ಎಂಎಂ ಹಿಲ್ಸ್‌ನಲ್ಲಿ ಒಂದೇ ದಿನ 5 ಹುಲಿ ಸಾವು ! ಗೋಮಾಂಸಕ್ಕೆ ವಿಷ ಬೆರೆಸಿ ಹತ್ಯೆ ಶಂಕೆ

Published : Jun 27, 2025, 07:11 AM IST
Chamarajanagar 5 Tiger death

ಸಾರಾಂಶ

ಮೃತ ಹಸುವಿನ ವಿಷ ಮಿಶ್ರಿತ ಮಾಂಸ ಸೇವಿಸಿ ತಾಯಿ ಹುಲಿ, ಅದರ 4 ಮರಿ ಸೇರಿ 5 ಹುಲಿಗಳು ಒಂದೇ ದಿನ ಮೃತಪಟ್ಟಿರುವ ಆಘಾತಕಾರಿ ಘಟನೆ

 ಚಾಮರಾಜನಗರ :  ಮೃತ ಹಸುವಿನ ವಿಷ ಮಿಶ್ರಿತ ಮಾಂಸ ಸೇವಿಸಿ ತಾಯಿ ಹುಲಿ, ಅದರ 4 ಮರಿ ಸೇರಿ 5 ಹುಲಿಗಳು ಒಂದೇ ದಿನ ಮೃತಪಟ್ಟಿರುವ ಆಘಾತಕಾರಿ ಘಟನೆ ಹುಲಿಗಳ ನಾಡೆಂದೇ ಪ್ರಖ್ಯಾತಿಯಾದ ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ವನ್ಯಜೀವಿ ಧಾಮದ ಹೂಗ್ಯಂ ವಲಯದ ಮಿಣ್ಯಂ ಅರಣ್ಯದಲ್ಲಿ ನಡೆದಿದೆ. ಒಂದೇ ದಿನ 5 ಹುಲಿಗಳು ಸಾವನ್ನಪ್ಪಿರುವ ದುರಂತ ದೇಶದಲ್ಲಿ ಇದೇ ಮೊದಲು.

ಮಲೆ ಮಹದೇಶ್ವರ ಅರಣ್ಯ ಪ್ರದೇಶದಲ್ಲಿ ಸುಮಾರು 7 ರಿಂದ 8 ವರ್ಷದ ಹುಲಿಯೊಂದು 3 ಹೆಣ್ಣು ಮತ್ತು ಒಂದು ಗಂಡು ಸೇರಿ ನಾಲ್ಕು ಮರಿಗಳಿಗೆ ಜನ್ಮ ನೀಡಿತ್ತು. ಹುಲಿಗಳು ತಮ್ಮ ಸಾಮ್ರಾಜ್ಯ ವಿಸ್ತರಿಸಿಕೊಳ್ಳುವ ಮುನ್ನವೇ ಮಾನವ- ವನ್ಯಜೀವಿಗಳ ಸಂಘರ್ಷದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಮಾನವನ ಪ್ರತೀಕಾರಕ್ಕೆ ಬಲಿಯಾಗಿವೆ.

ವಿಷ ಹಾಕಲು ಕಾರಣವೇನು?:

ಮಲೆಮಹದೇಶ್ವರ ಬೆಟ್ಟ ವನ್ಯಧಾಮದ ಕಾಡಂಚಿನಲ್ಲಿರುವ ಮಿಣ್ಯಂ, ಹೂಗ್ಯಂ, ನಾಲ್‌ರೋಡ್‌, ಪಾಲಾರ್‌ ಸೇರಿ ಸುತ್ತಮುತ್ತಲ ಹತ್ತಾರು ಗ್ರಾಮಗಳಲ್ಲಿ ವಾಸಿಸುವ ಜನರು ತಮಿಳುನಾಡಿನ ಕೆಲ ವ್ಯಕ್ತಿಗಳಿಂದ ಸಾಲ ಪಡೆದಿರುತ್ತಾರೆ. ತಮಿಳುನಾಡಿನ ಪ್ರಸಿದ್ಧವಾದ ಬರಗೂರು ತಳಿಯ ಜಾನುವಾರುಗಳನ್ನು ಸಾಲಗಾರರಿಗೆ ತಂದು ಕೊಡುವ ಸಾಲ ಕೊಟ್ಟವರು, ಅವನ್ನು ಮೇಯಿಸಿಕೊಡಲು ಸೂಚಿಸುತ್ತಾರೆ. ಸ್ಥಳೀಯ ಜನರು ಈ ಜಾನುವಾರುಗಳನ್ನು ಮಲೆಮಹದೇಶ್ವರ ವನ್ಯಧಾಮದೊಳಗೆ ಮೇಯಿಸುತ್ತಾರೆ. ಹೀಗೆ ತಮಿಳುನಾಡಿನ ಜಾನುವಾರು ಮಾಲೀಕರು ಕಾಡಂಚಿನ ಗ್ರಾಮಗಳ ಜನರ ಮೂಲಕ ತಮ್ಮ ಜಾನುವಾರುಗಳನ್ನು ಅಭಿವೃದ್ಧಿಪಡಿಸಿಕೊಂಡು ಹಣ ಮಾಡಿಕೊಳ್ಳುತ್ತಿದ್ದಾರೆ.

ಜಾನುವಾರುಗಳನ್ನು ನೋಡಿಕೊಳ್ಳುವ ಸಾಲಗಾರರು ಹಸುಗಳಿಂದ ಹಾಲನ್ನು ಕರೆದುಕೊಳ್ಳಬಹುದು. ಆದರೆ, ಕರು ಮತ್ತು ಗೊಬ್ಬರವನ್ನು ಮಾತ್ರ ಅವುಗಳ ಮಾಲೀಕರಿಗೇ (ಸಾಲ ಕೊಟ್ಟವರು) ನೀಡಬೇಕು.

ಕಾಡಿಗೆ ಹಸುವನ್ನು ಮೇಯಲು ಬಿಟ್ಟಾಗ ಹುಲಿಗಳು ಅವನ್ನು ಕೊಂದು ತಿನ್ನುತ್ತವೆ. ಹೀಗಾಗಿ ಹಸು ಸಾಕಣೆದಾರರು ಹಾಗೂ ಹುಲಿಗಳ ನಡುವೆ ಮೊದಲಿನಿಂದಲೂ ಸಂಘರ್ಷ ನಡೆಯುತ್ತಲೇ ಇದೆ. ಅದೇ ರೀತಿ ತಾಯಿ ಹುಲಿ, ಅದರ ನಾಲ್ಕು ಮರಿಗಳು ಹಸುವನ್ನು ಕೊಂದು, ತಿಂದು ತೆರಳಿವೆ. ಇದರಿಂದ ಸಿಟ್ಟಿಗೆದ್ದ ಸಾಕಣೆದಾರರು ಹುಲಿ ತಿಂದು ಬಿಟ್ಟು ಹೋಗಿದ್ದ ಹಸುವಿನ ಮಾಂಸಕ್ಕೆ ವಿಷ ಬೆರೆಸಿದ್ದಾರೆ. ತಾಯಿ ಹುಲಿ ಮತ್ತು ಅದರ ನಾಲ್ಕು ಮರಿಗಳು ಆ ವಿಷ ಮಿಶ್ರಿತ ಮಾಂಸ ಸೇವಿಸಿ ಸಾವಿಗೀಡಾಗಿವೆ ಎಂದು ಹೇಳಲಾಗಿದೆ.

ಹಸುವಿನ ಮಾಂಸಕ್ಕೆ ವಿಷ ಪ್ರಶಾನ:

ರಾಷ್ಟ್ರದಲ್ಲೇ ಮಧ್ಯಪ್ರದೇಶದ ನಂತರ ಹೆಚ್ಚು ಹುಲಿಗಳನ್ನು ಹೊಂದಿರುವ ಕರ್ನಾಟಕದಲ್ಲಿ ಹೆಚ್ಚಿನ ಹುಲಿಗಳು ದಕ್ಷಿಣ ಭಾಗದ ಅರಣ್ಯದಲ್ಲಿವೆ. ಅವುಗಳ ಪೈಕಿ ನಾಗರಹೊಳೆ, ಬಂಡೀಪುರ, ಬಿಳಿಗಿರಿರಂಗನಾಥಸ್ವಾಮಿ ವನ್ಯಧಾಮದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಾಗುತ್ತಿವೆ. ಮಹದೇಶ್ವರ ಬೆಟ್ಟ ವನ್ಯಧಾಮದಲ್ಲಿ 10 ರಿಂದ 12 ಹುಲಿಗಳು ತಮ್ಮ ಸಾಮ್ರಾಜ್ಯ ನಿರ್ಮಿಸಿಕೊಂಡಿವೆ. ಹುಲಿಗಳು ಕಾಡು ಪ್ರಾಣಿಗಳ ಜೊತೆಗೆ, ಕಾಡಿಗೆ ಬರುವ ಹಸುಗಳನ್ನು ಬೇಟೆಯಾಡಿ ಹಸುವಿನ ಮಾಂಸವನ್ನು ವಾರಗಟ್ಟಲೇ ಆಹಾರವಾಗಿಸಿಕೊಳ್ಳುತ್ತವೆ. ಇದರ ಮಾಹಿತಿ ಬಲ್ಲ ದುರುಳರು ಸತ್ತ ಹಸುವಿನ ಮಾಂಸಕ್ಕೆ ವಿಷಪ್ರಾಶನ ಮಾಡಿದ್ದಾರೆ. ಈ ಮಾಂಸವನ್ನು ಸೇವಿಸಿದ ತಾಯಿ ಹುಲಿ ಮತ್ತು 4 ಮರಿ ಹುಲಿಗಳು ಮೃತಪಟ್ಟಿವೆ.

ಹುಲಿಗಳು ಸಾವನಪ್ಪಿದ ಪಕ್ಕದಲ್ಲೇ ವಿಷ ಪ್ರಾಶನವಾಗಿರುವ ಹಸುವಿನ ಕಳೇಬರ ಪತ್ತೆಯಾಗಿದೆ. ಹೂಗ್ಯಂ ವಲಯದ ಮೀಣ್ಯಂ ಬೀಟ್‌ನಲ್ಲಿ ಬುಧವಾರ ಸಂಜೆ ಅರಣ್ಯ ಸಿಬ್ಬಂದಿ ಗಸ್ತು ನಡೆಸುವಾಗ 5 ಹುಲಿಗಳು ಸಾವನ್ನಪ್ಪಿರುವುದು ಪತ್ತೆಯಾಗಿದೆ.

ತನಿಖೆಗೆ ಉನ್ನತ ಮಟ್ಟದ ಸಮಿತಿ

- 14 ದಿನದಲ್ಲಿ ವರದಿಗೆ ಸೂಚನೆ

ಬೆಂಗಳೂರು: ಮಲೆಮಹದೇಶ್ವರ ವನ್ಯಜೀವಿ ವಲಯ ವ್ಯಾಪ್ತಿಯಲ್ಲಿ ಸಂಭವಿಸಿದ 5 ಹುಲಿಗಳ ಸಾವಿನ ಪ್ರಕರಣವನ್ನು ತನಿಖೆ ನಡೆಸಲು ಪಿಸಿಸಿಎಫ್‌ ಬಿ.ಪಿ. ರವಿ ನೇತೃತ್ವದ ಉನ್ನತ ಮಟ್ಟದ ತನಿಖಾ ಸಮಿತಿ ರಚಿಸಿ ಅರಣ್ಯ ಇಲಾಖೆ ಆದೇಶಿಸಿದೆ. ಅವರೊಂದಿಗೆ ತನಿಖಾ ಸಮಿತಿಯಲ್ಲಿ ಎಪಿಸಿಸಿಎಫ್‌ ಶ್ರೀನಿವಾಸುಲು, ಚಾಮರಾಜನಗರ ವೃತ್ತದ ಸಿಸಿಎಫ್‌ ಟಿ. ಹೀರಾಲಾಲ್‌, ವನ್ಯಜೀವಿ ತಜ್ಞ ಡಾ. ಸಂಜಯ್‌ಗುಬ್ಬಿ, ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ)ದ ಪ್ರತಿನಿಧಿಯೊಬ್ಬರು, ಮೈಸೂರು ಚಾಮರಾಜೇಂದ್ರ ಮೃಗಾಲಯದ ಪಶು ವೈದ್ಯರೊಬ್ಬರನ್ನು ಸದಸ್ಯರನ್ನಾಗಿ ನಿಯೋಜಿಸಲಾಗಿದೆ. ಈ ಸಮಿತಿಯು 14 ದಿನಗಳೊಳಗಾಗಿ ಹುಲಿಗಳ ಅಸಹಜ ಸಾವಿಗೆ ಕಾರಣ, ಅದನ್ನು ಮಾಡಿದವರ ಕುರಿತಂತೆ ವರದಿಯನ್ನು ಸಲ್ಲಿಸುವಂತೆಯೂ ಸೂಚಿಸಲಾಗಿದೆ.

ಹೇಗಾಯ್ತು ಸಾವು?

- ಹಸುಗಳನ್ನು ಮೇಯಲು ಅರಣ್ಯಕ್ಕೆ ಕಾಡಂಚಿನ ಜನರು ಬಿಡುತ್ತಾರೆ. ಆ ವೇಳೆ ಹಸುವೊಂದು ಹುಲಿಗೆ ಬಲಿಯಾಗಿದೆ

- ಇದರಿಂದ ಕೆರಳಿದ ಹಸು ಸಾಕಣೆದಾರರು ಹುಲಿ ತಿಂದು ಬಿಟ್ಟು ಹೋದ ಹಸುವಿನ ಮಾಂಸಕ್ಕೆ ವಿಷ ಬೆರೆಸಿದ್ದಾರೆ

- ಹುಲಿ ತನ್ನ 4 ಮರಿಗಳೊಂದಿಗೆ ಆ ಮಾಂಸವನ್ನು ಭಕ್ಷಿಸಿದಾಗ ಅದು ಸಾವಿಗೀಡಾಗಿದೆ ಎನ್ನುತ್ತವೆ ವರದಿಗಳು

PREV
Read more Articles on

Recommended Stories

ಕೆ.ಎನ್‌. ರಾಜಣ್ಣ ವಜಾ ಖಂಡಿಸಿ 29ಕ್ಕೆ ಮೈಸೂರಿನಲ್ಲಿ ಬೃಹತ್ ಪ್ರತಿಭಟನೆ
ಸಾಮೂಹಿಕ ವಿವಾಹದಲ್ಲಿ ದಾಂಪತ್ಯಕ್ಕೆ ಕಾಲಿಟ್ಟ 93 ಜೋಡಿ