;Resize=(412,232))
ಹನೂರು : ಬೇಟೆಗಾರರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಬೇಟೆಗಾರರು ಬಲಿಯಾಗಿ, ಓರ್ವ ಗಾಯಗೊಂಡ ಘಟನೆ ಆಘಾತಕಾರಿ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕಾವೇರಿ ವನ್ಯಜೀವಿ ಧಾಮದಲ್ಲಿ ಶನಿವಾರ ಬೆಳಗ್ಗೆ ನಡೆದಿದೆ.
ಮೃತರನ್ನು ಹನೂರು ತಾಲೂಕಿನ ತೋಮಿಯರ್ ಪಾಳ್ಯ ಗ್ರಾಮದ ಅಂಥೋನಿ ಸ್ವಾಮಿ, ಪೀಟರ್, ಕುಮಾರ್ ಎಂದು ಗುರುತಿಸಲಾಗಿದೆ. ಇವರ ಜೊತೆಗಿದ್ದ ಮಹಿಮ ದಾಸ್ ಎಂಬ ವ್ಯಕ್ತಿ ಗಾಯಗೊಂಡಿದ್ದಾನೆ. ಚಕಮಕಿಯಲ್ಲಿ ಓರ್ವ ಅರಣ್ಯ ಸಿಬ್ಬಂದಿ ಕೂಡಾ ಗಾಯಗೊಂಡಿದ್ದಾರೆ. ಜಿಂಕೆ ಮಾಂಸ ಬೇಟೆಯಾಡಿ ಬರುತ್ತಿದ್ದವರು ನಡೆಸಿದ ಗುಂಡಿನ ದಾಳಿ ತಡೆಯಲು ಪ್ರತಿದಾಳಿ ವೇಳೆ ಮೂವರು ಸಾವನ್ನಪ್ಪಿದ್ದಾರೆ ಎಂದು ಅರಣ್ಯ ಇಲಾಖೆ ಹೇಳಿದ್ದರೆ, ಮೃತರು ದನ ಹುಡುಕಲು ಹೋಗಿದ್ದಾಗ ಅರಣ್ಯ ಇಲಾಖೆ ಕೊಂದು ಹಾಕಿದೆ ಎಂದು ಮೃತರ ಕುಟುಂಬ ಸದಸ್ಯರು ಗಂಭೀರ ಆರೋಪ ಮಾಡಿದ್ದಾರೆ.
ಈ ನಡುವೆ ಮೂವರ ಸಾವಿನಿಂದ ರೊಚ್ಚಿಗೆದ್ದ ಕುಟುಂಬ ಸದಸ್ಯರು ಅರಣ್ಯ ಇಲಾಖೆಯ 2 ಕಚೇರಿ, ಸಿಬ್ಬಂದಿಯ ಮನೆಗಳನ್ನು ಧ್ವಂಸ ಮಾಡಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಹನೂರು ವ್ಯಾಪ್ತಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಸದ್ಯ ಹನೂರಿನಲ್ಲಿ ಪ್ರಕ್ಷುಬ್ಧ ವಾತಾವರಣ ಮುಂದುವರೆದಿದೆ.
ಈ ನಡುವೆ ಬೇಟೆಗಾರರಿಂದ ಬಂದೂಕು, ಜಿಂಕೆ ಮಾಂಸ ವಶ ಪಡಿಸಿಕೊಳ್ಳಲಾಗಿದೆ ಎಂದು ಅರಣ್ಯ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. ಜೊತೆಗೆ ಘಟನೆ ಕುರಿತು ಮ್ಯಾಜಿಸ್ಟ್ರೇಟ್ ತನಿಖೆಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆದೇಶಿಸಿದ್ದಾರೆ.
ಹನೂರು ಅರಣ್ಯ ವಲಯದ ಶಾಗ್ಯ ವ್ಯಾಪ್ತಿಯ ಹೊಳೆದಟ್ಟಿ ಅರಣ್ಯ ಪ್ರದೇಶದ ಗಸ್ತಿನಲ್ಲಿದ್ದ ಸಿಬ್ಬಂದಿಗೆ ಶನಿವಾರ ನುಸುಕಿನ ಜಾವ ನಾಲ್ವರು ಬೇಟೆಗಾರರು ಜಿಂಕೆಯನ್ನು ಬೇಟೆಯಾಡಿ ಮಾಂಸ ಬೇರ್ಪಡಿಸುತ್ತಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಇದನ್ನು ಆಧರಿಸಿ ಅರಣ್ಯ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೇಟೆಗಾರರನ್ನು ಸೆರೆಹಿಡಿಯಲು ಮುಂದಾಗಿದ್ದಾರೆ. ಈ ವೇಳೆ ಬೇಟೆಗಾರರು ಅರಣ್ಯ ಸಿಬ್ಬಂದಿ ಮೇಲೆ ದಾಳಿ ನಡೆಸಿದ್ದಾರೆ. ಆತ್ಮರಕ್ಷಣೆಗಾಗಿ ಅರಣ್ಯ ಸಿಬ್ಬಂದಿ ಪ್ರತಿದಾಳಿ ನಡೆಸಿದ್ದು, ಈ ವೇಳೆ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮತ್ತೋರ್ವ ತೀವ್ರವಾಗಿ ಗಾಯಗೊಂಡಿದ್ದು, ಆತನನ್ನು ಕೊಳ್ಳೇಗಾಲದ ಉಪವಿಭಾಗ ಆಸ್ಪತ್ರೆಗೆ ಕರೆದೊಯ್ಯುವಾಗಲೇ ಮೃತಪಟ್ಟಿದ್ದಾನೆ. ಗುಂಡಿನ ಚಕಮಕಿಯಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಗಾಯಗೊಂಡಿದ್ದಾರೆ.
ಆದರೆ ಅರಣ್ಯ ಇಲಾಖೆಯ ಕಾರ್ಯಾಚರಣೆಯೇ ನಕಲಿ ಎಂದು ಗ್ರಾಮಸ್ಥರು ದೂರಿದ್ದಾರೆ. ಬೇಟೆಗಾರರು ಎಂದು ಅರಣ್ಯ ಇಲಾಖೆ ಸಿಬ್ಬಂದಿ ಹೇಳುತ್ತಿರುವ ಮೃತ ಮತ್ತು ಗಾಯಗೊಂಡ ವ್ಯಕ್ತಿಗಳು ಮುಗ್ಧರು, ಇವರೆಲ್ಲರೂ ಬೇಟೆಗಾರರಲ್ಲ, ತಮ್ಮ ಜಾನುವಾರುಗಳನ್ನು ಕರೆತರಲು ತೆರಳಿದ್ದರು ಎಂದು ಸ್ಥಳೀಯರು ಹೇಳಿದ್ದಾರೆ.
ಈ ನಡುವೆ ಮೃತರ ಕುಟಂಬಸ್ಥರ ದೂರು ಆಧರಿಸಿ ಹನೂರು ಠಾಣೆಯಲ್ಲಿ ಮೂವರು ಅರಣ್ಯ ಸಿಬ್ಬಂದಿ ಮೇಲೆ ದೂರು ದಾಖಲಾಗಿದೆ. ಆದರೆ ಸಿಬ್ಬಂದಿಯ ಹೆಸರನ್ನು ನಮೂದಿಸಿಲ್ಲ. ಮೃತರ ದೇಹವನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಸಾಗಿಸಲಾಗಿದೆ. ಅಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.
ಮೂವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಹನೂರಿನಲ್ಲಿ ಜನರು ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಶಾಗ್ಯ ಗ್ರಾಮದ ಡಿಆರ್‌ಎಫ್‌ಓ ಕಚೇರಿ, ಶಾಗ್ಯ ಶಾಲೆ ಎದುರಿನ ಅರಣ್ಯ ಸಿಬ್ಬಂದಿ 2 ಮನೆಗಳಲ್ಲಿದ್ದ ಪೀಠೋಪಕರಣಗಳು, ಕಳ್ಳಿ ದೊಡ್ಡಿ ಗ್ರಾಮದ ಬಳಿಯ ಅರಣ್ಯ ಪ್ರದೇಶದಲ್ಲಿನ ನೂತನ ಕಟ್ಟಡದ ಕಿಟಕಿ, ಬಾಗಿಲುಗಳನ್ನು ಧ್ವಂಸಗೊಳಿಸಿದ್ದಾರೆ. ಅಲ್ಲದೇ ಕಳ್ಳಬೇಟೆ ತಡೆ ಶಿಬಿರದ ಒಳನುಗ್ಗಿ ಪೀಠೋಪಕರಣಗಳನ್ನು ಧ್ವಂಸ ಮಾಡಿದ್ದಾರೆ. ಸುಮಾರು ₹60 ಲಕ್ಷಗೂ ಹೆಚ್ಚು ಮೌಲ್ಯದಲ್ಲಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಅಲ್ಲದೆ ರೊಚ್ಚಿಗೆದ್ದ ಜನರು ಹನೂರಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಶಾಗ್ಯದಲ್ಲಿ ಭಾರಿ ಬಂದೋಬಸ್ತ್
ಶಾಗ್ಯ ಅರಣ್ಯ ಕಚೇರಿ ಮೇಲೆ ದಾಳಿಗೆ ಸಂಬಂಧಿಸಿದಂತೆ ವರಿಷ್ಠಾಧಿಕಾರಿ ಮುತ್ತುರಾಜು ಅವರ ಸೂಚನೆ ಮೇರೆಗೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಡಿವೈಎಸ್ಪಿ ಯಶವಂತ್ ಅವರ ಮೇಲುಸ್ತುವಾರಿಯಲ್ಲಿ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಕಳ್ಳಬೇಟೆ ತಡೆ ಶಿಬಿರ ಸೇರಿದಂತೆ ಸೂಕ್ಷ್ಮ ಪ್ರದೇಶಗಳಿಗೆ ಸರ್ಪಗಾವಲು ಮಾಡಲಾಗಿದೆ.
ಎಎಸ್ಪಿ ಭೇಟಿ
ಚಾಮರಾಜನಗರ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಶಿಧರ್ ಅವರು ಶಾಗ್ಯ ಗ್ರಾಮಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ‘ಘಟನೆ ಸಂಬಂಧಿಸಿದಂತೆ ಅಧಿಕಾರಿಗಳಿಂದ ಮಾಹಿತಿ ಪಡೆದು, ಶೂಟೌಟ್ ಪ್ರಕರಣದಲ್ಲಿ ಪೊಲೀಸ್ ಇಲಾಖೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.
ಅರಣ್ಯ ಇಲಾಖೆಯಿಂದ ತಪ್ಪಾಗಿದೆ: ಉಸ್ತುವಾರಿ ಸಚಿವ
‘ಮೂವರ ಎನ್‌ಕೌಂಟರ್ ಪ್ರಕರಣದಲ್ಲಿ ಅರಣ್ಯ ಇಲಾಖೆಯಿಂದ ಬಹಳ ದೊಡ್ಡ ತಪ್ಪಾಗಿದೆ. ಪ್ರಕರಣದ ಬಗ್ಗೆ ಅರಣ್ಯ ಇಲಾಖೆ ನನಗೆ ಸುಳ್ಳು ಮಾಹಿತಿ ಕೊಟ್ಟಿದ್ದಾರೆ. ಒಬ್ಬೊಬ್ಬ ಅಧಿಕಾರಿ ಒಂದೊಂದು ರೀತಿ ನಮಗೆ ಸುಳ್ಳು ಹೇಳುತ್ತಿದ್ದಾರೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಧಾನ ಪರಿಷತ್ ಸದಸ್ಯ ಕೆ.ಶಿವಕುಮಾರ್, ಗುಂಡಿನ ದಾಳಿಯ ಬಗ್ಗೆ ಮೃತರ ಸಂಬಂಧಿಕರಲ್ಲಿ ಅನುಮಾನ ಮೂಡಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ವಲಯ ಅರಣ್ಯಾಧಿಕಾರಿ ಹಾಗೂ ಗಸ್ತು ಸಿಬ್ಬಂದಿಯನ್ನು ವಿಚಾರಣೆ ಕಾಯ್ದಿರಿಸಿ ತಕ್ಷಣವೇ ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಎನ್‌ಕೌಂಟರ್ ಆದ ಮೇಲೆ ಮೈಸೂರಿಗೆ ಶವಗಳನ್ನ ಯಾಕೆ ತಂದರು. ಇದು ಬಹುದೊಡ್ಡ ಅನುಮಾನ ಪ್ರಶ್ನೆ. ಈ ಪ್ರಶ್ನೆಗ ಯಾರಿಂದಲೂ ನಮಗೆ ಸಮರ್ಪಕ ಉತ್ತರ ಸಿಗುತ್ತಿಲ್ಲ ಎಂದು ಚಾಮರಾಜನಗರ ಸಂಸದ ಸುನಿಲ್ ಬೋಸ್ ಹೇಳಿದ್ದಾರೆ.
ಸಿಬ್ಬಂದಿ ಹೇಳಿದ್ದೇನು?
ಕೆಲ ವ್ಯಕ್ತಿಗಳು ಜಿಂಕೆ ಹತ್ಯೆಗೈದು ಮಾಂಸ ಹಂಚಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿತ್ತು
ಪರಿಶೀಲನೆಗೆ ತೆರಳಿದ್ದ ವೇಳೆ ಬೇಟೆಗಾರರು ನಮ್ಮ ಮೇಲೆ ಗುಂಡಿನ ದಾಳಿ ನಡೆಸಿದರು
ನಾವೂ ಆತ್ಮರಕ್ಷಣೆಗೆ ಪ್ರತಿದಾಳಿ ನಡೆಸಿದಾಗ ಇಬ್ಬರು ಸ್ಥಳದಲ್ಲಿ, ಬಳಿಕ ಒಬ್ಬನ ಸಾವಾಯ್ತು
ಅರಣ್ಯದಲ್ಲಿ ಬೇಟೆಗಾರರಿಂದ ಬಂದೂಕು ಮತ್ತು ಜಿಂಕೆ ಮಾಂಸ ವಶಪಡಿಸಿಕೊಳ್ಳಲಾಗಿದೆ
ಕುಟುಂಬಸ್ಥರ ವಾದ?
ಅರಣ್ಯ ಇಲಾಖೆ ಹೇಳಿದಂತೆ ಮೃತರು ಮತ್ತು ಗಾಯಗೊಂಡವರು ಬೇಟೆಗಾರರರಲ್ಲ
ಅವರು ತಮ್ಮ ಜಾನುವಾರು ಹುಡುಕಲು ಅರಣ್ಯ ಹೋಗಿದ್ದಾಗ ದಾಳಿ ನಡೆಸಲಾಗಿದೆ
ನಮ್ಮ ಕುಟುಂಬ ಸದಸ್ಯರು ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಯಾವುದೇ ದಾಳಿ ನಡೆಸಿಲ್ಲ
ಆದರೂ ಅವರ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ನಡೆಸಲಾಗಿದೆ. ಈ ಬಗ್ಗೆ ತನಿಖೆ ಆಗಲಿ
ನ್ಯಾಯಾಂಗ ತನಿಖೆ
ಮೀಸಲು ಅರಣ್ಯಕ್ಕೆ ಬಂದೂಕುದಾರಿಗಳು ಅಕ್ರಮವಾಗಿ ಪ್ರವೇಶಿಸಿದ್ದರು. ಸಿಬ್ಬಂದಿ ಗಸ್ತಿಗೆ ಹೋದಾಗ ಬೇಟೆಗಾರರು ಜಿಂಕೆ ಮಾಂಸ ತೆಗೆದುಕೊಂಡು ಹೋಗುತ್ತಿರುವುದು ಕಂಡು ಬಂದಿದೆ. ಈ ವೇಳೆ ಗುಂಡಿನ ಚಕಮಕಿ ನಡೆದು ಮೂವರು ಮೃತಪಟ್ಟಿದ್ದಾರೆ. ಅವರಿಂದ 4 ಬ್ಯಾಗ್ ಜಿಂಕೆ ಮಾಂಸ ವಶಕ್ಕೆ ಪಡೆಯಲಾಗಿದೆ. ಸಾವಿನ ಕುರಿತು ನ್ಯಾಯಾಂಗ ತನಿಖೆ ನಡೆಸಲಾಗುವುದು.
ರಾಮಲಿಂಗಾರೆಡ್ಡಿ, ಅರಣ್ಯ ಸಚಿವ