ಗದಗ: ಬಡಜನರ ಬದುಕಿನಲ್ಲಿ ಬದಲಾವಣೆ ತರುವುದು ಪಂಚ ಗ್ಯಾರಂಟಿ ಯೋಜನೆಗಳಾಗಿವೆ. ಗ್ಯಾರಂಟಿ ಸಮಿತಿ ಸದಸ್ಯರು, ಅಧಿಕಾರಿಗಳು ಸಮರ್ಪಕ ಅನುಷ್ಠಾನ ಮಾಡುವ ಮೂಲಕ ಬಡವರ ಬದುಕು ಬಂಗಾರವಾಗಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಹೇಳಿದರು.
ಪ್ರತಿ ಕುಟುಂಬಕ್ಕೆ ಪಂಚ ಗ್ಯಾರಂಟಿಗಳಿಂದಾಗಿ ವಾರ್ಷಿಕ ₹60,000 ದೊರೆಯುತ್ತದೆ. ಒಟ್ಟಾರೆ ರಾಜ್ಯದಲ್ಲಿ ಗ್ಯಾರಂಟಿ ಅನುಷ್ಠಾನಕ್ಕೆ ₹58 ಸಾವಿರ ಕೋಟಿ ಮೀಸಲಿಡುವ ಮೂಲಕ ಬಡವರ ಆರ್ಥಿಕ ಸಬಲೀಕರಣಕ್ಕೆ ಸರ್ಕಾರ ದೃಢ ನಿರ್ಧಾರ ಕೈಗೊಂಡಿದೆ ಎಂದರು.
ಸರ್ಕಾರ ಹಣ ನೇರವಾಗಿ ಫಲಾನುಭವಿಗಳಿಗೆ ಸೋರಿಕೆ ಆಗದಂತೆ ತಲುಪಿದೆ. ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವಲ್ಲಿ ಗ್ಯಾರಂಟಿ ಯೋಜನೆಗಳು ಸಂಪೂರ್ಣ ಯಶಸ್ವಿಯಾಗಿದೆ. ನೇರ ನಗದು ವರ್ಗಾವಣೆಯು ಮೂಲಕ ಪಾರದರ್ಶಕ ಆಡಳಿತ ಒದಗಿಸಿದೆ ಎಂದರು.ಪಂಚ ಗ್ಯಾರಂಟಿ ಯೋಜನೆಗಳು ನಿರಂತರವಾಗಿ ನಡೆಯುತ್ತವೆ. ಯಾವುದೂ ನಿಲ್ಲುವುದಿಲ್ಲ. ರಾಜಕೀಯ ಅಪಪ್ರಚಾರ ಕೆಲವರು ನಡೆಸಿದ್ದು ಇದಕ್ಕೆ ಯಾರೊಬ್ಬರೂ ಕಿವಿಗೊಡಬೇಡಿ ಎಂದು ಹೇಳಿದರು.
ಗ್ಯಾರಂಟಿ ಯೋಜನೆ ಮಾಹಿತಿ: ಗೃಹಲಕ್ಷ್ಮೀ ಯೋಜನೆಯಡಿ ಅ. 2024ರ ವರೆಗೆ ಜಿಲ್ಲೆಯಲ್ಲಿ 2,48,525 ನೋಂದಣಿಯಾದ ಅರ್ಜಿಗಳ ಪೈಕಿ 2,44,398 ಅರ್ಜಿಗಳಿಗೆ ಮಂಜೂರಾತಿ ದೊರೆತಿದೆ. ಜಿಲ್ಲೆಯಲ್ಲಿ ವಾಕರಸಾ ಸಂಸ್ಥೆಯಿಂದ ಶಕ್ತಿ ಯೋಜನೆಯಡಿ 2023 ಜೂ. 11ರಿಂದ 2025 ಜ. 20ರ ವರೆಗೆ 8,30,51,736 ಫಲಾನುಭವಿಗಳು ಯೋಜನೆಯ ಅನುಕೂಲ ಪಡೆದಿದ್ದು, ಸಂಸ್ಥೆಗೆ ₹259.25 ಕೋಟಿ ಆದಾಯವಾಗಿದೆ.
ಯುವನಿಧಿ ಯೋಜನೆಯಿಂದ 2024 ಡಿ. 31ರ ವರೆಗೆ ಒಟ್ಟು ಸ್ವೀಕೃತಗೊಂಡ 3811 ಅರ್ಜಿಗಳ ಪೈಕಿ ಡಿಸೆಂಬರ್ 2024ರ ವರೆಗೆ 2472 ಅರ್ಜಿಗಳಿಗೆ ಅನುದಾನ ಮಂಜೂರಾಗಿದ್ದು, ಬಾಕಿ 1339 ಅರ್ಜಿಗಳ ಮಂಜೂರಾತಿ ಹಂತ ಹಂತವಾಗಿ ಆಗುತ್ತವೆ. ಯುವನಿಧಿ ಫಲಾನುಭವಿಗಳಿಗೆ ಡಿಸೆಂಬರ್ 2024ರಲ್ಲಿ ₹73,47,000 ಡಿಬಿಟಿ ಮೂಲಕ ಹಣ ವರ್ಗಾಯಿಸಲಾಗಿದೆ. ಅನ್ನಭಾಗ್ಯ ಯೋಜನೆಯಡಿ ಸೆಪ್ಟೆಂಬರ್ 2024ರ ಮಾಹೆಯಲ್ಲಿ ಜಿಲ್ಲೆಯಲ್ಲಿ 2,26,152 ಪಡಿತರ ಕಾರ್ಡುದಾರರಿಗೆ ಡಿಬಿಟಿ ಮೂಲಕ ₹12,35,80,820 ಹಣ ಸಂದಾಯಿಸಲಾಗಿದೆ ಎಂದು ಗ್ಯಾರಂಟಿ ಯೋಜನೆಯ ಸಂಬಂಧಿತ ಅಧಿಕಾರಿಗಳು ಸಭೆಗೆ ಮಾಹಿತಿ ಒದಗಿಸಿದರು.
ಕಡ್ಡಾಯವಾಗಿ ಹಾಜರಾಗಿ: ತಾಲೂಕುಗಳಲ್ಲಿ ಗ್ಯಾರಂಟಿ ಯೋಜನೆಗಳ ಸೌಲಭ್ಯ ವಿತರಣೆಗೆ ಸಮಸ್ಯೆಗಳೇನಾದರೂ ಇದ್ದಲ್ಲಿ ತಾಲೂಕು ಅಧ್ಯಕ್ಷರ ಗಮನಕ್ಕೆ ತರಬೇಕು. ಅನುಷ್ಠಾನ ಅಧಿಕಾರಿಗಳು ವಿಶೇಷ ಮುತುವರ್ಜಿ ವಹಿಸಿ ಕೆಲಸ ಮಾಡಬೇಕು. ತಾಲೂಕು ಮಟ್ಟದಲ್ಲಿಯೂ ಸಭೆ ನಿಯಮಿತವಾಗಿ ನಡೆಸಬೇಕು ಹಾಗೂ ಸಂಬಂಧಿತ ಇಲಾಖೆಯ ಅಧಿಕಾರಿಗಳು ತಾಲೂಕು ಮಟ್ಟದಲ್ಲಿಯೂ ಕಡ್ಡಾಯವಾಗಿ ಹಾಜರಾಗಬೇಕು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಬಿ.ಬಿ. ಅಸೂಟಿ ಹೇಳಿದರು.