ಟನ್ ಕಬ್ಬಿಗೆ ₹5, 500 ಬೆಲೆ ನೀಡುವಂತೆ ಆಗ್ರಹಿಸಿ 3 ದಿನದಿಂದ ಹೆದ್ದಾರಿ ಬಂದ್ ಮಾಡಿ ಧರಣಿ ಕುಳಿತಿರುವ ರೈತರು, ತಮ್ಮ ಪಟ್ಟು ಸಡಿಲಿಸದೆ ಧರಣಿ ಮುಂದುವರಿಸಿದ್ದಾರೆ, ಇತ್ತ ರೈತರೊಂದಿಗೆ ಜಿಲ್ಲಾಡಳಿತ ನಡೆಸಿದ ಸಭೆಯಲ್ಲಿ ಬೆಲೆ ಕುರಿತಂತೆ ಯಾವುದೇ ಒಮ್ಮತ ಮೂಡದೆ ಮುಂದೂಡಲ್ಪಟ್ಟಿದೆ.
ಕನ್ನಡಪ್ರಭ ವಾರ್ತೆ ಕಲಬುರಗಿ
ಟನ್ ಕಬ್ಬಿಗೆ ₹5, 500 ಬೆಲೆ ನೀಡುವಂತೆ ಆಗ್ರಹಿಸಿ 3 ದಿನದಿಂದ ಹೆದ್ದಾರಿ ಬಂದ್ ಮಾಡಿ ಧರಣಿ ಕುಳಿತಿರುವ ರೈತರು, ತಮ್ಮ ಪಟ್ಟು ಸಡಿಲಿಸದೆ ಧರಣಿ ಮುಂದುವರಿಸಿದ್ದಾರೆ, ಇತ್ತ ರೈತರೊಂದಿಗೆ ಜಿಲ್ಲಾಡಳಿತ ನಡೆಸಿದ ಸಭೆಯಲ್ಲಿ ಬೆಲೆ ಕುರಿತಂತೆ ಯಾವುದೇ ಒಮ್ಮತ ಮೂಡದೆ ಮುಂದೂಡಲ್ಪಟ್ಟಿದೆ.ಜಿಲ್ಲೆಯಲ್ಲಿ ಕಬ್ಬು ರೈತರು ತಂಡೋಪತಂಡವಾಗಿ ಮುಖ್ಯ ಹೆದ್ದಾರಿ, ರಸ್ತೆ ತಿರುವು ಆಕ್ರಮಿಸಿ 3 ದಿನದಿಂದ ಹಂತಹಂತವಾಗಿ ಧರಣಿ ಆರಂಭಿಸಿದ್ದಾರೆ. ಅಫಜಲ್ಪುರ, ಘತ್ತರಗಾ ಕ್ರಾಸ್, ಚವಡಾಪೂರ, ಚಿಂಚೋಳಿ, ಕಲಬರಗಿ ಸುತ್ತಲಿನ ಕಬ್ಬು ರೈತರು ಸಂಪರ್ಕ ರಸ್ತೆಗಳನ್ನೆ ಗುರಿಯಾಗಿಸಿಕೊಂಡು ಅಲ್ಲಲ್ಲಿ ಧರಣಿ ಶುರು ಮಾಡಿದ್ದರಿಂದ ಸಂಚಾರಕ್ಕೆ ಗ್ರಹಣ ಅವರಿಸಿಕೊಂಡಿದೆ.
3 ದಿನದಿಂದ ರಾಮ ಮಂದಿರ ವೃತ್ತದಿಂದ ಸಾಗುವ ರಾಷ್ಟ್ರೀಯ ಹೆದ್ದಾರಿಯ ಅರ್ಧ ಭಾಗವನ್ನು ರೈತರು ಅತಿಕ್ರಮಿಸಿಕೊಂಡು ಧರಣಿ ಮುಂದುವರಿಸಿದ್ದರಿಂದ ಮತ್ತೆ ಈ ವೃತ್ತದಲ್ಲಿ ಸಂಚಾರಕ್ಕೆ ತೊಡಕಾಗಿದೆ.ಭಾರಿ ವಾಹನಗಳ ಸಂಚಾರಕ್ಕೆ ರಾಮ ಮಂದಿರ ಸರ್ಕಲ್ ಮುಚ್ಚಲಾಗಿದ್ದು, ಬೈಕ್, ಕಾರು, ಆಟೋಗಳಿಗೆ ಮಾತ್ರ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಈ ವೃತ್ತದಿಂದಲೇ ವಿಜಯಪುರ, ಬೆಂಗಳೂರು, ಶ್ರೀರಂಗಪಟ್ಟಣಗಳ ಕಡೆ ಸಾಗುವ ಹೆದ್ದಾರಿಯಲ್ಲಿ ಧರಣಿ ಮತ್ತೆ ಆರಂಭಿಸಿದ್ದಾರೆ.ಸಂಚಾರಕ್ಕೆ ತೊಡಕು: ಪ್ರತಿ ಟನ್ ಕಬ್ಬಿಗೆ ₹5, 500 ದರ ನಿಗದಿಪಡಿಸಬೇಕು, ತೊಗರಿಗೆ ಬೆಂಬಲ ಬೆಲೆ ನಿಗದಿಪಡಿಸಬೇಕು, ಬರಗಾಲ ಪರಿಹಾರ ಹಣ ಬೇಗ ರೈತರಿಗೆ ಜಮಾ ಆಗಬೇಕು ಎಂಬಿತ್ಯಾದಿ ಬೇಡಿಕೆಗಳೊಂದಿಗೆ ರೈತರ ಅಹೋರಾತ್ರಿ ಹೋರಾಟ ರಾಮ ಮಂದಿರ ವೃತ್ತದಲ್ಲಿ ಕಳೆದ 3 ದಿನದಿಂದ ಮುಂದುವರಿದಿದೆ. ಈ ವೃತ್ತದಿಂದ ಸಾಗಬೇಕಿದ್ದ ಬಸ್ ಸಂಚಾರ ಬಂದ್ ಮಾಡಲಾಗಿದೆ.
ಕಳೆದ ತಿಂಗಳು ರೈತರ ಹೋರಾಟದಿಂದಾಗಿ ರಾಮ ಮಂದಿರ ಹೆದ್ದಾರಿಯ 2 ಕಡೆ 8 ದಿನ ನಿಷೇಧ ಹೇರಲಾಗಿತ್ತು. ಇದರಿಂದ ಈ ಹೆದ್ದಾರಿಯ ಬಳಸುವ ಸಾವಿರಾರು ವಾಹನಗಳು ಗಲ್ಲಿ ಗಲ್ಲಿ ಸಂಚರಿಸಿ ಭಾರಿ ತೊಂದರೆ ಕಾಡಿತ್ತು. ಇದೀಗ ಮತ್ತೆ ಸಂಚಾರ ದಟ್ಟಣೆ ಇದ್ದು, ರೈತರ ಸಮಸ್ಯೆ ಪರಿಹಾರಕ್ಕೆ ಸರ್ಕಾರ ಮುಂದಾಗಬೇಕಿದೆ.ಬೆಳಗಾವಿ ಬೆಲೆ ಮಾದರಿ ಲೆಕ್ಕಾಚಾರ
ರೈತರು ಟನ್ ಕಬ್ಬಿಗೆ ಬೆಳಗಾವಿ ಭಾಗದಲ್ಲಿನ ಸಕ್ಕರೆ ಕಾರ್ಖಾನೆಯವರು ಅದ್ಯಾವ ಬೆಲೆ ನೀಡುವರೋ ಅದನ್ನೇ ಮಾದರಿಯಾಗಿಸಿಕೊಂಡು ಇಲ್ಲಿರುವ ಸಕ್ಕರೆ ಕಾರ್ಖಾನೆಗಳು ತಾವು ಖರೀದಿಸುವ ಕಬ್ಬಿಗೂ ಬೆಲೆ ನೀಡಲಿ ಎಂದು ಪಟ್ಟು ಹಿಡಿದಿದ್ದಾರೆ. ಜಿಲ್ಲಾಡಳಿತದವರು ಮಧ್ಯಪವೇಶ ಮಾಡಿ ಸಕ್ಕರೆ ಕಾರ್ಖಾನೆಗಳ ಆಡಳಿತ ಮಂಡಳಿ, ರೈತರ ಸಭೆ ನಡೆಸಿದ ಸಂದರ್ಭದಲ್ಲಿ ರೈತರು ಬೆಳಗಾವಿ ಬೆಲೆಗಿಂತ ₹100 ಕಮ್ಮಿ ಕೊಟ್ರೂ ತಾವು ಕಬ್ಬು ಕೊಡೋದಾಗಿ ಸ್ಪಷ್ಟಪಡಿಸಿದ್ದಾರೆ. ಆದರೆ, ಸಭೆಯಲ್ಲಿದ್ದ ಸಕ್ಕರೆ ಕಾರ್ಖಾನೆ ಮಾಲೀಕರು, ಅಧಿಕಾರಿಗಳು ಬೆಳಗಾವಿ ಬೆಲೆಗಿಂತ ₹300 ಕಮ್ಮಿ ಕೊಟ್ಟು ಕಬ್ಬು ಖರೀದಿಸಲು ತಮ್ಮ ಒಪ್ಪಿಗೆ ಇದೆ. ರೈತರು ಹೇಳಿದಂತೆ ₹100 ಕಮ್ಮಿ ಕೊಟ್ಟರೆ ನಮಗೆ ಯಾವುದೇ ವಹಿವಾಟು ನಡೆಸಲಾಗದು ಎಂದು ಸ್ಪಷ್ಟವಾಗಿ ಹೇಳಿದ್ದರಿಂದ ಕಬ್ಬು ಬೆಲೆ ನಿಗದಿ ಹಗ್ಗ ಜಗ್ಗಾಟ ಹಾಗೇ ಮುಂದುವರಿದಿದೆ. ಜಿಲ್ಲಾಧಿಕಾರಿ ಇಕ್ರಮ್ ಶರೀಫ್, ಪೊಲೀಸ್ ಅಧಿಕಾರಿಗಳಾದ ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಢಗೆ ಸೇರಿದಂತೆ ಜಿಲ್ಲಾಡಳಿತ ಹಿರಿಯ ಅಧಿಕಾರಿಗಳ ಸಮ್ಮುದಲ್ಲಿನ ಸಭೆಯಲ್ಲಿ ಈ ಬಗ್ಗೆ ಯಾವುದೇ ಒಮ್ಮತ ಮೂಡದೆ ಸಭೆ ಮುಕ್ತಾಯಗೊಂಡಿದ್ದರಿಂದ ರೈತರು ಹಾಗೇ ಧರಣಿ ಮುಂದುವರಿಸಿದ್ದಾರೆ.