ಚಾಮರಾಜನಗರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ (ಚಾಮುಲ್)ದ ಅಧ್ಯಕ್ಷ ವೈ.ಸಿ.ನಾಗೇಂದ್ರ ವಿರುದ್ಧ ಅವಿಶ್ವಾಸಕ್ಕೆ ಜಯ ಸಿಕ್ಕುವ ಮೂಲಕ ಚಾಮುಲ್ ಅಧ್ಯಕ್ಷ ಪದಚ್ಯುತಿಗೊಂಡಿದ್ದಾರೆ.
ಚಾಮುಲ್‌ನ 2ನೇ ಅವಧಿಯಲ್ಲಿ ಬಿಜೆಪಿ ಬೆಂಬಲಿತರಾಗಿ ವೈ.ಸಿ.ನಾಗೇಂದ್ರ ಅಧ್ಯಕ್ಷರಾಗುವ ಮೂಲಕ ಚಾಮುಲ್‌ನಲ್ಲಿ ಕಮಲ ಪತಾಕೆ ಹಾರಿಸಿದ್ದರು. ಚಾಮುಲ್‌ನಲ್ಲಿ ಬಿಜೆಪಿ ಅಧಿಕಾರ ಪಡೆದರೂ ಅಧಿಕಾರ ಉಳಿಸಿಕೊಳ್ಳಲು ಆಗದೆ ಬಿಜೆಪಿಗೆ ತೀವ್ರ ಹಿನ್ನಡೆಯಾಗಿದೆ. ಕಾಂಗ್ರೆಸ್ ಮತ್ತೆ ಚಾಮುಲ್‌ನಲ್ಲಿ ಅಧಿಕಾರದ ಕನಸು ಕಂಡಿದೆ.
ಬಿಜೆಪಿ ಬೆಂಬಲಿತ ಚಾಮುಲ್ ಅಧ್ಯಕ್ಷ ವೈ.ಸಿ.ನಾಗೇಂದ್ರರನ್ನು ಅಧಿಕಾರದಿಂದ ಕೆಳಗಿಸಲು ಕಾಂಗ್ರೆಸ್, ಬಂಡಾಯ ಬಿಜೆಪಿ, ಜೆಡಿಎಸ್ ಬೆಂಬಲಿತ ನಿರ್ದೇಶಕರು ನಡೆಸಿದ ತಂತ್ರ ಫಲಿಸಿದೆ. ಚಾಮುಲ್ ಅಧ್ಯಕ್ಷ ವೈ.ಸಿ.ನಾಗೇಂದ್ರರ ವಿರುದ್ಧ ಚುನಾಯಿತ ಕಾಂಗ್ರೆಸ್ ಬೆಂಬಲಿತ ನಿರ್ದೇಶಕರಾದ ಎಚ್.ಎಸ್.ನಂಜುಂಡಪ್ರಸಾದ್, ನಂಜುಂಡಸ್ವಾಮಿ, ಶೀಲಾ ಪುಟ್ಟರಂಗಶೆಟ್ಟಿ, ತಾರೀಕ್ ಅಹಮದ್,ಬಂಡಾಯ ಬಿಜೆಪಿ ಬೆಂಬಲಿತ ನಿರ್ದೇಶಕರಾದ ಎಂ.ಪಿ.ಸುನೀಲ್, ಸದಾಶಿವಮೂರ್ತಿ, ಜೆಡಿಎಸ್ ಬೆಂಬಲಿತ ನಿರ್ದೇಶಕ ಉದ್ದನೂರು ಪ್ರಸಾದ್ ಮಂದಿ ಅವಿಶ್ವಾಸಕ್ಕೆ ಕೋರಿ ಸಹಕಾರ ಇಲಾಖೆಯ ಜಂಟಿ ನಿರ್ದೇಶಕರಿಗೆ ಅರ್ಜಿ ಸಲ್ಲಿಸಿದ್ದರು.
ಸೋಮವಾರ ಚಾಮರಾಜನಗರ ತಾಲೂಕಿನ ಕುದೇರು ಚಾಮುಲ್ ಕಚೇರಿಯಲ್ಲಿ ಸಹಕಾರ ಇಲಾಖೆಯ ಉಪ ನಿಬಂಧಕಿ ಶೋಭ ಅವಿಶ್ವಾಸ ಗೊತ್ತುವಳಿ ಸಭೆ ಕರೆದಿದ್ದರು. ಸಭೆಗೆ ಚಾಮುಲ್ ಅಧ್ಯಕ್ಷ ವೈ.ಸಿ.ನಾಗೇಂದ್ರ, ನಿರ್ದೇಶಕ ಬಸವರಾಜಪ್ಪ ಅವಿಶ್ವಾಸ ಗೊತ್ತುವಳಿ ಸಭೆಗೆ ಗೈರಾದರೆ, ಚುನಾಯಿತ ಚಾಮುಲ್ ನಿರ್ದೇಶಕರಾದ ಎಚ್.ಎಸ್.ನಂಜುಂಡಪ್ರಸಾದ್, ನಂಜುಂಡಸ್ವಾಮಿ, ಶೀಲಾ ಪುಟ್ರರಂಗಶೆಟ್ಟಿ, ತಾರೀಕ್ ಅಹಮದ್, ಎಂ.ಪಿ.ಸುನೀಲ್, ಸದಾಶಿವಮೂರ್ತಿ, ಉದ್ದನೂರು ಪ್ರಸಾದ್ ಸಭೆಗೆ ಹಾಜರಾಗಿದ್ದರು.
ಅವಿಶ್ವಾಸ ಗೊತ್ತುವಳಿ ಚುನಾಯಿತ 7 ಮಂದಿ ನಿರ್ದೇಶಕರು ಸಭೆಗೆ ಹಾಜರಾದ ಹಿನ್ನೆಲೆ ಅವಿಶ್ವಾಸಕ್ಕೆ ಜಯವಾಗಿದೆ ಎಂದು ಶೋಭ ಘೋಷಿಸಿದರು. ಅವಿಶ್ವಾಸಕ್ಕೆ ಜಯ ಸಿಗುತ್ತಿದ್ದಂತಯೇ ಚುನಾಯಿತ ಚಾಮುಲ್ ನಿರ್ದೇಶಕರಾದ ಎಚ್.ಎಸ್.ನಂಜುಂಡಪ್ರಸಾದ್, ನಂಜುಂಡಸ್ವಾಮಿ, ಶೀಲಾ ಪುಟ್ರರಂಗಶೆಟ್ಟಿ, ತಾರೀಕ್ ಅಹಮದ್, ಎಂ.ಪಿ.ಸುನೀಲ್, ಸದಾಶಿವಮೂರ್ತಿ, ಉದ್ದನೂರು ಪ್ರಸಾದ್ ವಿಕ್ಟರಿ ತೋರಿಸಿ ಗೆಲುವಿನ ನಗೆ ಬೀರಿದರು.ಚಾಮುಲ್ ನೂತನ ಅಧ್ಯಕ್ಷ ಗಾದಿಗೆ
ಮುಂಚೂಣಿಯಲ್ಲಿ ನಂಜುಂಡಸ್ವಾಮಿ
ಚಾಮರಾಜನಗರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ಅಧ್ಯಕ್ಷ ವೈ.ಸಿ.ನಾಗೇಂದ್ರ ಪದಚ್ಯುತಿಗೊಂಡ ಹಿನ್ನೆಲೆಯಲ್ಲಿ ಚಾಮುಲ್ ಅಧ್ಯಕ್ಷ ಸ್ಥಾನಕ್ಕೆ ನಂಜುಂಡಸ್ವಾಮಿ ಹೆಸರು ಮುಂಚೂಣಿಯಲ್ಲಿ ಕೇಳಿ ಬಂದಿದೆ.ಚಾಮುಲ್ ಅಧ್ಯಕ್ಷರಾಗಿ ಎಚ್.ಎಸ್.ನಂಜುಂಡಪ್ರಸಾದ್ ಒಂದು ಅವಧಿ ಅಧ್ಯಕ್ಷರಾಗಿದ್ದಾರೆ. ಕೊಳ್ಳೇಗಾಲದ ನಂಜುಂಡಸ್ವಾಮಿ ಮೊದಲ ಅವಧಿಯಲ್ಲಿಯೇ ಅಧ್ಯಕ್ಷಗಾದಿಗೆ ಕಣ್ಣಿಟ್ಟಿದ್ದರು. ಆದರೆ ಅವಕಾಶ ಕೈ ಹಿಡಿದಿರಲಿಲ್ಲ. ಈಗ ಅಧ್ಯಕ್ಷರಾಗಲು ನಂಜುಂಡಸ್ವಾಮಿ ಹೆಸರು ಮಂಚೂಣಿಯಲ್ಲಿದೆ. ಚಾಮರಾಜನಗರ ಶಾಸಕ ಸಿ.ಪುಟ್ಟರಂಗಶೆಟ್ಟರ ಪುತ್ರಿ ಶೀಲಾ ಪುಟ್ಟರಂಗಶೆಟ್ಟರ ಹೆಸರು ಅಧ್ಯಕ್ಷ ಸ್ಥಾನಕ್ಕೆ ಕೇಳಿ ಬರುತ್ತಿದೆ. ಚಾಮುಲ್ ಮಾಜಿ ಅಧ್ಯಕ್ಷ ಎಚ್.ಎಸ್.ನಂಜುಂಡಪ್ರಸಾದ್ ಅಧ್ಯಕ್ಷ ಸ್ಥಾನಕ್ಕೆ ಹೆಸರು ಕೇಳಿ ಬಂದಿಲ್ಲ. ಆದರೂ ಕಾದು ನೋಡುವ ತಂತ್ರ ಅನುಸರಿಸುತ್ತಿದ್ದಾರೆ ಎನ್ನಲಾಗಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.