‘ನಶಾ ಮುಕ್ತ ರಾಯಚೂರು’ ಹಾಗೂ ‘ತಂಬಾಕು ಮುಕ್ತ ಯುವ ಅಭಿಯಾನ 4.0’ ಜಾಗೃತಿ ನಡಿಗೆಯ ಕಾರ್ಯಕ್ರಮದಲ್ಲಿ ಗಣ್ಯರು,ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು.

ಕನ್ನಡಪ್ರಭ ವಾರ್ತೆ ರಾಯಚೂರು

‘ನಶಾ ಮುಕ್ತ ರಾಯಚೂರು’ ಹಾಗೂ ‘ತಂಬಾಕು ಮುಕ್ತ ಯುವ ಅಭಿಯಾನ 4.0’ ಅಂಗವಾಗಿ ಆಯೋಜಿಸಲಾಗಿದ್ದ ‘ಜಾಗೃತಿ ನಡಿಗೆ’ ಕಾರ್ಯಕ್ರಮವನ್ನು ಬುಧವಾರ ನಗರದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಜಿಲ್ಲಾಡಳಿತ, ಜಿಪಂ, ಮಹಾನಗರ ಪಾಲಿಕೆ, ಪೊಲೀಸ್ ಇಲಾಖೆ, ರಿಮ್ಸ್ ಬೋಧಕ ಆಸ್ಪತ್ರೆ, ಸರ್ಕಾರಿ ಮಹಿಳಾ ಕಾಲೇಜಿನ ಎನ್ಎಸ್ಎಸ್ ಘಟಕ, ಖಾಸಗಿ ವೈದ್ಯಕೀಯ ಕಾಲೇಜುಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಹಮ್ಮಿಕೊಂಡಿದ್ದ ಜಾಗೃತಿ ನಡಿಗೆಗೆ ಜಿಲ್ಲಾಧಿಕಾರಿ ಪೂವಿತಾ ಎಸ್. ಅವರು ಚಾಲನೆ ನೀಡಿದರು. ನಂತರ ಮಾತನಾಡಿ ಅವರು, ನಶಾ ಪದಾರ್ಥಗಳಿಂದ ದೂರವಾಗಿ ಸುಂದರ, ಸ್ವಾಸ್ಥ್ಯ ಸಮಾಜ ನಿರ್ಮಿಸಲು ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಶು ಗಿರಿ ಅವರು ಮಾತನಾಡಿ,ಜಿಲ್ಲೆಯ ಕೆಲ ಭಾಗಗಳಲ್ಲಿ ಗಾಂಜಾ ಬಳಕೆ ಹಾಗೂ ಮಾರಾಟದ ಕುರಿತು ಲಭ್ಯವಾದ ಮಾಹಿತಿಯನ್ನಾಧರಿಸಿ ತಕ್ಷಣವೇ ದಾಳಿ ನಡೆಸಿ 138 ಪ್ರಕರಣಗಳನ್ನು ದಾಖಲಿಸಲಾಗಿದೆ ಮತ್ತು ಮಾರಾಟಗಾರರನ್ನು ಬಂಧಿಸಲಾಗಿದೆ. ನಶಾ ಪದಾರ್ಥಗಳ ಅಮಲಿನಲ್ಲಿ ಕೊಲೆ, ಸುಲಿಗೆ, ದೊಂಬಿಯಂತಹ ಅಪರಾಧ ಕೃತ್ಯಗಳು ಜರುಗುವ ಸಾಧ್ಯತೆಯಿರುವುದರಿಂದ ಸಾರ್ವಜನಿಕರು ಹಾಗೂ ಯುವಜನತೆ ನಶಾ ಪದಾರ್ಥಗಳ ಬಳಕೆ ಮತ್ತು ಮಾರಾಟದಿಂದ ದೂರವಿರಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಈ ವೇಳೆ ಡಿಎಚ್ಒ ಡಾ.ನಂದಿತಾ ಎಂ.ಎನ್., ರಿಮ್ಸ್ ಬೋಧಕ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ವಿಜಯ ಶಂಕರ, ಪ್ರಾಂಶುಪಾಲ ಡಾ.ರಾಹುಲ್ ಸಿ. ಕೀರ್ತೆ, ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ. ಗಣೇಶ್ ಕೆ., ಡಾ.ಶಾಕೀರ್ ಮೊಯಿನುದ್ದೀನ್, ವಿವಿಧ ವೈದ್ಯಾಧಿಕಾರಿಗಳು, ಪೊಲೀಸ್ ಸಿಬ್ಬಂದಿ, ವೈದ್ಯಕೀಯ ವಿದ್ಯಾರ್ಥಿ ಗಳು, ಆರೋಗ್ಯ ಶಿಕ್ಷಣಾಧಿಕಾರಿಗಳು, ಆಶಾ ಕಾರ್ಯಕರ್ತೆಯರು ಮತ್ತು ಸಿಬ್ಬಂದಿ ವರ್ಗದವರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಪ್ರತಿಜ್ಞಾವಿಧಿ ಬೋಧನೆ, ವಿವಿಧೆಡೆ ರ್‍ಯಾಲಿ:

ರಾಯಚೂರು: ‘ನಶಾ ಮುಕ್ತ ರಾಯಚೂರು’ ಹಾಗೂ ‘ತಂಬಾಕು ಮುಕ್ತ ಯುವ ಅಭಿಯಾನ 4.0’ ಜಾಗೃತಿ ನಡಿಗೆಯ ಕಾರ್ಯಕ್ರಮದಲ್ಲಿ ಗಣ್ಯರು,ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು. ನಂತರ ಡಿಎಚ್‌ಒ ಕಚೇರಿ ಆವರಣದಿಂದ ಆರಂಭಗೊಂಡ ನಡಿಗೆ ನಗರದ ತೀನ್ ಕಂದಿಲ್ ಸರ್ಕಲ್‌ನಿಂದ ಪ್ರಾರಂಭ ವಾಗಿ ಕೇಂದ್ರ ಬಸ್ ನಿಲ್ದಾಣದವರೆಗೆ ನಡೆಯಿತು. ಮಾರ್ಗಮಧ್ಯೆ ಎರಡು ಪ್ರಮುಖ ಸ್ಥಳಗಳಲ್ಲಿ ನಶಾ ಪದಾರ್ಥಗಳ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವ ಬೀದಿ ನಾಟಕಗಳನ್ನು ಪ್ರದರ್ಶಿಸಲಾಯಿತು.