋಜನೆಗಳನ್ನು ರೂಪಿಸಿದ್ದು, ಈ ಯೋಜನೆಯಗಳ ಉಪಯೋಗ ಪಡೆದುಕೊಳ್ಳಬೇಕು ಎಂದರು.ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ಇಂಡಿ ಘಟಕ ಅಧ್ಯಕ್ಷೆ ಭಾಗ್ಯಜ್ಯೋತಿ ಭಗವಂತಗೌಡರ ಮಾತನಾಡಿ, ಆರೋಗ್ಯವಂಥ ಕುಟುಂಬ ನಿರ್ವಹಣೆಯಲ್ಲಿ ಮಹಿಳೆಯರ ಪಾತ್ರ ಬಹಳ ಮುಖ್ಯ. ಕುಟುಂಬಕ್ಕಾಗಿ ದುಡಿಯುವ ಮಹಿಳೆಯರು, ಮಹಿಳೆಯರ ಪರವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಹಲವಾರು ಕಾರ್ಯಕ್ರಮಗಳನ್ನು ಹಾಕಿಕೊಂಡು ಕಾರ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯ. ಮಹಿಳೆಯರು ಒಂದಲ್ಲ ಒಂದು ಕ್ಷೇತ್ರದಲ್ಲಿ ತಮ್ಮನ್ನು ತಾವು ಗುರುತಿಸಿಕೊಳ್ಳುವಂತಾಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿವಿಧ ಯೋಜನೆಗಳ ಅಡಿಯಲ್ಲಿ ಫಲಾನುಭವಿಗಳಿಗೆ ಸಹಾಯಧನ ನೀಡಲಾಯಿತು. ಹಿರೇರೂಗಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸೋಮವ್ವ ಹೊಸಮನಿ ಅಧ್ಯಕ್ಷತೆ ವಹಿಸಿದ್ದರು. ವಕೀಲ ಜೆ.ಬಿ ಬೇನೂರ, ಇಂಡಿ ತಾಲೂಕು ಮಹಿಳಾ ಜ್ಞಾನ ವಿಕಾಸ ಸಮನ್ವಯಾಧಿಕಾರಿ ಜಯಶ್ರೀ ಎಸ್ ಎಂ, ಮೇಲ್ವಿಚಾರಕರಾದ ಅಶ್ವಿನಿ, ಚನ್ನವೀರ, ಸೇವಾ ಪ್ರತಿನಿಧಿಗಳು, ಸಂಘದ ಸರ್ವ ಸದಸ್ಯರು ಇದ್ದರು. ನಂತರ ಮಹಿಳಾ ಸದಸ್ಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.