ಕಲಘಟಗಿ: ಪ್ರಸ್ತುತ ದಿನಗಳಲ್ಲಿ ಪತ್ರಿಕೋದ್ಯಮ ಹಲವಾರು ಸ್ಥರಗಳಲ್ಲಿ ಬದಲಾವಣೆ ಪಡೆದುಕೊಂಡಿದೆ. ಹೊಸ ಹೊಸ ತಂತ್ರಜ್ಞಾನಗಳು ಮಾದ್ಯಮರಂಗ ಪ್ರವೇಶಿಸುತ್ತಿರುವುದರಿಂದ ಸಾಂಪ್ರದಾಯಿಕ ಪತ್ರಿಕೋದ್ಯಮದಲ್ಲಿ ಸಾಕಷ್ಟು ಬದಲಾವಣೆಯಾಗುತ್ತಿದೆ ಎಂದು ಧಾರವಾಡ ಕವಿವಿ ಪ್ರತಿಕೋದ್ಯಮ ವಿಭಾಗದ ಪ್ರಾಧ್ಯಾಪಕ ಡಾ. ಸಂಜಯ ಮಾಲಗತ್ತಿ ಅಭಿಪ್ರಾಯ ಪಟ್ಟರು.
ಜನಾಭಿಪ್ರಾಯ ಬಿಂಬಿಸುವುದೇ ಪತ್ರಿಕೋದ್ಯಮದ ಮೂಲ ಉದ್ದೇಶ.. ಪತ್ರಕರ್ತರು ಸತ್ಯವನ್ನು ಮರೆಮಾಚಿ ಸುದ್ದಿ ಮಾಡಿದರೆ ಸಾಮಾಜಿಕ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಪತ್ರಿಕೋದ್ಯಮ ಬಹಳ ಮಹತ್ವದ ಕ್ಷೇತ್ರ. ಸಮಾಜದ ಮೇಲೆ ನಿಜವಾಗಿಯೂ ಕಳಕಳಿ ಇರುವವರು ಪತ್ರಿಕೋದ್ಯಮ ಕ್ಷೇತ್ರಕ್ಕೆ ಬರಬೇಕಿದೆ ಎಂದು ಸಲಹೆ ನೀಡಿದರು.
ಖಡ್ಗಕ್ಕಿಂತ ಹರಿತವಾದ ಶಕ್ತಿ ಲೇಖನಿಯಲ್ಲಿದೆ. ವಸ್ತುನಿಷ್ಠ, ಸತ್ಯದ ಪರವಾಗಿ ವರದಿ ಮಾಡಿದಾಗ ಆ ಲೇಖನಿಗೆ ಶಕ್ತಿ ಬರುತ್ತದೆ. ಪತ್ರಕರ್ತರು ವರದಿ ಮಾಡುವ ಧಾವಂತದಲ್ಲಿ ತಮ್ಮ ನಿಲುವು, ಅಭಿಪ್ರಾಯಗಳನ್ನು ಪ್ರತಿಪಾದನೆ ಮಾಡುವುದು ಕಂಡುಬರುತ್ತಿದೆ. ಇದು ಆಗಬಾರದು. ಸತ್ಯವನ್ನು ಪರಾಮರ್ಶಿಸುವ ನಿಟ್ಟಿನಲ್ಲಿ ವಸ್ತುನಿಷ್ಠತೆಯುಳ್ಳ ವರದಿ ಮಾಡಬೇಕಿದೆ ಎಂದರು.ವಿಪ ಮಾಜಿ ಸದಸ್ಯ ನಾಗರಾಜ ಛಬ್ಬಿ ಮಾತನಾಡಿ, ಸರ್ಕಾರ ಮತ್ತು ಜನರ ಮಧ್ಯದ ಕೊಂಡಿಯಾಗಿ ಪತ್ರಿಕಾ ಮಾಧ್ಯಮ ಕೆಲಸ ಮಾಡುತ್ತಿದೆ. ಇತ್ತೀಚಿನ ದಿನಗಳಲ್ಲಿ ಪತ್ರಿಕೆ ಓದುವ ಸಂಪ್ರದಾಯ ಕಡಿಮೆಯಾಗುತ್ತಿರುವುದು ನೋವಿನ ಸಂಗತಿ. ಸರ್ಕಾರಗಳ ಹಳಿ ತಪ್ಪಿದಾಗ ಸರಿ ದಾರಿಗೆ ತರುವ ಕೆಲಸವನ್ನು ಪತ್ರಕರ್ತರು ಮಾಡುತ್ತಿದ್ದಾರೆ ಎಂದರು.
ಸಂಘದ ತಾಲೂಕು ಅಧ್ಯಕ್ಷ ಪ್ರಕಾಶ ಲಮಾಣಿ ಅಧ್ಯಕ್ಷತೆ ವಹಿಸಿದ್ದರು.
ಈ ವೇಳೆ ಎಸ್.ವಿ. ತಡಸಮಠ, ಸೋಮಶೇಖರ ಬೆನ್ನೂರು, ದೇವಪ್ಪ ಮೋರೆ, ಸೋಮಲಿಂಗ ಒಡೆಯರ, ವೈ.ಎನ್. ಮಂಜುನಾಥ ಮಾಳಗಿ ಪಾಟೀಲ, ಪ್ರಭಾಕರ ನಾಯಕ, ರವಿ ಬಡಿಗೇರ, ರಾಕೇಶ ಅಳಗವಾಡಿ, ಕಲ್ಲಪ್ಪ ಮಿರ್ಜಿ, ವಿರೇಶ ಹಾರೂಗೇರಿ, ಉದಯ ಗೌಡರ, ಪ್ರಕಾಶ ಧೂಪದ, ಶಶಿಕುಮಾರ ಕಟ್ಟಿಮನಿ, ಗಿರೀಶ ಮುಕ್ಕಲ್ಲ, ಉಮೇಶ ಜೋಶಿ, ವಿನಾಯಕ ಭಟ್ಟ, ಯಲ್ಲಪ್ಪ ಚವರಗಿ, ಬಸವರಾಜ ತಪ್ಪಣ್ಣವರ, ಉಳುವಪ್ಪ ಬಳಿಗೇರ ಸೇರಿದಂತೆ ಹಲವರಿದ್ದರು.