ಕನ್ನಡಪ್ರಭ ವಾರ್ತೆ ಬೆಂಗಳೂರು
ದಕ್ಷಿಣ ಕನ್ನಡ ಜಿಲ್ಲೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಚಂಪಾ ಷಷ್ಠಿಯಂದು ಬ್ರಹ್ಮರಥೋತ್ಸವದ ಅಂಗವಾಗಿ 231 ಭಕ್ತಾದಿಗಳು ಅಂಗಣದಲ್ಲಿ ಎಡೆ ಸ್ನಾನ ಸೇವೆ ಸಲ್ಲಿಸಿದರು. ಮಧ್ಯಾಹ್ನ ದೇವರಿಗೆ ಅರ್ಪಿಸಿದ ನೈವೇದ್ಯವನ್ನು ದೇವಳದ ಅಂಗಣದ ಸುತ್ತಲು ಹಾಕಿದ ಬಾಳೆ ಎಲೆಯಲ್ಲಿ ಬಡಿಸಿ, ಅದನ್ನು ಗೋವುಗಳಿಂದ ತಿನ್ನಿಸಿ, ಹರಕೆ ಹೊತ್ತ ಭಕ್ತಾದಿಗಳು ಅಂಗಣದ ಸುತ್ತಲೂ ಆ ಎಂಜಲೆಲೆಯ ಮೇಲೆ ಉರುಳು ಸೇವೆ ಸಲ್ಲಿಸಿದರು.
ಇದಕ್ಕೂ ಮೊದಲು ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಪ್ರಧಾನ ಅಂಗವಾಗಿ ಬ್ರಹ್ಮರಥೋತ್ಸವ ನೆರವೇರಿತು. ಭಕ್ತರ ಜಯಘೋಷದೊಂದಿಗೆ ಬೆಳಗ್ಗೆ 7.29ರ ವೃಶ್ಚಿಕ ಲಗ್ನ ಸುಮುಹೂರ್ತದಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವರು ಬ್ರಹ್ಮರಥಾರೂಢರಾದರು. ಬಳಿಕ, ಸಹಸ್ರಾರು ಭಕ್ತರ ಜಯಘೋಷದ ನಡುವೆ ದೇವರ ಬ್ರಹ್ಮರಥೋತ್ಸವ ಸುಸಂಪನ್ನವಾಯಿತು. ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಉಪಸ್ಥಿತರಿದ್ದು, ಮಹಾರಥಕ್ಕೆ ತೆಂಗಿನ ಕಾಯಿ ಸಮರ್ಪಣೆ ಮಾಡಿ, ಮಂಗಳಾರತಿ ಸ್ವೀಕರಿಸಿದರು.ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಸುಪ್ರಸಿದ್ಧ ಯಾತ್ರಾ ಸ್ಥಳವಾದ ಘಾಟಿ ಸುಬ್ರಹ್ಮಣ್ಯದಲ್ಲಿ ಬುಧವಾರ ಚಂಪಾ ಷಷ್ಠಿಯ ಅಂಗವಾಗಿ ಸುಬ್ರಹ್ಮಣ್ಯಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ನಾಗಾರಾಧನೆಗೆ ಪ್ರಸಿದ್ಧವಾಗಿರುವ ಘಾಟಿ ಕ್ಷೇತ್ರದಲ್ಲಿ ಭಕ್ತರು ನಾಗರಕಲ್ಲುಗಳಿಗೆ ಪೂಜೆ ಸಲ್ಲಿಸಿದರು.
ಇದೇ ವೇಳೆ, ಹಾಸನ ಜಿಲ್ಲೆ ರಾಮನಾಥಪುರದಲ್ಲಿ ಪ್ರಸನ್ನ ಶ್ರೀ ಸುಬ್ರಮಣ್ಯಸ್ವಾಮಿಯ ಸೃಷ್ಟಿ ಮಹಾರಥೋತ್ಸವ ನಡೆಯಿತು. 40 ಅಡಿ ಎತ್ತರದ ರಥದಲ್ಲಿ ಉತ್ಸವ ಮೂರ್ತಿಯನ್ನು ಕುಳ್ಳಿರಿಸಿ, ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ಸುತ್ತಮುತ್ತಲ ಗ್ರಾಮಗಳ ನೂರಾರು ನವ ವಧುವರರು ಸುಬ್ರಹ್ಮಣ್ಯಸ್ವಾಮಿ ರಥಕ್ಕೆ ಪೂಜೆ ಸಲ್ಲಿಸಿ, ಬಾಳೆಹಣ್ಣು ಮತ್ತು ದವನವನ್ನು ರಥದ ಮೇಲೆ ಸಮರ್ಪಿಸಿದರು. ರಥ ಎಳೆಯುವ ವೇಳೆ ನಾಲ್ಕಾರು ಗರುಡ ಪಕ್ಷಿಗಳು ರಥದ ಮೇಲೆ ಆಗಸದಲ್ಲಿ ಹಾಗೂ ದೇವಾಲಯದ ಮೇಲೆ ಪ್ರದಕ್ಷಿಣೆ ಹಾಕಿದವು.ಇದೇ ವೇಳೆ, ರಾಜ್ಯಾದ್ಯಂತದ ನಾಗಾರಾಧನೆಯ ಕ್ಷೇತ್ರಗಳಲ್ಲಿ ಚಂಪಾಷಷ್ಠಿಯ ಅಂಗವಾಗಿ ವಿಶೇಷ ಪೂಜೆಗಳು ನಡೆದವು.