ಅಕ್ರಮ ಖಾತೆಯನ್ನು ರದ್ದುಪಡಿಸುವಂತೆ ಒತ್ತಾಯಿಸಿ ಮಲಾರಾಪಾಳ್ಯ ಗ್ರಾಮಸ್ಥರು ಬುಧವಾರ ತಹಸೀಲ್ದಾರ್ ಕಚೇರಿ ಮುಂಭಾಗ ಪ್ರತಿಭಟಿಸಿದರು.
ಕನ್ನಡಪ್ರಭ ವಾರ್ತೆ ಯಳಂದೂರು
ಅಕ್ರಮ ಖಾತೆಯನ್ನು ರದ್ದುಪಡಿಸುವಂತೆ ಒತ್ತಾಯಿಸಿ ಮಲಾರಾಪಾಳ್ಯ ಗ್ರಾಮಸ್ಥರು ಬುಧವಾರ ತಹಸೀಲ್ದಾರ್ ಕಚೇರಿ ಮುಂಭಾಗ ಪ್ರತಿಭಟಿಸಿದರು.ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಿಂದ ರಸ್ತೆ ಮೂಲಕ ಮೆರವಣಿಗೆ ಮೂಲಕ ತಹಸೀಲ್ದಾರ್ ಕಚೇರಿಗೆ ತೆರಳಿದ ಮಲರಾಪಾಳ್ಯ ಗ್ರಾಮಸ್ಥರು ಗ್ರಾಮದ ಕರುವಿನಗುಡ್ಡದ ಬಳಿ ಸರ್ವೇ ನಂ. 97ರಲ್ಲಿ ಒಟ್ಟು 48 ಎಕರೆ ಜಮೀನಿದೆ. ಕೆಲ ಭೂಗಳ್ಳರು ನಕಲಿ ದಾಖಲೆಗಳನ್ನು ಸೃಷ್ಟಸಿ ಬೇರೆಯವರಿಗೆ 2 ಎಕರೆ ಜಮೀನನ್ನು ಮಾರಾಟ ಮಾಡಿದ್ದಾರೆ. ಅಕ್ರಮವಾಗಿ ಲಪಟಾಯಿಸಿರುವ ಜಮೀನಿನ ಖಾತೆಯನ್ನು ರದ್ದುಗೊಳಿಸಿ ಸರ್ಕಾರಿ ಜಮೀನನ್ನು ರಕ್ಷಿಸುವಂತೆ ಒತ್ತಾಯಿಸಿದರು.
ತಾಲೂಕಿನ ಮಲಾರಪಾಳ್ಯ ಗ್ರಾಮದ ಬಳಿ ಇರುವ ಕರುವಿನ ಗುಡ್ಡ ಬಳಿಯ ಸರ್ಕಾರಿ ಜಮೀನನ್ನು ಅಕ್ರಮವಾಗಿ ಖಾತೆ ಮಾಡಿ ಇದನ್ನು ಬೇರೊಬ್ಬ ವ್ಯಕ್ತಿಗೆ ಮಾರಾಟ ಮಾಡಿದ್ದಾನೆ ಈ ಬಗ್ಗೆ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದ್ದರೂ ಕೂಡ ಇವರು ಸರಿಯಾಗಿ ಉತ್ತರ ನೀಡಿಲ್ಲ. ಪ್ರತಿಭಟನೆ ದಿನವೇ ಬೇರೊಂದು ನೆಪವೊಡ್ಡಿ ಕಚೇರಿಗೂ ಬಂದಿಲ್ಲ ಎಂದು ಆರೋಪಿಸಿದರು.ಈ ಸಂದರ್ಭದಲ್ಲಿ ಸಾಮಾಜಿಕ ಹೋರಾಟಗಾರ್ತಿ ಮಧುಮಾಲತಿ ಮಾತನಾಡಿ, ಕರುವಿನ ಗುಡ್ಡದಲ್ಲಿರುವ 48 ಎಕರೆ ಸರ್ಕಾರಿ ಜಮೀನನ್ನು ಕೆಲ ಭೂಗಳ್ಳರ ಕಬಳಿಸಿದ್ದಾರೆ. ಇದನ್ನು ಅಕ್ರಮವಾಗಿ ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡಿ ಖಾತೆ ಮಾಡಿದ್ದಾರೆ. ಸರ್ಕಾರಿ ಜಮೀನನ್ನು ರಕ್ಷಿಸುವ ಕೆಲಸವನ್ನು ಗ್ರಾಮಸ್ಥರು ಮಾಡುತ್ತಿದ್ದೇವೆ. ಒಂದು ತಿಂಗಳ ಹಿಂದೆಯೇ ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಗಿತ್ತು. ಇದಕ್ಕೆ ತಹಶೀಲ್ದಾರ ಸಮಂಜಸ ಉತ್ತರ ನೀಡಿಲ್ಲ. ಹಾಗಾಗಿ ನಾವು ಪ್ರತಿಭಟನೆ ಮಾಡುತ್ತಿದ್ದೇವೆ. ಆದರೆ ತಹಶೀಲ್ದಾರ್ ಬೇರೆ ಸಬೂಬು ಹೇಳಿ ಕಚೇರಿಗೆ ಬಂದಿಲ್ಲ. ಗ್ರೇಡ್-02 ತಹಶೀಲ್ದಾರ್ ವೈಯುಕ್ತಿಕ ರಜೆ ಹಾಕಿದ್ದಾರೆ. ಇಲ್ಲಿ ಚುನಾವಣಾ ಶಿರಸ್ತೇದಾರರು ಮನವಿ ಸ್ವೀಕರಿಸಲು ಬಂದಿದ್ದಾರೆ. ಇವರಿಗೂ ಇದಕ್ಕೂ ಸಂಬಂಧವೇ ಇಲ್ಲ ಎಂದು ದಿಕ್ಕಾರ ಕೂಗಿದರು.
ಕರುವಿನ ಗುಡ್ಡದಲ್ಲಿರುವ ಎಲ್ಲಾ ಜಮೀನು ಸರ್ಕಾರಿ ಜಮೀನಾಗಿದೆ. ಅಕ್ರಮವಾಗಿ ಇದನ್ನು ಖಾತೆ ಮಾಡಿ, ಮಾರಾಟ ಮಾಡಲಾಗಿದೆ. ಇದರಲ್ಲಿ ದೊಡ್ಡ ಮಟ್ಟದ ಷಡ್ಯಂತ್ರ ನಡೆದಿದೆ. ಇದರ ವಿರುದ್ಧ ಕ್ರಮ ವಹಿಸಬೇಕು. ಕೂಡಲೇ ಇದನ್ನು ಖಾತೆ ಮಾಡಿದವರು, ಮಾರಾಟ ಮಾಡಿದವರು, ಸಹಕರಿಸಿದರಿಗೆ ಕಾನೂನು ಕ್ರಮ ಜರುಗಿಸಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು. ಸ್ಥಳಕ್ಕೆ ಉಪ ವಿಭಾಗಾಧಿಕಾರಿಗಳು ಭೇಟಿ ನೀಡಬೇಕು ಎಂದು ಪಟ್ಟು ಹಿಡಿದರು.ಸಂಜೆ ವೇಳೆಗೆ ಉಪವಿಭಾಗಾಧಿಕಾರಿ ದಿನೇಶ್‌ಕುಮಾರ್ ಮೀನಾ ಭೇಟಿ ನೀಡಿ ಈ ಸಂಬಂಧ ನಾನು ಆದಷ್ಟು ಬೇಗ ಪರಿಶೀಲನೆ ನಡೆಸಿ, ಸಂಬಂಧಪಟ್ಟ ಇಲಾಖೆಗಳಿಂದ ಮಾಹಿತಿಯನ್ನು ಪಡೆದುಕೊಂಡು 20 ದಿನದೊಳಗೆ ಕ್ರಮ ವಹಿಸಲಾಗುವುದು. ಇದರಲ್ಲಿ ತಪ್ಪಾಗಿದ್ದಲ್ಲಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ವಹಿಸುವ ಭರವಸೆಯನ್ನು ನೀಡದ ಮೇಲೆ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.
ಗ್ರಾಮದ ಪಂಜು, ನಾಡಗೌಡರಾದ ಶಿವರುದ್ರಪ್ಪ, ಪುಟ್ಟಪ್ಪ, ಮದನ್‌ಗೋಪಾಲ್, ಮಹೇಶ್, ಮಾದೇಗೌಡ, ಮಲ್ಲೇಶ್, ನಾಗೇಂದ್ರಪ್ಪ, ಉಮಾಪತಿ ಅನೇಕರು ಇದ್ದರು.