ಪಟ್ಟಣದ ಪ್ರವಾಸಿ ಮಂದಿರದ ಮುಂದಿನ ಅಂಬಿಕಾ ಲಿಕ್ಕರ್ಸ್ ಮದ್ಯದ ಅಂಗಡಿ ವಿಚಾರದಲ್ಲಿ ಪುರಸಭೆಯು ದ್ವಂದ್ವ ನಿಲುವು ತಳೆದಿದ್ದು, ಇದು ತೀವ್ರ ಅನುಮಾನಕ್ಕೆ ಕಾರಣವಾಗಿದೆ.
ರಂಗೂಪುರ ಶಿವಕುಮಾರ್
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆಪಟ್ಟಣದ ಪ್ರವಾಸಿ ಮಂದಿರದ ಮುಂದಿನ ಅಂಬಿಕಾ ಲಿಕ್ಕರ್ಸ್ ಮದ್ಯದ ಅಂಗಡಿ ವಿಚಾರದಲ್ಲಿ ಪುರಸಭೆಯು ದ್ವಂದ್ವ ನಿಲುವು ತಳೆದಿದ್ದು, ಇದು ತೀವ್ರ ಅನುಮಾನಕ್ಕೆ ಕಾರಣವಾಗಿದೆ.
ಕಳೆದ ಒಂದು ತಿಂಗಳ ಹಿಂದೆ ಸಾರ್ವಜನಿಕ ಹಿತಾಸಕ್ತಿ ಹೆಸರಿನಲ್ಲಿ ಪರವಾನಗಿ ರದ್ದು ಮಾಡಿದ್ದ ಪುರಸಭೆ, ಇದೀಗ ಇದ್ದಕ್ಕಿದ್ದಂತೆ ಅದೇ ಮದ್ಯದ ಅಂಗಡಿಗೆ ಮತ್ತೆ ಅನುಮತಿ ನೀಡಿ ಅಬಕಾರಿ ಇಲಾಖೆಗೆ ಪತ್ರ ಬರೆದಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.ಮೊದಲ ಪತ್ರ:
ಪಟ್ಟಣದ 1ನೇ ವಿಭಾಗ, 2 ನೇ ವಾರ್ಡ್, ಬಿಎಂ ರಸ್ತೆ ಊಟಿ ಸರ್ಕಲ್ ಹತ್ತಿರದ ಮಳಿಗೆಯಲ್ಲಿ ಆರಂಭಿಸಲು ಉದ್ದೇಶಿಸಿದ್ದ ಅಂಬಿಕಾ ಮದ್ಯದ ಅಂಗಡಿಗೆ ಕಳೆದ ಸೆ.7 ರಂದು ಪುರಸಭೆ ಉದ್ದಿಮೆ ಪರವಾನಗಿ ನೀಡಿತ್ತು.ಇದಾದ ಬಳಿಕ ಸಾರ್ವಜನಿಕರು ಸೆ.11 ರಂದು ಪುರಸಭೆಗೆ ದೂರು ನೀಡಿದ್ದರು.ಸ್ಥಳದ ಪಕ್ಕದಲ್ಲೇ ಸಾರ್ವಜನಿಕ ಶೌಚಾಲಯ ಇದೆ. ಬಂಡೀಪುರ ಚೆಕ್ಪೋಸ್ಟ್ ರಾತ್ರಿ 9 ಗಂಟೆಗೆ ಮುಚ್ಚುತ್ತದೆ, ಆ ಮಾರ್ಗದಲ್ಲಿ ವಾಹನ ದಟ್ಟಣೆ ಹೆಚ್ಚಿದೆ.ಇನ್ನೊಂದು ಮದ್ಯದಂಗಡಿ ತೆರೆದರೆ ಕುಡಿದು ಅಹಿತಕರ ಘಟನೆ, ವಾಹನ ದಟ್ಟಣೆ,ಅಪಘಾತ ಸಂಭವಿಸುವ ಸಾಧ್ಯತೆ ಇದೆ.
ಸಾರ್ವಜನಿಕರ ದೂರನ್ನು ಪರಿಗಣಿಸಿದ ಪುರಸಭೆಯು ಸಾರ್ವಜನಿಕರ ಹಿತದೃಷ್ಠಿಯಿಂದ ಪರವಾನಿಗೆಯ ಷರತ್ತು ಮತ್ತು ನಿಬಂಧನೆಗಳೊಳಪಡಿಸಿ ( 06,07,16) ರಂತೆ ಯಾವುದೇ ಸಾರ್ವಜನಿಕರ ಪರವಾನಿಗೆ ಬಗ್ಗೆ ಆಕ್ಷೇಪ ಮತ್ತು ದೂರು ಬಂದಲ್ಲಿ ತನ್ನಂತಾನೆ ಸದರಿ ಪರವಾನಿಗೆಯನ್ನು ರದ್ದು ಮಾಡುವ ಷರತ್ತಿಗೊಳಪಡಿಸಿ ಪರವಾನಿಗೆಯನ್ನು ಸೆ.೨೫ ರಂದು ಸಾರ್ವಜನಿಕ ಹಿತದೃಷ್ಟಿಯಿಂದ ರದ್ದುಪಡಿಸಿ ಆದೇಶ ಹೊರಡಿಸಿತ್ತು.ಮತ್ತೆ ಅನುಮತಿ?:
ಇದಾದ ತಿಂಗಳ ಬಳಿಕ ಪರವಾನಗಿ ರದ್ದು ಪಡಿಸಿದ್ದ ಪುರಸಭೆಯು ಮತ್ತೆ ಅಂಬಿಕಾ ಮದ್ಯದ ಅಂಗಡಿಗೆ ಎನ್ಒಸಿ ನೀಡಿ ಅಬಕಾರಿ ಇಲಾಖೆಗೆ ಪತ್ರ ಬರೆದಿದೆ ಎಂದು ತಿಳಿದು ಬಂದಿದೆ.ಯಾರ ಕೈವಾಡ?:
ಪುರಸಭೆಯ ಈ ಯು-ಟರ್ನ್ ಹಿಂದೆ ಹಲವು ಅನುಮಾನಗಳು ವ್ಯಕ್ತವಾಗಿವೆ: ಸಾರ್ವಜನಿಕ ಹಿತಾಸಕ್ತಿ ಒಂದೇ ತಿಂಗಳಲ್ಲಿ ಹೇಗೆ ಬದಲಾಯಿತು? ಸೆಪ್ಟೆಂಬರ್ನಲ್ಲಿ ಅಪಾಯಕಾರಿ ಎಂದಿದ್ದ ಜಾಗ ಅಕ್ಟೋಬರ್ನಲ್ಲಿ ಹೇಗೆ ಸುರಕ್ಷಿತವಾಯಿತು?ಪ್ರಭಾವಿಗಳ ಕೈವಾಡ?:
ಪುರಸಭೆ ಅಧಿಕಾರಿಗಳು ಯಾರ ಒತ್ತಡಕ್ಕೆ ಮಣಿದಿದ್ದಾರಾ? ಕಾಯ್ದೆ ಉಲ್ಲಂಘನೆಯೇ? ಒಮ್ಮೆ ಸಾರ್ವಜನಿಕ ಆಕ್ಷೇಪದ ಮೇರೆಗೆ ರದ್ದು ಮಾಡಿದ ಪರವಾನಗಿಯನ್ನು ಅದೇ ಕಾಯ್ದೆಯಡಿ ಮತ್ತೆ ಹೇಗೆ ನೀಡಬಹುದು? ಎಂಬ ಪ್ರಶ್ನೆ ಕೂಡ ಎದ್ದಿದೆ.ಪುರಸಭೆಯು ಸಾರ್ವಜನಿಕರ ದೂರಿಗೆ ಬೆಲೆ ಕೊಡದೇ, ಮದ್ಯದ ಲಾಬಿಗೆ ಮಣಿದರೆ ನಾವು ಮತ್ತೆ ಜಿಲ್ಲಾಧಿಕಾರಿಗಳಿಗೆ,ಲೋಕಾಯುಕ್ತಕ್ಕೆ ದೂರು ನೀಡುತ್ತೇವೆ ಎಂದು ಸ್ಥಳೀಯ ನಾಗರಿಕರು ಪುರಸಭೆಗೆ ಎಚ್ಚರಿಸಿದ್ದಾರೆ.