27, 28, ಮಾ.1 ರಂದು ಕಿಸಾನ್ ಸ್ವರಾಜ್ ಸಮ್ಮೇಳನ

KannadaprabhaNewsNetwork |  
Published : Feb 21, 2026, 01:15 AM IST
3 | Kannada Prabha

ಸಾರಾಂಶ

ದಕ್ಷಿಣ ಭಾರತದ ಎಲ್ಲಾ ರಾಜ್ಯಗಳು ಸೇರಿದಂತೆ ದೇಶದ 11 ರಾಜ್ಯಗಳಿಂದ ಸುಮಾರು 1 ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಲಿದ್ದಾರೆ

ಕನ್ನಡಪ್ರಭ ವಾರ್ತೆ ಮೈಸೂರುಸುಸ್ಥಿರ ಮತ್ತು ಸಮಗ್ರ ಕೃಷಿ ಮೈತ್ರಿಕೂಟ (ಆಶಾ)- ಕಿಸಾನ್ ಸ್ವರಾಜ್ ಮತ್ತು ಕರ್ನಾಟಕ ರಾಜ್ಯ ಮುಕ್ತ ವಿವಿ ಪ್ರಸಾರಾಂಗ ಸಹಯೋಗದೊಂದಿಗೆ 6ನೇ ಕಿಸಾನ್ ಸ್ವರಾಜ್ ಸಮ್ಮೇಳನವನ್ನು ಫೆ.27, 28 ಮತ್ತು ಮಾ.1 ರಂದು ಆಯೋಜಿಸಲಾಗಿದೆ ಎಂದು ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ತಿಳಿಸಿದರು.ಈ ಸಮ್ಮೇಳನ ಉದ್ಘಾಟನೆ ಕಾರ್ಯಕ್ರಮವು ಫೆ.28ರ ಬೆಳಗ್ಗೆ 9.30ಕ್ಕೆ ರಾಜ್ಯ ಮುಕ್ತ ವಿವಿ ಘಟಿಕೋತ್ಸವ ಭವನದಲ್ಲಿ ನಡೆಯಲಿದ್ದು, ನಂತರ ವಿವಿಧ ಅಧಿವೇಶನ ನಡೆಯಲಿದೆ. ದಕ್ಷಿಣ ಭಾರತದ ಎಲ್ಲಾ ರಾಜ್ಯಗಳು ಸೇರಿದಂತೆ ದೇಶದ 11 ರಾಜ್ಯಗಳಿಂದ ಸುಮಾರು 1 ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.ಈ ಸಮ್ಮೇಳನದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸುಭಾಷ್ ಶರ್ಮಾ ಅವರಂತಹ ನೈಸರ್ಗಿಕ ಕೃಷಿಕರು ಮತ್ತು ತಳಿ ಸಂರಕ್ಷಕ ಪ್ರಶಸ್ತಿ ಪುರಸ್ಕೃತ ಹಲವಾರು ರೈತರು ಭಾಗವಹಿಸಲಿದ್ದಾರೆ. ಜೊತೆಗೆ, ಆಂಧ್ರಪ್ರದೇಶ ಸರ್ಕಾರದ ನೈಸರ್ಗಿಕ ಕೃಷಿ ವಿಭಾಗದ ವಿಶೇಷ ಮುಖ್ಯ ಕಾರ್ಯದರ್ಶಿ ಟಿ. ವಿಜಯ್ ಕುಮಾರ್ ಮತ್ತು ಛತ್ತೀಸ್‌ಗಢದ ದಂತೇವಾಡ ಜಿಲ್ಲೆಯನ್ನು ಸಂಪೂರ್ಣ ಸಾವಯವ ಜಿಲ್ಲೆಯನ್ನಾಗಿ ಪರಿವರ್ತಿಸಲು ಅಡಿಪಾಯ ಹಾಕಿದ ಹಿರಿಯ ಅಧಿಕಾರಿ ದೈವಸೇನಾಪತಿ ಅವರಂತಹ ನೀತಿ ನಿರೂಪಕರು ಪಾಲ್ಗೊಳ್ಳಲಿದ್ದಾರೆ ಎಂದರು.ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಮತ್ತು ರೈತರಿಗಾಗಿ ಕೃಷಿ ಕಲಿಕಾ ಪ್ರದರ್ಶನಗಳನ್ನು ಆಯೋಜಿಸಿದ್ದು, ಇಲ್ಲಿ ನೈಸರ್ಗಿಕ ಮತ್ತು ಸಾವಯವ ಕೃಷಿಕರು ಹಾಗೂ ರೈತ ಒಕ್ಕೂಟಗಳು ತಮ್ಮ ರಾಸಾಯನಿಕ ಮುಕ್ತ ಉತ್ಪನ್ನಗಳನ್ನು ಮಾರಾಟ ಮಾಡಲು ಮಳಿಗೆಗಳನ್ನು ತೆರೆಯಲಿದ್ದಾರೆ. ಮೈಸೂರಿನ ಜನತೆಯ ನಾಲಿಗೆಗೆ ರುಚಿ ನೀಡಲು ವೈವಿಧ್ಯಮಯ ಸಾವಯವ ಆಹಾರ ಮಳಿಗೆಗಳ ವ್ಯವಸ್ಥೆಯೂ ಇರಲಿದೆ ಎಂದು ಅವರು ತಿಳಿಸಿದರು.ಸುಸ್ಥಿರ ಮತ್ತು ಆರೋಗ್ಯಕರ ಸಂಪ್ರದಾಯಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ, ಸಮ್ಮೇಳನದಲ್ಲಿ ಸಾಂಪ್ರದಾಯಿಕ ಎಣ್ಣೆ ಗಾಣದ (ಎತ್ತುಗಳಿಂದ ನಡೆಸುವ) ಪ್ರದರ್ಶನವೂ ಇರಲಿದೆ. ಇದು ಗ್ರಾಹಕರು ಉತ್ತಮ ಹಾಗೂ ಆರೋಗ್ಯಕರ ಆಹಾರ ಪದ್ಧತಿಯತ್ತ ಮುಖ ಮಾಡುವಂತೆ ಪ್ರೇರೇಪಿಸಲಿದೆ ಎಂದು‌ಅವರು ಹೇಳಿದರು.ಸಮ್ಮೇಳದಲ್ಲಿ ಸುಮಾರು 40 ಹೆಚ್ಚು ಗೋಷ್ಠಿಗಳು, ಅಧಿವೇಶನಗಳು ನಡೆಯಲಿವೆ. ಎಲ್ಲದಕ್ಕೂ ಸಾರ್ವಜನಿಕರಿಗೆ ಮುಕ್ತ ಅವಕಾಶವಿದ್ದೂ ಸಾರ್ವಜನಿಕರು, ವಿದ್ಯಾರ್ಥಿಗಳು ಮತ್ತು ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಭಾರತದ ಕೃಷಿ ಪರಂಪರೆ ಅರಿತುಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.ಫೆ.27ರ ರಾತ್ರಿ 8ಕ್ಕೆ ಗಾಯಕ ವಾಸು ದೀಕ್ಷಿತ್ ಅವರಿಂದ ಗಾಯನ ಹಾಗೂ ಫೆ.28 ರಂದು ಅಭಿವ್ಯಕ್ತಿ ಕಲಾ ಕೇಂದ್ರದ ಕಲಾವಿದರಿಂದ ಭರತನಾಟ್ಯ ಪ್ರದರ್ಶನ ಏರ್ಪಡಿಸಲಾಗಿದೆ ಎಂದರು.ರಾಜ್ಯ ಮುಕ್ತ ವಿವಿ ಕುಲಸಚಿವ ಪ್ರೊ.ಎಸ್.ಕೆ. ನವೀನ್ ಕುಮಾರ್, ಪರೀಕ್ಷಾಂಗ ಕುಲಸಚಿವ ಡಾ.ಸಿ.ಎಸ್. ಆನಂದ್ ಕುಮಾರ್, ಡೀನ್ ಗಳಾದ ಪ್ರೊ.ಎಂ. ರಾಮನಾಥಂ ನಾಯ್ಡು, ಡಾ.ಎನ್.ಆರ್. ಚಂದ್ರೇಗೌಡ, ಹಣಕಾಸು ಅಧಿಕಾರಿ ಡಾ.ಎಸ್. ನಿರಂಜನ್ ರಾಜ್, ಪ್ರಸಾರಾಂಗ ನಿರ್ದೇಶಕ ಡಾ. ಸಂತೋಷ್ ನಾಯಕ್, ಆಶಾ- ಕಿಸಾನ್ ಸ್ವರಾಜ್ ಸಂಚಾಲಕಿ ಕವಿತಾ ಕುರುಗಂಟಿ, ಡಾ.ಕೆ. ರಾಮಕೃಷ್ಣಪ್ಪ, ಕವಿತಾ ಶ್ರೀನಿವಾಸನ್ ಮೊದಲಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಶಾ ಮುಕ್ತರಾಗಿ, ಸ್ವಾಸ್ಥ್ಯ ಸಮಾಜ ನಿರ್ಮಿಸಿ: ಡಿಸಿ ಪೂವಿತಾ ಕರೆ
ಜನಗಣತಿ ಕಾರ್ಯ ಯಶಸ್ವಿಗೆ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿ: ಜಿಲ್ಲಾಧಿಕಾರಿ ಪೂವಿತಾ