;Resize=(412,232))
ಚಾಮರಾಜನಗರ : ‘ಚಾಮರಾಜನಗರಕ್ಕೆ ಬಂದರೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಅಪನಂಬಿಕೆ ಬೇಡ. ನಾವು ಪರಿಶುದ್ಧವಾಗಿ ಪ್ರಾರ್ಥನೆ, ನಂಬಿಕೆಯಿಂದ ನಡೆಯುವುದು ಮುಖ್ಯ. ನಾವು ಯಾವುದೇ ತಪ್ಪು ಮಾಡದೆ ದೇವರ ಬಳಿ ಒಳ್ಳೆಯದನ್ನೇ ಪ್ರಾರ್ಥಿಸಿದರೆ ಒಳ್ಳೆಯದಾಗುತ್ತೆ. ನಾವು ಶುದ್ಧವಾಗಿದ್ದಾಗ ಮೂಢನಂಬಿಕೆ ದೂರವಾಗುತ್ತದೆ’ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಚಾಮರಾಜನಗರದಲ್ಲಿ ನಡೆದ ಎರಡು ದಿನಗಳ ಅಂತಾರಾಷ್ಟ್ರೀಯ ಬೌದ್ಧ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಸಿದ್ದರಾಮಯ್ಯ ಅವರು ಎಂಟು ವರ್ಷಗಳ ಕಾಲ ಅಧಿಕಾರದಲ್ಲಿ ಇದ್ದಾಗ ಚಾಮರಾಜನಗರಕ್ಕೆ ಭೇಟಿ ನೀಡುತ್ತಿದ್ದರು. ಅವರು ಉತ್ತಮ ಆಡಳಿತವನ್ನೂ ನಡೆಸಿದ್ದಾರೆ. ಹೀಗಿರುವಾಗ ಚಾಮರಾಜನಗರಕ್ಕೆ ಬಂದರೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಮಾತಿಗೆ ಅರ್ಥವಿಲ್ಲ ಎಂದು ತಿಳಿಸಿದರು.
ನಾವು ಇಲ್ಲಿ ಅಭಿವೃದ್ಧಿ ಮತ್ತು ಪ್ರಗತಿಗಾಗಿ ಪ್ರಾರ್ಥಿಸಲು ಬಂದಿದ್ದೇವೆ. ಬುದ್ಧನ ಆಚಾರ-ವಿಚಾರಗಳನ್ನು ಸ್ಮರಿಸಿ, ಅವರ ಸಂದೇಶವನ್ನು ಅರಿತುಕೊಳ್ಳುವುದು ನಮ್ಮ ಉದ್ದೇಶ. ಬುದ್ಧ ಜಗತ್ತಿಗೆ ಮಾನವೀಯತೆ, ತ್ಯಾಗ, ಶಾಂತಿ ಮತ್ತು ಅಭಿವೃದ್ಧಿಯ ಮಹತ್ವದ ಸಂದೇಶ ನೀಡಿದ್ದಾರೆ. ಈ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಎಲ್ಲವನ್ನೂ ಅನುಮಾನದಿಂದ ನೋಡುವ ಮನೋಭಾವ ಬೇಡ ಎಂದು ಹೇಳಿದರು.
ಮೀಸಲಾತಿ ಎಂದರೆ ಕೇವಲ ಅವಕಾಶವಲ್ಲ. ಅವಕಾಶಗಳಿಂದ ದೂರ ಉಳಿದವರಿಗೆ ಮುಂದೆ ಬರಲು ದಾರಿ ಮಾಡಿಕೊಡುವ ವ್ಯವಸ್ಥೆ. ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಮೂಲಕವೇ ಸಮಾಜದ ಪ್ರಗತಿ ಸಾಧ್ಯ. ಬಡವರು, ಶೋಷಿತರು ಹಾಗೂ ಅವಕಾಶ ವಂಚಿತ ಸಮುದಾಯಗಳ ಬದುಕಿನಲ್ಲಿ ಬದಲಾವಣೆ ತರುವುದೇ ಸರ್ಕಾರದ ಆಶಯ. ಬುದ್ಧ, ಬಸವ ಮತ್ತು ಅಂಬೇಡ್ಕರ್ ಅವರ ತತ್ವಗಳ ಆಧಾರದ ಮೇಲೆ ಸರ್ಕಾರದ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ ಎಂದರು.
ಅನೇಕ ಬಡ ರೈತರು ನೇಗಿಲು ಮತ್ತು ಜಾನುವಾರುಗಳಿಲ್ಲದೆ ಕೃಷಿ ಮಾಡುವುದು ಕಷ್ಟವಾಗಿದೆ. ಅಂತಹ ರೈತರಿಗೆ ನೆರವಾಗಲು ಉಚಿತವಾಗಿ ಭೂಮಿಯನ್ನು ಉಳುಮೆ ಮಾಡಿಕೊಳ್ಳುವ ಸೌಲಭ್ಯ ಕಲ್ಪಿಸುವ ಉದ್ದೇಶದೊಂದಿಗೆ ‘ನೇಗಿಲಯೋಗಿ’ ಕಾರ್ಯಕ್ರಮವನ್ನು ಆರಂಭಿಸಲಾಗುತ್ತಿದೆ ಎಂದು ತಿಳಿಸಿದರು.