ಹರಕೆ ಹೊತ್ತಿದ್ದರು ಗೆಳತಿ - ಚಾಮುಂಡೇಶ್ವರಿಯೇ ಕರೆಸಿಕೊಳ್ಳುತ್ತಿದ್ದಾಳೆ : ಬಾನು

KannadaprabhaNewsNetwork |  
Published : Aug 27, 2025, 01:00 AM ISTUpdated : Aug 27, 2025, 05:02 AM IST
Banu Mushtaq

ಸಾರಾಂಶ

‘ದಸರಾ ಉದ್ಘಾಟನೆಗೆ ನನ್ನನ್ನು ಆಹ್ವಾನಿಸಿರುವುದಕ್ಕೆ ಸರ್ಕಾರಕ್ಕೆ ಧನ್ಯವಾದಗಳು. ಈ ಬಗ್ಗೆ ಹುಟ್ಟಿಕೊಂಡಿರುವ ಟೀಕೆಗಳನ್ನೆಲ್ಲಾ ನಾನು ಪರಿಗಣಿಸುವುದಿಲ್ಲ’ ಎಂದು ಬುಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ತಿಳಿಸಿದ್ದಾರೆ.

 ಹಾಸನ :   ‘ದಸರಾ ಉದ್ಘಾಟನೆಗೆ ನನ್ನನ್ನು ಆಹ್ವಾನಿಸಿರುವುದಕ್ಕೆ ಸರ್ಕಾರಕ್ಕೆ ಧನ್ಯವಾದಗಳು. ಈ ಬಗ್ಗೆ ಹುಟ್ಟಿಕೊಂಡಿರುವ ಟೀಕೆಗಳನ್ನೆಲ್ಲಾ ನಾನು ಪರಿಗಣಿಸುವುದಿಲ್ಲ’ ಎಂದು ಬುಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ತಿಳಿಸಿದ್ದಾರೆ.

ನಗರದಲ್ಲಿ ಈ ಕುರಿತು ಪ್ರತಿಕ್ರಿಯೆ ನೀಡಿ, ಬೂಕರ್ ಬಂದ ನಂತರ ಅನೇಕ ಸಾಮಾಜಿಕ ಸ್ಥಿತ್ಯಂತರ ನೋಡಿದ್ದೇನೆ. ಬುಕರ್ ಬಗ್ಗೆ ಕನ್ನಡಿಗರು ಅಪಾರ ಸಂತಸಪಡುತ್ತಿದ್ದಾರೆ. ಅವರಿಗೇ ಪ್ರಶಸ್ತಿ ಬಂದಂತೆ ಸಂಭ್ರಮಿಸಿದ್ದಾರೆ. ನನಗೆ ಬುಕರ್ ತಾನಾಗಿಯೇ ಒಲಿದು ಬಂದ ಪ್ರಶಸ್ತಿ. ಅದರ ನಂತರ ಕರ್ನಾಟಕ ಸರ್ಕಾರ ಹಾಗೂ ಜನರಿಂದ ಹಲವು ಗೌರವಗಳು ಸಿಕ್ಕಿವೆ ಎಂದರು.

ದಸರಾ ಉದ್ಘಾಟನೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಣೆ ಮಾಡಿದಾಗ ನಾನು ವಿದೇಶದಲ್ಲಿ ಇದ್ದೆ. ಸ್ನೇಹಿತರಿಂದ ವಿಚಾರ ತಿಳಿದಾಗ ಅಪಾರ ಸಂತೋಷವಾಯಿತು ಎಂದರು.

ನನ್ನ ಗೆಳತಿ, ಲೇಖಕಿ ಮೈಸೂರಿನ ಮೀನಾ ಮೈಸೂರು ಅವರು ನನಗೆ ಬೂಕರ್ ಅವಾರ್ಡ್ ಬರಲಿ ಎಂದು ಚಾಮುಂಡೇಶ್ವರಿಗೆ ಹರಕೆ ಹೊತ್ತಿದ್ದರಂತೆ. ಬುಕರ್ ಪ್ರಶಸ್ತಿ ಬಂದ ಬಳಿಕ ನನಗೆ ಮೈಸೂರಿಗೆ ಹೋಗುವ ಅವಕಾಶ ಸಿಕ್ಕಿರಲಿಲ್ಲ. ಆದರೆ, ಮೈಸೂರು ಲಿಡ್ ಫೆಸ್ಟಿವಲ್ ಸಂದರ್ಭದಲ್ಲಿ ಮೈಸೂರಿಗೆ ಹೋಗಿದ್ದೆ. ಆಗ ಅಲ್ಲಿ ಸಿಕ್ಕಿದ್ದ ಗೆಳತಿ ಈಗ ಚಾಮುಂಡಿ ಬೆಟ್ಟಕ್ಕೆ ಹೋಗಿ ಹರಕೆ ತೀರಿಸೋಣ ಎಂದಿದ್ದರು. ಆಗಲೂ ಸಮಯದ ಕೊರತೆಯಿಂದ ಹೋಗಲು ಆಗಿರಲಿಲ್ಲ. ಆದರೆ, ಈಗ ಚಾಮುಂಡೇಶ್ವರಿ ತಾಯಿಯೇ ನನ್ನನ್ನು ಕರೆಸಿಕೊಳ್ಳುತ್ತಿದ್ದಾಳೆ ಎಂದು ತಿಳಿಸಿದರು.

ದಸರಾ ಉದ್ಘಾಟನೆಗೆ ತಮ್ಮ ಹೆಸರು ಘೋಷಣೆಯಾದ ನಂತರ ವ್ಯಕ್ತವಾದ ವಿರೋಧಕ್ಕೆ ಪ್ರತಿಕ್ರಿಯಿಸಿ, ಈ ವಿಷಯದಲ್ಲಿ ನಾನು ಹೆಚ್ಚಿಗೆ ಮಾತಾಡುವುದಿಲ್ಲ. ಕೋಟ್ಯಂತರ ಕನ್ನಡಿಗರು ತೋರಿಸುತ್ತಿರುವ ಪ್ರೀತಿ, ಅಭಿಮಾನವೇ ಸಾಕು. ಒಬ್ಬರಿಬ್ಬರ ನೆಗೆಟಿವಿಟಿಗೆ ಪ್ರತಿಕ್ರಿಯೆ ಕೊಡಬೇಕಾದ ಅಗತ್ಯವಿಲ್ಲ. ರಾಜಕೀಯ ಮಾಡಬೇಕಾದ ವಿಷಯಕ್ಕೂ, ಮಾಡಬಾರದ ವಿಷಯಕ್ಕೂ ರಾಜಕಾರಣಿಗಳು ಜವಾಬ್ದಾರರಾಗಿರಬೇಕು ಎಂದು ಚಾಟಿ ಬೀಸಿದರು.

ಸಾಧನೆ ಕುರಿತು ಮಾತನಾಡಿ, ‘ಬುಕರ್ ಪ್ರಶಸ್ತಿ ಸುಲಭವಾಗಿ ಸಿಗುವುದಿಲ್ಲ. ಅದನ್ನು ಅಗ್ಗವಾಗಿ ನೋಡಬೇಡಿ. ಕನ್ನಡವನ್ನು ನಾನು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಪರಿಚಯಿಸಿದ್ದೇನೆ. ಅಲ್ಲಿ ಜನರು ಕನ್ನಡದ ಒಂದೊಂದು ಪುಟ ಓದಿ ಆಶ್ಚರ್ಯ ಪಡುತ್ತಾರೆ. ಇಷ್ಟು ಸಾಧನೆ ಮಾಡಿದ ನನಗೆ ಕೆಸರು ಎರಚಲು ಯಾರಿಗೂ ಹಕ್ಕಿಲ್ಲ ಎಂದು ಸ್ಪಷ್ಟಪಡಿಸಿದರು.

ಕನ್ನಡವನ್ನು ನಾನು ದೇವತೆಯಾಗಿ ಅಲ್ಲ, ಬದುಕಿನ ಭಾಷೆಯಾಗಿ ಬಳಸಿದ್ದೇನೆ. ನನ್ನ ಮೂವರು ಹೆಣ್ಣುಮಕ್ಕಳನ್ನೂ ಕನ್ನಡ ಶಾಲೆಯಲ್ಲಿ ಓದಿಸಿದ್ದೇನೆ. ಕನ್ನಡದ ಜೊತೆಗಿನ ನನ್ನ ನಂಟು ಸಂದೇಹಾಸ್ಪದವಲ್ಲ ಎಂದು ಹೇಳಿದರು.

2023ರ ಜನಸಾಹಿತ್ಯ ಸಮ್ಮೇಳನದಲ್ಲಿ ನಾನು ಹೇಳಿದ ಮಾತುಗಳನ್ನು ಕೆಲವರು ತಿರುಚಿದ್ದಾರೆ. ಅಲ್ಪಸಂಖ್ಯಾತರು, ಮಹಿಳೆಯರು, ದಲಿತರ ಪರವಾಗಿ ನಾನು ಧ್ವನಿ ಎತ್ತಿದ್ದೇನೆ. ಅದನ್ನೇ ನನ್ನ ವಿರುದ್ಧ ಬಳಸಿದ್ದಾರೆ. ಆದರೆ, ಕನ್ನಡವನ್ನು ನನ್ನಷ್ಟು ಪ್ರೀತಿಸಿದವರು, ಕನ್ನಡವನ್ನು ನನ್ನಷ್ಟು ಅಂತಾರಾಷ್ಟ್ರೀಯ ವೇದಿಕೆಯವರೆಗೆ ಕೊಂಡೊಯ್ದವರು ಯಾರು? ಎಂದು ಪ್ರಶ್ನಿಸಿದರು. ನಂಬಿದವರನ್ನು ಕನ್ನಡ ಎಂದಿಗೂ ಕೈಬಿಡುವುದಿಲ್ಲ. ಇದಕ್ಕೆ ನನ್ನ ಸಾಧನೆಯೇ ಸಾಕ್ಷಿ ಎಂದು ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಬಲ್ಲಮಾವಟಿ ಭಗವತಿ ದೇವಸ್ಥಾನದಲ್ಲಿ ಶಡಾಧರ ಪೂಜಾ ಸಂಪನ್ನ
ಕಡಿಮೆ ಬೆಳೆ ವಿಮಾ ಮೊತ್ತ ಸರಿಪಡಿಸಿ ಮರು ಪಾವತಿಗೆ ಆಗ್ರಹ