ಎಂಎಂ ಹಿಲ್ಸ್‌ ಇನ್ನು ಹುಲಿ ಸಂರಕ್ಷಿತ ಅರಣ್ಯ? ತ.ನಾಡಿಂದ ಜಾನುವಾರು ಕರೆತರುವುದಕ್ಕೂ ನಿಷೇಧ

Published : Jul 09, 2025, 10:27 AM IST
 rajasthan ranthambore tiger reserve

ಸಾರಾಂಶ

ಮಲೆಮಹದೇಶ್ವರ ಬೆಟ್ಟ ವನ್ಯಜೀವಿಧಾಮವನ್ನು ಹುಲಿ ಸಂರಕ್ಷಿತ ಪ್ರದೇಶವನ್ನಾಗಿ ಘೋಷಿಸುವುದು ಹಾಗೂ ತಮಿಳುನಾಡಿನಿಂದ ಮೇವಿಗಾಗಿ ವನ್ಯಜೀವಿಧಾಮಕ್ಕೆ ಜಾನುವಾರುಗಳನ್ನು ಕರೆತರುವುದಕ್ಕೆ ನಿಷೇಧ ಹೇರಲು ಸೂಕ್ತ ಕ್ರಮ ಕೈಗೊಳ್ಳುವಂತೆ ಹಿರಿಯ ಅರಣ್ಯಾಧಿಕಾರಿಗಳಿಗೆ ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಸೂಚನೆ ನೀಡಿದ್ದಾರೆ.

 ಬೆಂಗಳೂರು :  ಮಲೆಮಹದೇಶ್ವರ ಬೆಟ್ಟ ವನ್ಯಜೀವಿಧಾಮವನ್ನು ಹುಲಿ ಸಂರಕ್ಷಿತ ಪ್ರದೇಶವನ್ನಾಗಿ ಘೋಷಿಸುವುದು ಹಾಗೂ ತಮಿಳುನಾಡಿನಿಂದ ಮೇವಿಗಾಗಿ ವನ್ಯಜೀವಿಧಾಮಕ್ಕೆ ಜಾನುವಾರುಗಳನ್ನು ಕರೆತರುವುದಕ್ಕೆ ನಿಷೇಧ ಹೇರಲು ಸೂಕ್ತ ಕ್ರಮ ಕೈಗೊಳ್ಳುವಂತೆ ಹಿರಿಯ ಅರಣ್ಯಾಧಿಕಾರಿಗಳಿಗೆ ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಸೂಚನೆ ನೀಡಿದ್ದಾರೆ.

ವಿಕಾಸಸೌಧದಲ್ಲಿ ಸೋಮವಾರ ಅರಣ್ಯ ಪಡೆ ಮುಖ್ಯಸ್ಥರು, ಮುಖ್ಯ ವನ್ಯಜೀವಿ ಪರಿಪಾಲಕರು ಸೇರಿ ಇಲಾಖೆ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಈಶ್ವರ್‌ ಖಂಡ್ರೆ, ಮಲೆಮಹದೇಶ್ವರ ಬೆಟ್ಟ ಹುಲಿ ಸಂರಕ್ಷಿತ ಪ್ರದೇಶ ಘೋಷಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಅದರಲ್ಲೂ ಎಲ್ಲ ಜನಪ್ರತಿನಿಧಿಗಳು ಮತ್ತು ಬಾಧ್ಯಸ್ಥರೊಂದಿಗೆ ಸಭೆ ನಡೆಸಿ, ಪ್ರಸ್ತಾವನೆ ಸಲ್ಲಿಸಬೇಕು ಎಂದು ಹೇಳಿದರು.

ರಾಜ್ಯದಲ್ಲಿ ವನ್ಯಜೀವಿಗಳ ಅಸಹಜ ಸಾವು ನಿಯಂತ್ರಿಸಲು ಮತ್ತು ವನ್ಯಮೃಗಗಳ ದಾಳಿಯಿಂದ ಜೀವಹಾನಿ ತಡೆಯಲು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ಅದಕ್ಕಾಗಿ ಆಯಾ ವಲಯದಲ್ಲಿ ಅಧಿಕಾರಿ, ಸಿಬ್ಬಂದಿಗೆ ಹೊಣೆಗಾರಿಕೆ ನೀಡಬೇಕು ಎಂದು ತಿಳಿಸಿದರು.

ಹೊರರಾಜ್ಯದ ಜಾನುವಾರುಗಳಿಗೆ ನಿಷೇಧ:

ತಮಿಳುನಾಡಿನಿಂದ ಸಾವಿರಾರು ಹಸು, ಎಮ್ಮೆಗಳನ್ನು ಮೇವಿಗಾಗಿ ಮಲೆಮಹದೇಶ್ವರ ಬೆಟ್ಟ ವನ್ಯಜೀವಿಧಾಮ ಅರಣ್ಯ ಪ್ರದೇಶಕ್ಕೆ ಕರೆತರಲಾಗುತ್ತಿದೆ. ಇದೊಂದು ಉದ್ಯಮವಾಗಿ ಮಾರ್ಪಟ್ಟಿದ್ದು, ಅದಕ್ಕೆ ಕಡಿವಾಣ ಹಾಕಬೇಕಿದೆ. ಸ್ಥಳೀಯ ಜಾನುವಾರುಗಳನ್ನು ಮೇಯಿಸಲು ಪರವಾನಗಿ ನೀಡಿ, ಹೊರರಾಜ್ಯದ ಜಾನುವಾರುಗಳನ್ನು ಮಲೆಮಹದೇಶ್ವರ ಬೆಟ್ಟ ವನ್ಯಜೀವಿಧಾಮ ಕರೆತರುವುದಕ್ಕೆ ನಿಷೇಧಿಸಬೇಕು. ಸಾವಿರಾರು ಜಾನುವಾರುಗಳು ಬಂದು ವನ್ಯಜೀವಿಧಾಮದಲ್ಲಿ ಮೇವನ್ನು ಖಾಲಿ ಮಾಡಿದರೆ ಇಲ್ಲಿನ ವನ್ಯಜೀವಿಗಳಿಗೆ ಸಮಸ್ಯೆಯಾಗುತ್ತದೆ. ಅದಕ್ಕಾಗಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಈಶ್ವರ್‌ ಖಂಡ್ರೆ ನಿರ್ದೇಶಿಸಿದರು.

ರಾಜ್ಯದಲ್ಲಿ 40 ಸಾವಿರ ಚದರ ಕಿ.ಮೀ. ಅರಣ್ಯ ಪ್ರದೇಶವಿದ್ದು, ಭೌತಿಕವಾಗಿ ಅಷ್ಟು ದೊಡ್ಡ ಪ್ರಮಾಣದ ಅರಣ್ಯ ಪ್ರದೇಶ ಕಾಯುವುದು ಕಷ್ಟ. ಹೀಗಾಗಿ ವನ್ಯಜೀವಿಗಳ ಕಳ್ಳಬೇಟೆ, ಅರಣ್ಯ ಒತ್ತುವರಿ, ಮರಗಳ ಅಕ್ರಮ ಕಡಿತಲೆ ಸೇರಿ ಅರಣ್ಯ ಮತ್ತು ವನ್ಯಜೀವಿಗಳಿಗೆ ಸಮಸ್ಯೆಯಾಗುವುದನ್ನು ತಡೆಯಲು ಕೃತಕ ಬುದ್ಧಿಮತ್ತೆ, ಡ್ರೋನ್‌ ಕ್ಯಾಮರಾ ಬಳಕೆ, ಸಿಸಿ ಕ್ಯಾಮೆರಾ ಅಳವಡಿಸುವ ಮೂಲಕ ಕ್ರಮ ಕೈಗೊಳ್ಳಬೇಕು. ಅಲ್ಲದೆ, ಆ ಕ್ಯಾಮೆರಾಗಳ ದೃಶ್ಯಗಳ ಆಧಾರದಲ್ಲಿ ಅಕ್ರಮ ಎಸಗುವವರ ಮೇಲೆ ನಿಗಾವಹಿಸಬೇಕು. ಅದಕ್ಕಾಗಿ ಕೇಂದ್ರೀಕೃತ ಕಮಾಂಡ್‌ ಸೆಂಟರ್‌ ಸ್ಥಾಪಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿದರು.

ಕಾಡಂಚಿನಲ್ಲಿನ ಗ್ರಾಮಗಳ ಜನರೊಂದಿಗೆ ಅರಣ್ಯಾಧಿಕಾರಿ, ಸಿಬ್ಬಂದಿ ಸೌಹಾರ್ದಯುತ ಸಂಬಂಧ ಹೊಂದಬೇಕು. ಜನರಿಗೆ ಅರಣ್ಯ ಮತ್ತು ವನ್ಯಜೀವಿಗಳ ಮಹತ್ವ ತಿಳಿಸಬೇಕು. ಕಾಡಂಚಿನ ಜನರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಕೌಶಲ್ಯ ತರಬೇತಿ ಕೊಡಬೇಕು. ಆಗ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಗೆ ಜನ ನೆರವಾಗುತ್ತಾರೆ. ಆ ರೀತಿಯ ವಾತಾವರಣ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

PREV
Read more Articles on