ಕನ್ನಡಪ್ರಭ ವಾರ್ತೆ ಉಡುಪಿ
ಉಡುಪಿ ನಗರದಲ್ಲಿ ಬೀದಿನಾಯಿಗಳ ಸಮಸ್ಯೆ ಭಯಾನಕವಾಗಿ ಹೆಚ್ಚುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳಿ ಎಂದು ನಗರಸಭಾ ಸದಸ್ಯೆ ಅಮೃತಾ ಕೃಷ್ಣಮೂರ್ತಿ ಆಗ್ರಹಿಸಿದ್ದಾರೆ.ಸೋಮವಾರ ನಗರಸಭೆಯ ಅಧ್ಯಕ್ಷ ಪ್ರಭಾಕರ ಪೂಜಾರಿ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿ, ನಗರದಲ್ಲಿ ಬೀದಿ ನಾಯಿಗಳ ಕಾಟದಿಂದ ಶಾಲಾ ಮಕ್ಕಳಿಗೆ ಬಹಳಷ್ಟು ತೊಂದರೆಯಾಗುತ್ತಿದೆ. ಪಾಲಕರು ಮಕ್ಕಳನ್ನು ಹೊರಗೆ ಕಳುಹಿಸಲು ಹೆದರುವಂತಾಗಿದೆ. ಈಗಾಗಲೇ ಅನೇಕ ಮಂದಿಗೆ ಬೀದಿ ನಾಯಿಗಳು ಕಚ್ಚಿವೆ, ಜಿಲ್ಲಾಡಳಿತ ಬೀದಿ ನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿದರೂ ನಾಯಿಗಳ ಸಂಖ್ಯೆ ಕಡಿಮೆಯಾಗುತ್ತಿಲ್ಲ ಎಂದರು.ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಯಶ್ಪಾಲ್ ಸುವರ್ಣ, ಬೀದಿನಾಯಿ ಸಮಸ್ಯೆ ನಗರ ಮಾತ್ರವಲ್ಲದೇ ಜಿಲ್ಲಾ ವ್ಯಾಪಿಯಾಗಿದೆ. ನಗರದೊಳಗೆ ನಾಯಿಗಳ ಸಂಖ್ಯೆ ನಿಯಂತ್ರಿಸಿದರೂ, ಹೊರಗಿನ ಕಡೆಕಾರ್, ಅಂಬಲಪಾಡಿ ಮತ್ತಿತರ ಗ್ರಾ.ಪಂ. ಕಡೆಗಳಿಂದ ನಗರಕ್ಕೆ ಬೀದಿನಾಯಿಗಳು ಬರುತ್ತವೆ. ಅವುಗಳನ್ನು ಬೇಲಿ ಹಾಕಿ ತಡೆಯಲು ಸಾಧ್ಯವಿಲ್ಲ. ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಸಭೆ ನಡೆಸಿ ಜಿಲ್ಲಾ ಮಟ್ಟದಲ್ಲಿಯೇ ಸೂಕ್ತ ಪರಿಹಾರ ಕಂಡುಕೊಳ್ಳಬೇಕು ಎಂದರು. ಇಂದ್ರಾಣಿ ಬಣ್ಣ ಬದಲಾಗಿದೆ:ಸದಸ್ಯ ವಿಜಯ ಕೊಡವೂರು, ನಗರದಲ್ಲಿ ಹರಿಯುವ ಇಂದ್ರಾಣಿ ನದಿಗೆ ಕೊಳಚೆ ನೀರು ಸೇರಿ ನದಿ ನೀರು ಬಣ್ಣವೇ ಬದಲಾಗುತ್ತಿದೆ. ಇದು ಗಂಭೀರ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.ಇದಕ್ಕೆ ಧ್ವನಿಗೂಡಿಸಿದ ಶಾಸಕರು, ಮಣಿಪಾಲ ಭಾಗದ ಹೋಟೆಲ್ ಮತ್ತು ವಸತಿ ಸಮುಚ್ಛಯಗಳ ಶೌಚಾಲಯ ತ್ಯಾಜ್ಯವನ್ನು ಸಂಸ್ಕರಿಸದೆ ನೇರವಾಗಿ ಒಳಚರಂಡಿಗೆ ಬಿಡುತ್ತಿದ್ದಾರೆ. ಇದು ನದಿ ಸೇರುತ್ತಿದೆ. ನಿಯಮ ಉಲ್ಲಂಘಿಸುವವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಇದಕ್ಕೆ ಉತ್ತರಿಸಿದ ಅಧಿಕಾರಿಗಳು, ಮಲ್ಪೆ ಮತ್ತು ಮಣಿಪಾಲ ಭಾಗದಲ್ಲಿ ತಾಜ್ಯವನ್ನು ನೇರವಾಗಿ ಒಳಚರಂಡಿಗೆ ಬಿಡುವ 474 ಕಟ್ಟಡಗಳನ್ನು ಗುರುತಿಸಿ ನೋಟಿಸ್ ನೀಡಲಾಗಿದೆ. 15 ದಿನದೊಳಗೆ ಉತ್ತರಿಸುವಂತೆ ತಿಳಿಸಲಾಗಿದೆ. 13 ಮಂದಿ ಹೋಟೆಲ್ ಮಾಲೀಕರಿಗೂ ನೋಟಿಸ್ ನೀಡಲಾಗಿದೆ ಎಂದರು.ಉಪಾಧ್ಯಕ್ಷೆ ರಜನಿ ಹೆಬ್ಬಾರ್, ಪೌರಾಯುಕ್ತ ಡಾ. ಉದಯ್ ಶೆಟ್ಟಿ, ಸ್ಥಾಯೀ ಸಮಿತಿ ಅಧ್ಯಕ್ಷ ಸುಂದರ್ ಕಲ್ಮಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು............
ಮನೆಯಲ್ಲಿ ಪ್ರಾರ್ಥನಾ ಮಂದಿರ!ನಗರದ ಅಜ್ಜರಕಾಡುನಲ್ಲಿ ವಾಸ್ತವ್ಯ ಕಟ್ಟಡಕ್ಕೆ ಅನುಮತಿ ಪಡೆದು ನಡೆಸಲಾಗುತ್ತಿರುವ ಪ್ರಾರ್ಥನ ಮಂದಿರದ ಬಗ್ಗೆ ಏನು ಕ್ರಮಕೈಗೊಳ್ಳಲಾಗಿದೆ ಎಂದು ಸದಸ್ಯ ವಿಜಯ ಕೊಡವೂರು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಕಂದಾಯ ಅಧಿಕಾರಿ, ಚರ್ಚ್ ಹೆಸರಿನಲ್ಲಿ 1126 ಚದರಡಿ ವಾಸ್ತವ್ಯ ಕಟ್ಟಡಕ್ಕೆ ಅನುಮತಿ ಪಡೆಯಲಾಗಿದೆ. ಆದರೆ ಕಟ್ಟಡದ ವಿಸ್ತೀರ್ಣ ನಿಗದಿತ ಪ್ರಮಾಣಕ್ಕಿಂತ ಅಧಿಕವಾಗಿದೆ ಎಂದರು.ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಶಾಸಕರು, ಹಿಂದಿನ ದಾಖಲೆಯಲ್ಲಿ ಚರ್ಚ್ ಬಗ್ಗೆ ಉಲ್ಲೇಖವಿಲ್ಲ. ಈಗ ಚರ್ಚ್ ಎಂದು ಸೇರಿಸಲಾಗಿದೆ. ಕೈಬರಹ ತಾಳೆಯಾಗುತ್ತಿಲ್ಲ. ದಾಖಲೆ ತಿದ್ದುಪಡಿ ಮಾಡಿದ್ದರೆ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದರು.
ಪೌರಾಯುಕ್ತರು 1 ವಾರದೊಳಗೆ ಮೂಲಪ್ರತಿ ದಾಖಲೆಗಳನ್ನು ಒದಗಿಸುವುದಾಗಿ ತಿಳಿಸಿದರು.