ಕನ್ನಡಪ್ರಭ ವಾರ್ತೆ ಯಳಂದೂರು
ಮುಂಜಾನೆಯಿಂದಲೇ ಹುಣ್ಣಿಮೆ ಪ್ರಯುಕ್ತ ವಿಶೇಷ ಪುಷ್ಪ, ಹಸಿರು ಚಪ್ಪರ, ಚಾಮರಗಳಿಂದ ದೇಗುಲ ಹಾಗೂ ದೇವರ ವಿಗ್ರಹ ಮೂರ್ತಿಗಳಿಗೆ ಅಲಂಕಾರ ಮಾಡಲಾಗಿತ್ತು, ದೇಗುಲದ ಸುತ್ತಲೂ ಬಣ್ಣದ ರಂಗೋಲಿ ಇಟ್ಟು, ಧೂಪ ದೀಪ, ಹೂ ಮತ್ತು ತಳಿರು ತೋರಣಗಳನ್ನು ಸಿಂಗರಿಸಿ ರಥೋತ್ಸವ ಸಿದ್ಧಪಡಿಸಲಾಗಿತ್ತು. ಸಾವಿರಾರು ಭಕ್ತರ ಸಮ್ಮುಖದಲ್ಲಿ ದೇವಸ್ಥಾನದ ಸುತ್ತಲೂ ರಥವನ್ನು ಎಳೆಯುವ ಮೂಲಕ ಜಾತ್ರೋತ್ಸವವು ಸಂಭ್ರಮದಿಂದ ನೆರವೇರಿತು. ನಂತರ ಮಹಾಮಂಗಳಾರತಿ ಮಾಡಲಾಯಿತು. ದೇವರಿಗೆ ನೆರೆದಿದ್ದ ಭಕ್ತರು, ಹಣ್ಣುಕಾಯಿ, ಹೂವುಗಳನ್ನು ಸಮರ್ಪಿಸಿ ಭಕ್ತಿ ಮೆರೆದರು. ಗ್ರಾಮಸ್ಥರು ಮತ್ತು ದೇವಸ್ಥಾನದ ಸಮಿತಿ ಸದಸ್ಯರು ಇಲ್ಲಿಗೆ ಬಂದಿದ್ದ ಭಕ್ತರಿಗೆ ಅನ್ನಸಂತರ್ಪಣೆಯನ್ನು ಮಾಡುವ ಮೂಲಕ ಭಕ್ತಿ ಮೆರೆದರು. ನೂರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನವನ್ನು ಪಡೆದರು.