ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ (ಎಸ್‌ಐಆರ್‌) ಬಿಜೆಪಿ ಬಡವರು, ಅಲ್ಪಸಂಖ್ಯಾತರ ಮತಗಳನ್ನು ತೆಗೆದು ಹಾಕುವ ಮೂಲಕ ಅರ್ಹ ಮತದಾರರನ್ನು ಅನ್ಯಾಯ ಮಾಡುತ್ತಿದೆ. ಕೇಂದ್ರ ಬಿಜೆಪಿ ಸರ್ಕಾರ ಅಣತಿಯಿಂದ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್ ನಡೆದುಕೊಳ್ಳುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ದೂರಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ (ಎಸ್‌ಐಆರ್‌) ಬಿಜೆಪಿ ಬಡವರು, ಅಲ್ಪಸಂಖ್ಯಾತರ ಮತಗಳನ್ನು ತೆಗೆದು ಹಾಕುವ ಮೂಲಕ ಅರ್ಹ ಮತದಾರರನ್ನು ಅನ್ಯಾಯ ಮಾಡುತ್ತಿದೆ. ಕೇಂದ್ರ ಬಿಜೆಪಿ ಸರ್ಕಾರ ಅಣತಿಯಿಂದ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್ ನಡೆದುಕೊಳ್ಳುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ದೂರಿದರು.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮತದಾರರ ವಿಶೇಷ ಪರಿಷ್ಕರಣೆಯಲ್ಲಿ ಮುಸ್ಲಿಂ, ಹಿಂದುಳಿದ ಜನಾಂಗಗಳ ಮತದಾರರನ್ನೇ ಟಾರ್ಗೆಟ್ ಮಾಡಿಕೊಂಡು ಡಿಲೀಟ್ ಮಾಡಲಾಗುತ್ತಿದೆ. ಈ ಬಗ್ಗೆ ಅನೇಕ ಬಾರಿ ನಾವು ಸಹ ದೂರು ನೀಡಿದ್ದೇನೆ. ಈಗ ನಾನಾ ಕಾರಣಗಳನ್ನು ನೀಡಿ ರದ್ದುಪಡಿಸಿರುವ 88276 ಮತಗಳನ್ನು ಸಹ ಪುನರ್ ಪರಿಶೀಲನೆ ಮಾಡಬೇಕು. ಅರ್ಹರನ್ನು ಕೈಬಿಟ್ಟಿದ್ದರೆ ಕೂಡಲೇ ಸೇರ್ಪಡೆ ಮಾಡಬೇಕು ಎಂದು ಒತ್ತಾಯಿಸಿದರು.

ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಫಾರಂ 7ರಂತೆ 796 ಮತಗಳನ್ನು ತೆಗೆದು ಹಾಕಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ವರದಿ ನೀಡಿದ್ದಾರೆ. ಈ ಮತಗಳನ್ನು ರದ್ದು ಪಡಿಸುವಂತೆ ಯಾರು ಅರ್ಜಿ ಸಲ್ಲಿದ್ದರೆ ಎಂಬುವುದ ಸಂಪೂರ್ಣ ಮಾಹಿತಿ ನಮಗೆ ಬೇಕು. ಈ ಮತಗಳನ್ನು ರದ್ದುಪಡಿಸುವ ಮುನ್ನಾ ಸೂಕ್ತ ತನಿಖೆಯಾಗಬೇಕು. ಸುಳ್ಳು ದೂರು ನೀಡಿದ್ದವರ ಮೇಲೆ ಪ್ರಕರಣ ದಾಖಲು ಮಾಡಬೇಕು ಎಂದು ಆಗ್ರಹಿಸಿದರು.

ಚಾಮರಾಜನಗರ ತಾಲೂಕಿನ ಸರಗೂರುಮೋಳೆ ಗ್ರಾಮದಲ್ಲಿ ಬದುಕಿರುವ 40 ಜನರನ್ನು ಸತ್ತಿದ್ದಾರೆ ಎಂದು ಪಟ್ಟಿಯಿಂದ ತೆಗೆದು ಹಾಕಲಾಗಿತ್ತು. ನಾವು ವಿಷಯ ತಿಳಿದು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ತಕ್ಷಣ ಅವರು ಬದುಕಿರುವ ದಾಖಲಾತಿಗಳನ್ನು ನೀಡಿ, ಪಟ್ಟಿಯಲ್ಲಿ ಉಳಿಯುವಂತೆ ಮಾಡಿದ್ದೇವೆ. ಚಾಮರಾಜನಗರ ಜಿಲ್ಲೆಯ ವ್ಯಾಪ್ತಿಯ ಹನೂರು ವಿಧಾನಸಭಾ ಕ್ಷೇತ್ರದಲ್ಲಿ 21,946, ಕೊಳ್ಳೇಗಾಲದಲ್ಲಿ 25,064, ಚಾಮರಾಜನಗರ 23,122, ಗುಂಡ್ಲುಪೇಟೆ 18,143 ಮತದಾರರು ಸೇರಿ ಒಟ್ಟು 88,275 ಮತದಾರರನ್ನು ಮರಣ, ಸ್ಥಳಾಂತರ ಹಾಗೂ ಇತರೆ ಕಾರಣಗಳನ್ನು ನೀಡಿ, ರದ್ದುಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ರಾಜ್ಯದಲ್ಲಿ 50ರಿಂದ 60 ಲಕ್ಷ ಮತದಾರರನ್ನು ಬಿಜೆಪಿ ವಾಮಮಾರ್ಗದಲ್ಲಿ ಡಿಲೀಟ್ ಮಾಡಲಾಗಿದೆ. ಇದರಿಂದಾಗಿ ಅಮಾಯಕ ಮತದಾರರು ಮತ ಹಾಕುವ ಅರ್ಹತೆಯನ್ನು ಕಳೆದುಕೊಂಡಿದ್ದಾರೆ. ಈ ಸಂಬಂಧ ರಾಹುಲ್ ಗಾಂಧಿ ಅವರು ದೆಹಲಿಯಲ್ಲಿ ಹೋರಾಟ ಮಾಡುತ್ತಿದ್ದಾರೆ. ಕೂಡಲೇ ಎಸ್‌ಐಆರ್ ಅನ್ನು ರದ್ದುಪಡಿಸಬೇಕು. ಜತೆಗೆ ಇದಕ್ಕೆ ಕಾರಣರಾದವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಕೊಳ್ಳೇಗಾಲ ಕ್ಷೇತ್ರದ ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ಅರ್ಹ ಮತದಾರರನ್ನು ಡಿಲೀಟ್ ಮಾಡಿರುವುದರಿಂದ ಮುಂದಿನ ಚುನಾವಣೆಗಳಲ್ಲಿ ಸ್ಪರ್ಧಿಸಲು ಅವಕಾಶ ಇರುವುದಿಲ್ಲ. ಫಾರಂ ನಂ 7 ಮೂಲಕ ಮತದಾರರನ್ನು ಡಿಲೀಟ್ ಮಾಡುವಂತೆ ಸುಳ್ಳು ದೂರು ನೀಡಿರುವವರ ವಿರುದ್ಧ ಚುನಾವಣಾ ಆಯೋಗ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜೆ. ಯೋಗೇಶ್, ಜಿಲ್ಲಾ ಗ್ಯಾರಂಟಿ ಅಧ್ಯಕ್ಷ ಹೊಂಗನೂರು ಚಂದ್ರು, ಚುಡಾ ಅಧ್ಯಕ್ಷ ಮಹಮ್ಮದ್ ಆಸ್ಗರ್, ಕಾಂಗ್ರೆಸ್ ಮಾಧ್ಯಮ ವಕ್ತಾರ ಗೌಡಹಳ್ಳಿ ರಾಜೇಶ್, ಗ್ರಾಮಾಂತರ ಮಹಿಳಾ ಬ್ಲಾಕ್ ಅಧ್ಯಕ್ಷೆ ಶಂಕುತಲಾ ಇದ್ದರು.