ಆ.4ರಂದು ಚಾಮುಂಡೇಶ್ವರಿ ಕರಗ ಮಹೋತ್ಸವ

KannadaprabhaNewsNetwork |  
Published : Jul 30, 2026, 01:15 AM IST
4.ಶಾಸಕ ಇಕ್ಬಾಲ್ ಹುಸೇನ್  | Kannada Prabha

ಸಾರಾಂಶ

ರಾಮನಗರ: ಸರ್ವ ಧರ್ಮ ಸಂದೇಶ ಸಾರುವ ನಾಡಿನ ಶಕ್ತಿದೇವತೆ ಶ್ರೀ ಚಾಮುಂಡೇಶ್ವರಿ ಕರಗ ಮಹೋತ್ಸವವನ್ನು ಈ ಬಾರಿ ರಾಮನಗರದಲ್ಲಿ ಆಗಸ್ಟ್ 4ರಂದು ನಾಡಹಬ್ಬದಂತೆ ಅದ್ಧೂರಿಯಾಗಿ ಆಚರಿಸಲಾಗುವುದು ಎಂದು ಶಾಸಕ ಎಚ್.ಎ.ಇಕ್ಬಾಲ್ ಹುಸೇನ್ ತಿಳಿಸಿದ್ದಾರೆ

ರಾಮನಗರ: ಸರ್ವ ಧರ್ಮ ಸಂದೇಶ ಸಾರುವ ನಾಡಿನ ಶಕ್ತಿದೇವತೆ ಶ್ರೀ ಚಾಮುಂಡೇಶ್ವರಿ ಕರಗ ಮಹೋತ್ಸವವನ್ನು ಈ ಬಾರಿ ರಾಮನಗರದಲ್ಲಿ ಆಗಸ್ಟ್ 4ರಂದು ನಾಡಹಬ್ಬದಂತೆ ಅದ್ಧೂರಿಯಾಗಿ ಆಚರಿಸಲಾಗುವುದು ಎಂದು ಶಾಸಕ ಎಚ್.ಎ.ಇಕ್ಬಾಲ್ ಹುಸೇನ್ ತಿಳಿಸಿದ್ದಾರೆ.

ರಾಮನಗರದಲ್ಲಿ ಶ್ರೀ ಚಾಮುಂಡೇಶ್ವರಿ ಕರಗ ಮಹೋತ್ಸವ ಆಯೋಜನೆ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಭಕ್ತರ ಸಂರಕ್ಷಣಾರ್ಥವಾಗಿ ನಗರದಲ್ಲಿ ನೆಲೆಸಿರುವ ಶಕ್ತಿದೇವತೆ ಚಾಮುಂಡೇಶ್ವರಿ ಅಮ್ಮನವರ ಕರಗ ಸೇರಿದಂತೆ ಅಷ್ಟ ದೇವತೆಗಳ ಕರಗ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ಸಕಲ ಸಿದ್ಧತೆಗಳು ನಡೆಯುತ್ತಿದೆ ಎಂದಿದ್ದಾರೆ.

ಆ.2ರಂದು ಮಡಿಲಕ್ಕಿ ಸೇವೆ :

ಆಗಸ್ಟ್ 2ರಂದು ಕ್ಷೇತ್ರದ ಜನರ ಹೆಸರಿನಲ್ಲಿ ಸಂಕಲ್ಪ ಮಾಡಿ ಪ್ರತಿ ವರ್ಷದಂತೆ ಈ ಬಾರಿಯೂ ಭಕ್ತ ಸಂರಕ್ಷಣಾರ್ಥ ನೆಲೆಸಿರುವ ಶ್ರೀ ಚಾಮುಂಡೇಶ್ವರಿ ಮತ್ತು ಶ್ರೀ ಬನ್ನಿಮಹಂಕಾಳಿ ಅಮ್ಮ ಸೇರಿದಂತೆ ಒಟ್ಟು 16 ಶಕ್ತಿ ದೇವತೆಗಳಿಗೆ ಮಡಿಲಕ್ಕಿ ಸೇವೆ ಸಮರ್ಪಣೆ ಮಾಡಿ, ವಿಶೇಷ ಪೂಜೆ ನೆರವೇರಿಸುತ್ತೇನೆ ಎಂದು ತಿಳಿಸಿದ್ದಾರೆ.

ಕೋಮು ಸಾಮರಸ್ಯ ಸಂದೇಶ ಸಾರುವ ಐತಿಹಾಸಿಕ ಕರಗವನ್ನು ಹಬ್ಬವಾಗಿ ಪ್ರತಿವರ್ಷ ಆಚರಿಸಲ್ಪಡುವ ಮೂಲಕ ರಾಮನಗರದ ಹಿರಿಮೆಯನ್ನು ಎಲ್ಲೆಡೆ ಪಸರಿಸಿದೆ. ಮೈಸೂರಿಗೆ ದಸರಾ ಹಬ್ಬವಿದ್ದಂತೆ, ರಾಮನಗರಕ್ಕೆ ಚಾಮುಂಡೇಶ್ವರಿ ಅಮ್ಮನವರ ಕರಗ ಹೆಚ್ಚು ಪ್ರಸಿದ್ಧಿಯಾಗಿದೆ. ಹೀಗಾಗಿ ಇಡೀ ನಗರವನ್ನು ವಿದ್ಯುತ್ ದೀಪ ಹಾಗೂ ಪ್ರಮುಖ ವೃತ್ತಗಳನ್ನು ಹೂವಿನ ಅಲಂಕಾರದಿಂದ ಶೃಂಗರಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಈ ನಾಡ ಹಬ್ಬಕ್ಕೆ ಬರುವ ಭಕ್ತರು ಮತ್ತು ಸಾರ್ವಜನಿಕರಿಗೆ ಸಾಂಸ್ಕೃತಿಕ ರಸದೌತಣ ಉಣಬಡಿಸುವ ಉದ್ದೇಶದಿಂದ ಪ್ರತಿವರ್ಷದಂತೆ ಈ ಬಾರಿ ಚಲನ ಚಿತ್ರ ನಟರಾದ ಸುದೀಪ್, ನೀನಾಸಂ ಸತೀಶ್, ವರುಣ್, ನಟಿ ರಚಿತಾರಾಮ್ , ಗಿಲ್ಲಿ ನಟ ನಟರಾಜ್ ಸೇರಿದಂತೆ ಖ್ಯಾತ ನಟ‌ ನಟಿಯರು, ಹೆಸರಾಂತ ಗಾಯಕರಾದ ನವೀನ್ ಸಜ್ಜು ತಂಡ, ಆಲ್ ಓಕೆ ತಂಡ , ಚಂದನ್ ಶೆಟ್ಟಿ ತಂಡ, ಸುನಿಧಿ ಗಣೇಶ್ ತಂಡಗಳು ಸಾಂಸ್ಕೃತಿಕ ಹಾಗೂ ಹಾಸ್ಯ ರಸಮಂಜರಿ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

ಕಾರ್ಯಕ್ರಮಕ್ಕಾಗಿ ಬೃಹತ್ ವೇದಿಕೆ ಈಗಾಗಲೇ ಸಿದ್ದವಾಗುತ್ತಿದೆ. ಸಾವಿರಾರು ಮಂದಿ ಪ್ರೇಕ್ಷಕರು ಆಗಮಿಸುವ ನಿರೀಕ್ಷೆ ಇದ್ದು, ಎಲ್ಲರಿಗೂ ಆಸನದ ವ್ಯವಸ್ಥೆ ಮಾಡಲಾಗುತ್ತದೆ. ವಿಶೇಷವಾಗಿ ಮಹಿಳಾ ಪ್ರೇಕ್ಷಕರಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಸೂಕ್ತ ಬಂದೋಬಸ್ತಿಗೆ ಸೂಚನೆ :

ಪ್ರತಿ ವರ್ಷದಂತೆ ಈ ಬಾರಿಯೂ ದೇವಾಲಯಗಳಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ನೆರವೇರಲಿವೆ. ಈ ಧಾರ್ಮಿಕ ಮಹೋತ್ಸವದಲ್ಲಿ ಲಕ್ಷಾಂತರ ಭಕ್ತಾದಿಗಳು ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ಭಕ್ತರಿಗೆ ಕುಡಿಯುವ ನೀರು, ಸ್ವಚ್ಛತೆ ಸೇರಿದಂತೆ ಮೂಲಸೌಕರ್ಯಗಳ ಕೊರತೆ ಎದುರಾಗದಂತೆ ಕ್ರಮ ವಹಿಸಲಾಗಿದೆ. ಕರಗ ಸಂಚರಿಸುವ ರಸ್ತೆಗಳ ದುರಸ್ಥಿ ಕಾರ್ಯ ನಡೆಯುತ್ತಿದೆ.

ಯಾವುದೇ ಸಮಸ್ಯೆ ಆಗಬಾರದೆಂದು ಎಂಬ ಉದ್ದೇಶದಿಂದ ಎಲ್ಲ ಅಗತ್ಯ ವ್ಯವಸ್ಥೆಗಳನ್ನು ಕೈಗೊಳ್ಳಲಾಗುತ್ತಿದೆ. ರಸ್ತೆಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ. ಸಂಚಾರ ದಟ್ಟಣೆ ನಿಯಂತ್ರಿಸಲು ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ಮಾರ್ಗ ಬದಲಾವಣೆ, ಭಕ್ತರ ವಾಹನಗಳ ನಿಲುಗಡೆಗೆ ಪ್ರತ್ಯೇಕ ಪಾರ್ಕಿಂಗ್ ಸ್ಥಳಗಳನ್ನು ಗುರುತಿಸಿ ಸೂಕ್ತ ಬಂದೋಬಸ್ತ್ ಕೈಗೊಳ್ಳುವುದು. ಕರಗ ಮಹೋತ್ಸವಕ್ಕೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ತೊಡಗಿಸಿಕೊಳ್ಳುವಂತೆ ಸೂಚನೆ ನೀಡಿರುವುದಾಗಿ ಇಕ್ಬಾಲ್ ಹುಸೇನ್ ತಿಳಿಸಿದ್ದಾರೆ.

ಕೋಟ್ ................

ನಾಡದೇವತೆ ಶ್ರೀ ಚಾಮುಂಡೇಶ್ವರಿ ಅಮ್ಮನವರ ಕೃಪೆ ಹಾಗೂ ರಾಮನಗರ ಕ್ಷೇತ್ರದ ಜನರ ಪ್ರಾರ್ಥನೆ, ಆಶೀರ್ವಾದದಿಂದ ನನ್ನ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದೇನೆ. ಕ್ಷೇತ್ರದಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಜೊತೆಗೆ ಜನರ ಸಂಕಷ್ಟಗಳಿಗೆ ಸ್ಪಂದಿಸಿ ಅವರ ಸೇವೆ ಮಾಡಲು "ಕ್ಷೇತ್ರದ ಜನರ ಹಿತ ಮತ್ತು ಅಭಿವೃದ್ಧಿಯೇ ಔಷಧ " ಎಂದು ನಂಬಿರುವ ನನಗೆ ತಾಯಿ ಚಾಮುಂಡೇಶ್ವರಿ ಅಮ್ಮನವರು ಆಶೀರ್ವಾದ ಮಾಡಿದ್ದಾರೆ.

-ಇಕ್ಬಾಲ್ ಹುಸೇನ್, ಶಾಸಕರು, ರಾಮನಗರ

ಬಾಕ್ಸ್ ...ಜಿಲ್ಲಾ ಕ್ರೀಡಾಂಗಣ, ಅರಳೀಮರ ವೃತ್ತದಲ್ಲಿ ಉತ್ಸವ

ಬೆಂಗಳೂರು ದಕ್ಷಿಣ ಜಿಲ್ಲೆಯ ಪಾಲಿಗೆ ಈ ವರ್ಷ ನೆನಪಿನಲ್ಲಿಡುವ ವರ್ಷವಾಗಿದೆ. ನಮ್ಮ‌ ಜಿಲ್ಲೆಯ ಹೆಮ್ಮೆಯ ಸುಪುತ್ರ ಡಿ.ಕೆ.ಶಿವಕುಮಾರ್ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದು, ಈ ವರ್ಷ ಮತ್ತಷ್ಟು ವಿಜೃಂಭಣೆಯಿಂದ ಶ್ರೀ ಚಾಮುಂಡೇಶ್ವರಿ ಅಮ್ಮನವರ ಕರಗ ಮಹೋತ್ಸವವನ್ನು ನಗರದ ಜಿಲ್ಲಾ ಕ್ರೀಡಾಂಗಣ ಮತ್ತು ಅರಳೀಮರ ವೃತ್ತ ಎರಡು ಕಡೆಗಳಲ್ಲಿ ಅದ್ಧೂರಿಯಾಗಿ ಆಚರಿಸಲಾಗುತ್ತಿದೆ.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ , ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ, ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ , ಶಾಸಕರಾದ ಎಚ್.ಸಿ.ಬಾಲಕೃಷ್ಣ, ಸಿ.ಪಿ.ಯೋಗೇಶ್ವರ್, ವಿಧಾನ ಪರಿಷತ್ ಸದಸ್ಯರಾದ ಎಸ್.ರವಿ, ಪುಟ್ಟಣ್ಣ, ರಾಮೋಜಿಗೌಡ, ಸುದಾಮ್ ದಾಸ್ , ಮಾಜಿ ಶಾಸಕ ಸಿ.ಎಂ.ಲಿಂಗಪ್ಪ ಸೇರಿದಂತೆ ಅನೇಕ ನಾಯಕರು ಕರಗ ಮಹೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ.

ಬಾಕ್ಸ್ ...............

ನಾನೇ ಖರ್ಚು ಭರಿಸುವೆ, ಯಾರೂ ಹಣ ಕೊಡಬೇಡಿ

ತಾವು ಶಾಸಕರಾದ ನಂತರ ಈ ವರ್ಷ 4ನೇ ಬಾರಿಗೆ ಶ್ರೀ ಚಾಮುಂಡೇಶ್ವರಿ ಕರಗ ಮಹೋತ್ಸವವನ್ನು ಆಯೋಜಿಸುತ್ತಿದ್ದೇನೆ. ಪ್ರತಿಬಾರಿಗಿಂತಲೂ ಈ ವರ್ಷ ಕರಗ ಮಹೋತ್ಸವ ಅದ್ಧೂರಿಯಾಗಿ ಮೂಡಿ ಬರಲಿದೆ. ಕರಗ ಮಹೋತ್ಸವದ ಹೆಸರಿನಲ್ಲಿ ಯಾರಾದರು ದೇಣಿಗೆ ಇತ್ಯಾದಿ ಕೇಳಿದರೆ ಸರ್ಕಾರಿ ಅಧಿಕಾರಿಗಳು ಹಾಗೂ ಅಂಗಡಿ ಮುಂಗಟ್ಟುಗಳ ಮಾಲೀಕರು ಕೊಡಬೇಡಿ. ಎಷ್ಟೇ ಖರ್ಚಾದರೂ ನನ್ನ ಸ್ವಂತ ಹಣದಲ್ಲಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತೇನೆ. ನನಗೆ ಆ ಶಕ್ತಿಯನ್ನು ಶ್ರೀ ಚಾಮುಂಡೇಶ್ವರಿ ತಾಯಿ ಕರುಣಿಸಿದ್ದಾಳೆ. ಕರಗ ಆಚರಣೆಯಲ್ಲಿ ನಿಮ್ಮ‌ ಪಾಲ್ಗೊಳ್ಳುವಿಕೆಯಷ್ಟೆ ನನಗೆ ಮುಖ್ಯ. ಎಲ್ಲರೂ‌ ಸೇರಿ ಶಾಂತಿಯುತವಾಗಿ "ನಮ್ಮೂರ ಹಬ್ಬ - ರಾಮನಗರ ದಸರಾ "ವನ್ನು ಯಶಸ್ವಿಗೊಳಿಸೋಣ ಎಂದು ಶಾಸಕ ಇಕ್ಬಾಲ್ ಹುಸೇನ್ ವಿನಂತಿಸಿದ್ದಾರೆ.

29ಕೆಆರ್ ಎಂಎನ್ 4,5.ಜೆಪಿಜಿ

4.ಶಾಸಕ ಇಕ್ಬಾಲ್ ಹುಸೇನ್.

5.ಶ್ರೀ ಚಾಮುಂಡೇಶ್ವರಿ ದೇವಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಹಿತ್ಯ ಲೋಕಕ್ಕೆ ಹಡಪದ ಅಪ್ಪಣ್ಣ ಕೊಡುಗೆ ಅಪಾರ
ದೇಶದಲ್ಲೇ ಮೊದಲ ಬಾರಿ 138 ರೈತರಿಗೆ ಪ್ರಮಾಣಪತ್ರ