ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಇಲ್ಲಿನ ಎಸ್.ಎನ್. ಪದವಿಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಚಂದ್ರಗಿರಿ ಚಿಕ್ಕಬೆಟ್ಟಕ್ಕೆ ಶೈಕ್ಷಣಿಕ ಕ್ಷೇತ್ರ ದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು. ಐತಿಹಾಸಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಉದ್ದೇಶದಿಂದ ಹಾಗೂ ವಿದ್ಯಾರ್ಥಿಗಳಲ್ಲಿ ನಮ್ಮ ಪರಂಪರೆಯ ಬಗ್ಗೆ ಅರಿವು ಮತ್ತು ಗೌರವ ಮೂಡಿಸುವ ಪ್ರಯತ್ನವಾಗಿದೆ. ಚಂದ್ರಗಿರಿ ಬೆಟ್ಟವು ಶಿಲಾಶಾಸನಗಳು, ಪ್ರಾಚೀನ ಬಸದಿಗಳು ಹಾಗೂ ವಿಶಿಷ್ಟ ವಾಸ್ತುಶಿಲ್ಪದ ಮೂಲಕ ಜೈನ ಧರ್ಮದ ಇತಿಹಾಸವನ್ನು ಸಾರುತ್ತದೆ. ಇಲ್ಲಿನ ಶಾಸನಗಳು ಕನ್ನಡ ಲಿಪಿಯ ಬೆಳವಣಿಗೆ, ಪ್ರಾಚೀನ ಜೀವನ ಪದ್ಧತಿ ಹಾಗೂ ಧಾರ್ಮಿಕ ಆಚರಣೆಗಳ ಕುರಿತು ಮಹತ್ವದ ಮಾಹಿತಿಯನ್ನು ಒದಗಿಸುತ್ತವೆ.
ಚಂದ್ರಗಿರಿ, ಋಷಿಗಿರಿ, ಚಿಕ್ಕಬೆಟ್ಟ ಸೇರಿದಂತೆ ಹಲವು ಹೆಸರುಗಳಿಂದ ಪ್ರಸಿದ್ಧವಾಗಿರುವ ಈ ಬೆಟ್ಟವನ್ನು ’ಸಮಾಧಿ ಗುಡ್ಡ’ ಎಂದೂ ಕರೆಯಲಾಗುತ್ತದೆ. ಪ್ರಾಚೀನ ಕಾಲದಲ್ಲಿ ಈ ಕ್ಷೇತ್ರಕ್ಕೆ ಆಗಮಿಸಿದ ಋಷಿಮುನಿಗಳು, ಶ್ರಾವಕರು ಹಾಗೂ ಆರ್ಯಿಕೆಯರು ಸೇರಿದಂತೆ ಅನೇಕರು ಸಲ್ಲೇಖನ ವ್ರತದ ಮೂಲಕ ಸಮಾಧಿ ಮರಣವನ್ನು ಸ್ವೀಕರಿಸಿರುವುದನ್ನು ಇಲ್ಲಿನ ಶಿಲಾಶಾಸನಗಳು ದಾಖಲಿಸಿವೆ. ಹೀಗಾಗಿ ಚಂದ್ರಗಿರಿಯು ಧಾರ್ಮಿಕ ಶ್ರದ್ಧೆಯ ಕೇಂದ್ರವಾಗಿರುವುದರ ಜತೆಗೆ ಐತಿಹಾಸಿಕ ಅಧ್ಯಯನಕ್ಕೂ ಮಹತ್ವದ ತಾಣವಾಗಿದೆ.ಶೈಕ್ಷಣಿಕ ಪ್ರವಾಸದ ಅಂಗವಾಗಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಚಂದ್ರಗಿರಿ ಚಿಕ್ಕಬೆಟ್ಟದ ದರ್ಶನ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ವಿಂಧ್ಯಗಿರಿ ದೊಡ್ಡಬೆಟ್ಟದ ದರ್ಶನವನ್ನು ಪ್ರತಿ ವ? ಆಯೋಜಿಸಲಾಗುತ್ತಿದೆ. ಈ ಮೂಲಕ ವಿದ್ಯಾರ್ಥಿಗಳಿಗೆ ತಾವು ವಾಸಿಸುವ ನೆಲದ ಸಾಮಾಜಿಕ, ಧಾರ್ಮಿಕ, ಐತಿಹಾಸಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಯನ್ನು ಪರಿಚಯಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.ಈ ಸಂದರ್ಭದಲ್ಲಿ ಉಪನ್ಯಾಸಕರಾದ ಆನಂದ್, ದೀಪಾ, ನವೀನ್ ಕುಮಾರ್, ಕಾವ್ಯ ಹಾಗೂ ರಕ್ಷಿತಾ ಉಪಸ್ಥಿತರಿದ್ದರು.