ಬೆಂಗಳೂರು : ಮೈಸೂರು ರಸ್ತೆಯ ಕೆಂಗೇರಿಯಲ್ಲಿರುವ ವಿಶ್ವ ಒಕ್ಕಲಿಗ ಸಂಸ್ಥಾನ ಮಠದ ಸಂಸ್ಥಾಪಕ, ಹಿರಿಯ ಸ್ವಾಮೀಜಿ ಶ್ರೀ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ (81) ವಯೋಸಹಜ ಹಾಗೂ ಅನಾರೋಗ್ಯದಿಂದ ಶುಕ್ರವಾರ ರಾತ್ರಿ 12.01ಕ್ಕೆ ನಿಧನರಾದರು.
ಶೀಮಠದ ಮೂಲಕ ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದ ಸ್ವಾಮೀಜಿಯವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಶನಿವಾರ ಮಧ್ಯಾಹ್ನ 3 ಗಂಟೆ ವರೆಗೆ ಮಠದ ಆವರಣದಲ್ಲಿ ವ್ಯವಸ್ಥೆ ಕಲ್ಪಿಸಲಾಗಿತ್ತು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಆದಿಚುಂಚನಗಿರಿ ಮಠದ ಪೀಠಾಧಿಪತಿ ನಿರ್ಮಲಾನಂದನಾಥ ಸ್ವಾಮೀಜಿ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಬಿಜೆಪಿ ರಾಜ್ಯಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿ ಅನೇಕ ರಾಜಕೀಯ ಗಣ್ಯರು, ಸ್ವಾಮೀಜಿಗಳು, ಮಠದ ಭಕ್ತರು, ಸಾವಿರಾರು ಅಭಿಮಾನಿಗಳು ಅಗಲಿದ ಸ್ವಾಮೀಜಿಯವರ ಅಂತಿಮ ದರ್ಶನ ಪಡೆದರು.
ಪೀಠಾಧಿಪತಿ ನಿಶ್ಚಲಾನಂದನಾಥ ಸ್ವಾಮೀಜಿ ನೇತೃತ್ವದಲ್ಲಿ ಸಾವಿರಾರು ಮಠದ ಭಕ್ತರು, ಗಣ್ಯರ ಸಮ್ಮುಖದಲ್ಲಿ ಮಧ್ಯಾಹ್ನ 3 ಗಂಟೆ ನಂತರ ಮಠದ ಆವರಣದಲ್ಲಿ ನಾಥ ಪರಂಪರೆಯ ವಿಧಿ-ವಿಧಾನಗಳಂತೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಈ ವೇಳೆ ಡಿಸಿಎಂ ಡಿ.ಕೆ.ಶಿವಕುಮಾರ್ ಉಪಸ್ಥಿತರಿದ್ದು, ಅಂತಿಮ ವಿಧಿ ವಿಧಾನಗಳಲ್ಲಿ ಭಾಗವಹಿಸಿದರು.
ಎಚ್.ಡಿ.ದೇವೇಗೌಡ ಭಾವುಕ: ಸ್ವಾಮೀಜಿಯವರ ಅಂತಿಮ ದರ್ಶನ ಪಡೆದ ಮಾಜಿ ಪ್ರಧಾನಮಂತ್ರಿ ಎಚ್.ಡಿ. ದೇವೇಗೌಡ ಅವರು ಭಾವುಕರಾಗಿ ಕಣ್ಣೀರಿಟ್ಟರು. ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಸಂಸ್ಥಾಪಕ ಚಂದ್ರಶೇಖರನಾಥ ಸ್ವಾಮೀಜಿ ನಿಧನರಾದ ಸುದ್ದಿ ತಿಳಿದು ಮನಸ್ಸಿಗೆ ಅತೀವ ದುಃಖವಾಯಿತು. ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರಕ್ಕೆ ಮಾರ್ಗದರ್ಶಕರಾಗಿ ಕೆಲಸ ಮಾಡಿದ ಗುರುಗಳಿಗೆ, ಭಗವಂತ ಸದ್ಗತಿ ಒದಗಿಸಲಿ. ಈ ದುಃಖ ಭರಿಸುವ ಶಕ್ತಿಯನ್ನು ಅವರ ಆಪಾರ ಸಂಖ್ಯೆಯ ಭಕ್ತರಿಗೆ ನೀಡಲೆಂದು ಪ್ರಾರ್ಥಿಸುತ್ತೇನೆ ಎಂದು ದೇವೇಗೌಡರು ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸ್ವಾಮೀಜಿಯ ಅಂತಿಮ ದರ್ಶನ ಪಡೆದು, ವಿಧಿ-ವಿಧಾನ ಪ್ರಕ್ರಿಯೆಗಳಲ್ಲಿ ಭಾಗವಹಿಸಿದರು. ಈ ವೇಳೆ ಮಾತನಾಡಿದ ಅವರು, ಸ್ವಾಮೀಜಿಯವರು ಭೈರವೈಕ್ಯರಾದ ಸುದ್ದಿ ತಿಳಿದು ಮನಸ್ಸಿಗೆ ನೋವಾಗಿದೆ. ಪೂಜನೀಯರು ಸಮಾಜಕ್ಕೆ ನೀಡಿದ ಕೊಡುಗೆ ಅಪಾರ. ಸ್ವಾಮೀಜಿಯವರ ದಿವ್ಯ ಆತ್ಮಕ್ಕೆ ಪರಮಾತ್ಮನು ಚಿರಶಾಂತಿ ಕರುಣಿಸಲಿ. ಈ ಅಗಲಿಕೆಯ ನೋವು ಭರಿಸುವ ಶಕ್ತಿಯನ್ನು ದೇವರು ಅವರ ಸಮಸ್ತ ಭಕ್ತವೃಂದಕ್ಕೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.
ಸ್ವಾಮೀಜಿಯವರಿಗೆ ಸರ್ಕಾರಿ ಗೌರವ ಸಲ್ಲಿಸದೇ ಇರುವ ಕುರಿತು ಒಕ್ಕಲಿಗ ಸಮುದಾಯದ ಲಿಂಗೇಗೌಡ ಅವರ ಆಕ್ಷೇಪಕ್ಕೆ ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿ, ನಾನೇ ಸರ್ಕಾರವಾಗಿ ಬಂದಿದ್ದೇನೆ. ಸ್ವಾಮೀಜಿಯವರಿಗೆ ನನ್ನ ಬಗ್ಗೆ ಅಪಾರ ಪ್ರೀತಿ ಇತ್ತು. ನಾನು ಮುಖ್ಯಮಂತ್ರಿ ಆಗಬೇಕು ಎಂಬ ಆಸೆ ವ್ಯಕ್ತಪಡಿಸಿದ್ದರು. ಅವರನ್ನು ಕಳೆದುಕೊಂಡಿರುವುದು ಅಪಾರ ನಷ್ಟ ಎಂದು ಹೇಳಿದರು.
ಗಣ್ಯರ ಶೋಕ ಸಂದೇಶ:
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಪಕ್ಷ ನಾಯಕ ಆರ್.ಅಶೋಕ್, ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರು ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.
ಸ್ವಾಮೀಜಿಯವರು ಕಟ್ಟಿದ ಶ್ರೀಮಠದ ಉದ್ದೇಶ, ಆಶಯಗಳು ಭವಿಷ್ಯತ್ತಿನಲ್ಲಿ ಇನ್ನಷ್ಟು ವಿಸ್ತರಣೆಯಾಗಿ ಅವರ ಕನಸುಗಳು ಸಾಕಾರಗೊಳ್ಳಲು ಮಠದ ಭಕ್ತರೊಂದಿಗೆ ಸೇರಿ ನಾವೆಲ್ಲರೂ ಹೆಗಲು ಕೊಡೋಣ, ಆ ಮೂಲಕ ಪೂಜ್ಯರ ಆತ್ಮಕ್ಕೆ ಶಾಂತಿ ಕೋರೋಣ ಎಂದು ಬಿ.ವೈ.ವಿಜಯೇಂದ್ರ ಶೋಕ ಸಂದೇಶ ನೀಡಿದ್ದಾರೆ.
ಅಂತಿಮ ದರ್ಶನ ಪಡೆದು ಮಾತನಾಡಿದ ಕೇಂದ್ರ ಸಚಿವ ವಿ.ಸೋಮಣ್ಣ, ಸ್ವಾಮೀಜಿಯವರ ನಿಧನದಿಂದ ಅತೀವ ದುಃಖವಾಗಿದೆ. ಅವರ ದೂರದೃಷ್ಟಿ, ನಿಷ್ಠುರ ನಡೆ, ವ್ಯಕ್ತಿತ್ವ ವಿಶೇಷವಾದದ್ದು, ಅವರ ಅಗಲಿಕೆಯಿಂದ ಸಮಾಜಕ್ಕೆ ಅಪರಾ ನಷ್ಟವಾಗಿದೆ ಎಂದರು.
ನಿಡುಮಾಮಿಡಿ ವೀರಭದ್ರ ಚನ್ನಮಲ್ಲ ಸ್ವಾಮೀಜಿ, ಕಾಳಿ ಮಠದ ಋಷಿಕುಮಾರ ಸ್ವಾಮೀಜಿ ಸೇರಿ ವಿವಿಧ ಮಠಗಳ ಸ್ವಾಮೀಜಿಯವರು, ಕೇಂದ್ರದ ಸಚಿವ ವಿ.ಸೋಮಣ್ಣ, ಸಚಿವ ಚೆಲುವರಾಯಸ್ವಾಮಿ, ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ, ಸಂಸದ ಡಾ.ಸಿ.ಎನ್.ಮಂಜುನಾಥ, ಶಾಸಕ ಸಿ.ಎನ್.ಅಶ್ವತ್ಥನಾರಾಯಣ, ಶರತ್ ಬಚ್ಚೇಗೌಡ, ಸೇರಿದಂತೆ ಅನೇಕ ಗಣ್ಯರು ಸ್ವಾಮೀಜಿಯವರ ಅಂತಿಮ ದರ್ಶನ ಪಡೆದರು.ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಕ್ಷೇತ್ರದಲ್ಲಿ ಸ್ವಾಮೀಜಿ ಅಪಾರ ಕೊಡುಗೆ ನೀಡಿದ್ದಾರೆ. ನಿರ್ಗತಿಕ ಮಕ್ಕಳು, ಗ್ರಾಮಾಂತರ ಭಾಗದ ಮಕ್ಕಳ ಬಗ್ಗೆ ವಿಶೇಷ ಪ್ರೀತಿ ಹೊಂದಿದ್ದರು. ಸ್ವತಃ ಕೃಷಿ ಮಾಡಿ ಅನ್ನ ದಾಸೋಹ ನಡೆಸುತ್ತಿದ್ದರು. ಸಮಾಜದ ಏಳಿಗೆಗಾಗಿ ಅವರ ಮಾರ್ಗದರ್ಶನದಲ್ಲಿ ಅವರ ಕನಸುಗಳನ್ನು ನನಸು ಮಾಡುವ ಕಾರ್ಯ ಮುಂದುವರೆಯುತ್ತದೆ.
-ನಿಶ್ಚಲಾನಂದನಾಥ ಸ್ವಾಮೀಜಿ, ಪೀಠಾಧಿಪತಿ, ವಿಶ್ವ ಒಕ್ಕಲಿಗ ಸಂಸ್ಥಾನ ಮಠ